ಬಾಂಗ್ಲಾ ಹುಡುಗಿಯರ ಕಳ್ಳಸಾಗಣೆ ಮಾಡಿ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ: ಮೂವರ ಬಂಧನ
ಬೆಂಗಳೂರಿನ ಹೊಂಗಸಂದ್ರದ ಮನೆಯೊಂದರ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸ್ಥಳೀಯ ಟೆಕ್ಕಿಯೊಬ್ಬ ಒರಿಸ್ಸಾ ಮೂಲದವರಿಬ್ಬರ ಮೂಲಕ ಬಾಂಗ್ಲಾದೇಶದ ಅಪ್ರಾಪ್ತೆಯರನ್ನು ಕಳ್ಳಸಾಗಣೆ ಮಾಡಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ. ಸದ್ಯ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರು, ಸೆಪ್ಟೆಂಬರ್ 2: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಕಳ್ಳಸಾಗಣೆ ಮಾಡುತ್ತಿರುವುದು ಮತ್ತು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಸಿಸಿಬಿ ಪೊಲೀಸರು ನಡೆಸಿದ ದಾಳಿಯಿಂದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೊಂಗಸಂದ್ರದ ಮನೆಯೊಂದರ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿ ಇಬ್ಬರು ಹುಡುಗಿಯರು ಪತ್ತೆಯಾಗಿದ್ದಾರೆ.
ದಾಳಿ ವೇಳೆ ಪತ್ತೆಯಾದ ಇಬ್ಬರೂ ಸಹ ಅಪ್ರಾಪ್ತೆಯರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಅಲ್ಲದೆ, ಅವರು ಬಾಂಗ್ಲಾ ಮೂಲದವರು ಎನ್ನಲಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಇಬ್ಬರು ಒರಿಸ್ಸಾ ಮೂಲದವರು, ಒಬ್ಬ ಸ್ಥಳೀಯ ನಿವಾಸಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಪೈಕಿ ಸ್ಥಳೀಯವನು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಸ್ಥಳೀಯ ಆರೋಪಿ ಎಳೆ ಹುಡುಗಿಯರೇ ಬೇಕು ಎಂದು ಕರೆಸಿಕೊಂಡಿದ್ದ. ಹೀಗಾಗಿ ಇನ್ನಿಬ್ಬರು ಆರೋಪಿಗಳು ಅಪ್ರಾಪ್ತೆಯರನ್ನು ಕರೆತಂದಿದ್ದರು ಎನ್ನಲಾಗಿದೆ.
ಬಾಂಗ್ಲಾದೇಶದಿಂದ ಅಪ್ರಾಪ್ತೆಯರ ಕಳ್ಳಸಾಗಣೆ
ಬಂಧಿತರ ವಿಚಾರಣೆ ವೇಳೆ, ಅಪ್ರಾಪ್ತ ಹುಡುಗಿಯರನ್ನು ಬಾಂಗ್ಲಾದೇಶದಿಂದ ಕಳ್ಳಸಾಗಣೆಮಾಡಿ ಕರೆತಂದಿದ್ದು ಪತ್ತೆಯಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 15 ಹಾಗೂ 16 ವಯಸ್ಸಿನ ಹುಡುಗಿಯರನ್ನು ಕರೆತರಲಾಗಿತ್ತು. ನಂತರ ಅವರನ್ನು ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕ ವಶಕ್ಕೆ
ಅಪ್ರಾಪ್ತೆಯರ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Mon, 2 September 24