
ಬೆಂಗಳೂರು, ಜುಲೈ 27: ಮಾವ ಮತ್ತು ಅಳಿಯನ ಜಗಳದಲ್ಲಿ ಮಧ್ಯೆ ಹೋದ ಪೊಲೀಸ್ ಪೇದೆಗೆ (Constable) ಚಾಕುವಿನಿಂದ ಇರಿದ ಘಟನೆ ಚಾಮರಾಜಪೇಟೆಯ(Chamarajpet) ವಾಲ್ಮೀಕಿ ನಗರದಲ್ಲಿ ಶನಿವಾರ (ಜು.26) ರಾತ್ರಿ ನಡೆದಿದೆ. ಅಳಿಯ ತಬ್ರೇಜ್, ಮಾವ ಮೊಹಮ್ಮದ್ ಶಫೀವುಲ್ಲಾ ಮಧ್ಯೆ ಜಗಳ ನಡೆದಿತ್ತು. ತಬ್ರೇಜ್ ಪಾಷಾನು ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದನು. ಹೀಗಾಗಿ, ಶಫೀವುಲ್ಲಾ ತನ್ನ ಮಗಳಿಗೆ ಬೇರೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ಸಿಟ್ಟಾದ ತಬ್ರೇಜ್ ಮತ್ತು ಈತನ ಸಂಬಂಧಿಕರು ಶಫೀವುಲ್ಲಾ ಜೊತೆ ಜಗಳ ತೆಗೆದಿದ್ದಾರೆ. ಗಲಾಟೆಯಲ್ಲಿ ಅಳಿಯ ತಬ್ರೇಜ್ನು ಮಾವ ಶಫೀವುಲ್ಲಾಗೆ ಬಾಟಲ್‌ನಿಂದ ತಲೆಗೆ ಹೊಡೆದಿದ್ದಾನೆ.
ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹತಿ ತಿಳಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ, ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಆರೋಪಿ ತಬ್ರೇಜ್ ಡ್ಯಾಗರ್‌ನಿಂದ ಪೊಲೀಸ್ ಪೇದೆ ಸಂತೋಷ್‌ಗೆ ಇರಿದಿದ್ದಾನೆ. ಕೂಡಲೇ ಪೇದೆ ಸಂತೋಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಳಿಯ ತಬ್ರೇಜ್ ವಿರುದ್ಧ ಮಾವ ಶಫೀವುಲ್ಲಾ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳಾದ ತಬ್ರೇಜ್ ಮತ್ತು ಅಬ್ರೇಜ್ ಸೇರಿದಂತೆ ನಾಲ್ವರನ್ನು ಬಂಧಸಿದ್ದಾರೆ.
ರಾಮನಗರ: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಗ್ರಾ.ಪಂ ಮಾಜಿ ಅಧ್ಯಕ್ಷ ನಂಜೇಶ್ (45) ಮೃತ ದುರ್ದೈವಿ. ನಂಜೇಶ್ ಡಾಬಾವೊಂದರಲ್ಲಿ ಪಾರ್ಟಿ ಮಾಡುತ್ತಿದ್ದಾಗ 4-5 ಜನ ಆರೋಪಿಗಳು ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಗ್ರಾ.ಪಂ. ಮಾಜಿ ಅಧ್ಯಕ್ಷ ನಂಜೇಶ್ ಮೃತಪಟ್ಟಿದ್ದಾರೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಿಎಸ್ಐನ ಹೊಡೆತಕ್ಕೆ ಶಾಶ್ವತ ಕಿವುಡನಾದ ಮನೆ ಬಾಡಿಗೆದಾರ
ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಪ್ರಕರಣದ ಎ1 ಶ್ರೀನಿವಾಸ್ ಬಿಜೆಪಿ ಪಕ್ಷದಲ್ಲಿ ಸಕ್ರಿಯನಾಗಿದ್ದಾನೆ. ರಾಜಕೀಯ ದ್ವೇಷಕ್ಕೆ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಗ್ರಾ.ಪಂ ಮಾಜಿ ಅಧ್ಯಕ್ಷ ನಂಜೇಶ್ನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡ ಅಚ್ಚಲು ಕುಮಾರ್ ಮೇಲೆ ಕಾಂಗ್ರೆಸ್ ಮುಖಂಡ ದೊಡ್ಡಾಲಹಳ್ಳಿ ಕೃಷ್ಣಪ್ಪ ಹಾಗೂ ಸಹಚರರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಅಂತ್ಯಕ್ರಿಯೆ ನೆರವೇರಿತು.
“ಸ್ನೇಹಿತನ ಅಂತ್ಯಸಂಸ್ಕಾರಕ್ಕೆ ಬಂದಿದ್ದಕ್ಕೆ ಹೊಡೆದಿದ್ದಾರೆ. ರಾಜಕೀಯ ಬೇರೆ, ಸ್ನೇಹ ಬೇರೆ. ಈ ರೀತಿ ಮಾಡುವುದು ಏಕೆ? ಬಿಜೆಪಿ ಮುಖಂಡ, ಗ್ರಾ. ಪಂ ಸದಸ್ಯ ಅಚ್ಚಲು ಕುಮಾರ್ ಹೇಳಿದರು.
ವರದಿ: ಪ್ರದೀಪ್ ಚಿಕ್ಕಾಟಿ
Published On - 3:49 pm, Sun, 27 July 25