ಚಿತ್ರದುರ್ಗ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ; ವರದಕ್ಷಿಣೆ ಕಿರುಕುಳ ನೀಡಿ ಪತಿಯಿಂದ ಹತ್ಯೆ ಆರೋಪ
ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ ಆಗಿತ್ತು. ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪಾಪಿ ಪತಿಯೇ ಹತ್ಯೆ ಮಾಡಿದ್ದಾನೆಂಬ ಆರೋಪ ಕೂಡ ಕೇಳಿ ಬಂದಿತ್ತು. ಆದರೆ ಪೊಲೀಸರು ಮಾತ್ರ ಕೇಸ್ ದಾಖಲಿಸಿಕೊಂಡಿಲ್ಲ. ಹೀಗಾಗಿ ಸಂಬಂಧಿಕರು ರಾತ್ರಿ 10ಗಂಟೆಗೆ ಎಸ್ಪಿ ಕಚೇರಿ ಬಳಿ ಧರಣಿ ನಡೆಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ: ಪತಿಯಿಂದಲೇ ಪತ್ನಿಯ ಕೊಲೆ, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ ಆರೋಪ. ಬೆಳಗ್ಗೆಯೇ ಪ್ರಕರಣ ನಡೆದಿದ್ದರೂ ರಾತ್ರಿ ಹತ್ತು ಗಂಟೆಯಾದರೂ ಕೇಸ್ ದಾಖಲಿಸದ ಪೊಲೀಸರು. ಎಸ್ಪಿ ಕಚೇರಿ ಎದುರು ಧರಣಿ. ಹೌದು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿಯ ಖಾಸಗಿ ವಾಹನ ಚಾಲಕ ಚಂದ್ರಶೇಖರ್ ಮೂರು ವರ್ಷಗಳ ಹಿಂದಷ್ಟೇ ಗೂಳಯ್ಯನಹಟ್ಟಿಯ ಗೌತಮಿ ಎಂಬುವವರ ಜೊತೆ ಮದುವೆ ಆಗಿದ್ದನು. ಸುಂದರ ಸಂಸಾರಕ್ಕೆ ಮುದ್ದಾದ ಮಗುವು ಜೊತೆ ಆಗಿತ್ತು. ಆದರೆ ಇತ್ತೀಚೆಗೆ ಚಂದ್ರಶೇಖರ್ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದನಂತೆ. ಗೌತಮಿ ತಂದೆ ಚೀಟಿ ಹಾಕಿದ್ದೇನೆ. ದುಡ್ಡು ಬಂದ ಬಳಿಕ ಕೊಡುವುದಾಗಿ ಹೇಳಿದ್ರೂ ತಾಳ್ಮೆ ಇಲ್ಲದೆ ಕಿರುಕುಳ ನೀಡಿದ್ದನಂತೆ. ಆಸ್ತಿ ಮಾರಾಟ ಮಾಡಿ ಹಣ ನೀಡುವಂತೆ ಮಾವನನ್ನೂ ಪೀಡಿಸುತ್ತಿದ್ದ ಇತನಿಗೆ ಸಂಬಂಧಿಕರು ಅನೇಕ ಸಲ ಬುದ್ಧಿವಾದ ಹೇಳಿದ್ದರು. ಆದರೆ ಇದು ಯಾವುದಕ್ಕೂ ಕೇಳದ ಚಂದ್ರಶೇಖರ್ ನಿನ್ನೆ(ಮಾ.11)ಬೆಳಗ್ಗೆ 10ಗಂಟೆ ಸುಮಾರಿಗೆ ಮಾರಕಾಸ್ತ್ರದಿಂದ ಹೊಡೆದು ಗೌತಮಿಯ ಹತ್ಯೆ ಮಾಡಿದ್ದಾನೆ.
ಇನ್ನು ಚಂದ್ರಶೇಖರ್ ಪತ್ನಿಯನ್ನ ಕೊಲೆ ಮಾಡಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. 11ಗಂಟೆ ವೇಳೆಗೆ ತುರುವನೂರು ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾನೆ ಎಂಬುದು ಮೃತಳ ಕುಟುಂಬಸ್ಥರ ಆರೋಪ. ಆದರೆ ತುರುವನೂರು ಠಾಣೆಯ ಪಿಎಸ್ಐ ವೆಂಕಟೇಶ್ ಮತ್ತು ಸಿಬ್ಬಂದಿ ಮಾತ್ರ ರಾತ್ರಿ 10ಗಂಟೆಯಾದರೂ ಕ್ಯಾರೆ ಅಂದಿಲ್ಲ. ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯ ಶವಾಗಾರದಲ್ಲಿ ಗೌತಮಿ ಶವವಿಟ್ಟು ಅರ್ಧ ದಿನವೇ ಕಳೆದರೂ ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ರೊಚ್ಚಿಗೆದ್ದ ಮೃತಳ ಸಂಬಂಧಿಕರು ಚಿತ್ರದುರ್ಗ ಎಸ್ಪಿ ಕಚೇರಿಗೆ ಆಗಮಿಸಿ ಧರಣಿ ನಡೆಸಿದರು. ತುರುವನೂರು ಪಿಎಸ್ಐ ವೆಂಕಟೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಡಿವೈಎಸ್ಪಿ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಮೃತಳ ಸಂಬಂಧಿಕರು ಧರಣಿ ವಾಪಸ್ ಪಡೆದರು.
ಇನ್ನು ಗೌತಮಿ ನೇಣಿಗೆ ಶರಣಾಗಿರುವುದಾಗಿ ಪಾಪಿ ಪತಿ ಚಂದ್ರಶೇಖರ್ ಬಿಂಬಿಸಲು ಯತ್ನಿಸುತ್ತಿದ್ದಾನೆ. ಅಂತೆಯೇ ಪೊಲೀಸರು ಸಹ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಕೇಸು ದಾಖಲಿಸದೆ ನೌಟಂಕಿ ಆಟ ಆಡುತ್ತಿದ್ದಾರೆ. ಅಸಲಿಗೆ ನೇಣು ಬಿಗಿದಿದ್ದರೆ ಕುತ್ತಿಗೆ ಭಾಗದಲ್ಲಿ ಗೆರೆ ಮಾತ್ರ ಬೀಳಬೇಕು. ಆದರೆ ಕುತ್ತಿಗೆ ಭಾಗದಲ್ಲಿ ಗಾಯಗಳು ಆಗಿದೆ, ರಕ್ತದ ಕಲೆಗಳೂ ಇವೆ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಮೃತಳ ತಂದೆಯ ಆಗ್ರಹ.
ಒಟ್ಟಾರೆಯಾಗಿ ಬಾಳಿ ಬದುಕಬೇಕಿದ್ದ ಗೌತಮಿ ಪಾಪಿ ಪತಿಯ ವರದಕ್ಷಿಣೆ ದಾಹಕ್ಕೆ ಬಲಿ ಆಗಿದ್ದಾಳೆಂಬ ಆರೋಪ ಕೇಳಿ ಬಂದಿದೆ. ನೊಂದವರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸರು ನಿರ್ಲಕ್ಷ ತೋರಿದ್ದು ಮೃತಳ ಕುಟುಂಬಸ್ಥರ ಹಿಡಿಶಾಪಕ್ಕೆ ಗುರಿ ಆಗಿದ್ದಾರೆ. ಇನ್ನಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ. ಪ್ರಕರಣದ ಕೂಲಂಕುಷ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಬೇಕಿದೆ.
ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Sun, 12 March 23