ಬಾಗಲಕೋಟೆ: ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿರೋಳ ಗ್ರಾಮದ ಬಳಿ ಮುಧೋಳ ಜಮಖಂಡಿ ಮಾರ್ಗ ಮಧ್ಯೆ ನಡೆದಿದೆ. ಬೆಳಗಾವಿಯಿಂದ ಕಲಬುರ್ಗಿಗೆ ಹೊರಟಿದ್ದ ಕೆಎ 38 ಎಫ್ 851 ನಂಬರ್ನ ಕೆಎಸ್ಆರ್ಟಿಸಿ ಬಸ್ ಟ್ರ್ಯಾಕ್ಟರ್ ಓವರ್‌ಟೇಕ್ ಮಾಡುವ ವೇಳೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ಘಟನೆಯಲ್ಲಿ ಗೋಟೆ ಗ್ರಾಮದಿಂದ ಧಾರವಾಡ ಕೋರ್ಟ್‌ಗೆ ಕಾರಿನಲ್ಲಿ ಹೋಗುತ್ತಿದ್ದ ಗೋಟೆ ಹಾಗೂ ಖಾಜಿಬೀಳಗಿ ಗ್ರಾಮದ ನಿವಾಸಿಗಳಾದ ಹನುಮಂತ ಗನಗಾರ(21), ರಿಯಾಜ್ ಜಾಲಗೇರಿ(25) ಬಾಲಪ್ಪ ಸೆಂಡಗಿ(34), ಸಿದ್ದರಾಯ ತೇಲಿ(36) ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮುಧೋಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.