ಗೋಲ್ ಗುಂಬಜ್ ಎಕ್ಸ್‌ಪ್ರೆಸ್‌ನಲ್ಲಿ ಕಾನ್ಸ್‌ಟೇಬಲ್‌ಗೆ ಚೂರಿ ಇರಿತ: ಆರು ಮಂದಿಯ ಬಂಧನ
Golgumbaz Express: ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರಿಗೆ ಕೆಲ ಪ್ರಯಾಣಿಕರು ಚೂರಿಯಿಂದ ಹಲ್ಲೆ ನಡೆಸಿದ ಆತಂಕಕಾರಿ ಘಟನೆ ಮೈಸೂರು ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ಗೋಲ್ ಗುಂಬಜ್ ಎಕ್ಸ್‌ಪ್ರೆಸ್‌ನಲ್ಲಿ ಇತ್ತೀಚೆಗೆ ನಡೆದಿದೆ. ಇಬ್ಬರು ಆರೋಪಿಗಳನ್ನು ಸ್ಥಳದಲ್ಲಿಯೇ ಪ್ರಯಾಣಿಕರ ನೆರವಿನಿಂದ ಹಿಡಿಯಲಾಗಿದ್ದು, ನಂತರ ಆರು ಮಂದಿಯನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು, ಮಾರ್ಚ್ 1: ಮೈಸೂರು – ಬೆಂಗಳೂರು (Mysuru Bengaluru Train) ನಡುವೆ ಚಲಿಸುತ್ತಿದ್ದ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ (Golgumbaz Express) ಕಾನ್ಸ್‌ಟೇಬಲ್‌ಗೆ ಚೂರಿಯಿಂದ ಇರಿದ ಆರೋಪದ ಮೇಲೆ ಇಪ್ಪತ್ತರ ಹರೆಯದ ಆರು ಮಂದಿಯ ತಂಡವನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ, ಪ್ರಯಾಣಿಕರ ಸಹಾಯದಿಂದ ಆರೋಪಿಗಳನ್ನು ಬೆನ್ನಟ್ಟಿದ್ದ ಕಾನ್ಸ್‌ಟೇಬಲ್, ಇಬ್ಬರನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಘಟನೆಯ ನಂತರ 24 ಗಂಟೆ ಅವಧಿಯಲ್ಲಿ ಎಲ್ಲ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರ ಮೇಲೆ ಕೊಲೆ ಯತ್ನ, ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರನ ಮೇಲೆ ಹಲ್ಲೆ ಮತ್ತು ಅಕ್ರಮ ಚಟುವಟಿಕೆ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಮೊಹಮ್ಮದ್ ಇರ್ಫಾನ್ (19), ದರ್ಶನ್ (21), ಫೈಸಲ್ ಖಾನ್ (22), ಮೊಹಮ್ಮದ್ ಇಮ್ರಾನ್ (20), ಮೊಯಿನ್ ಪಾಷಾ (21), ಮತ್ತು ಮುನಿರಾಜು (24) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನವರಾಗಿದ್ದು, ದಿನಗೂಲಿ ಕಾರ್ಮಿಕರು ಎಂಬುದು ತಿಳಿದು ಬಂದಿದೆ. ಇವರು ಪಾಂಡವಪುರಕ್ಕೆ ಭೇಟಿ ನೀಡಿ ಬೆಂಗಳೂರಿಗೆ ಹಿಂತಿರುಗುತ್ತಿದ್ದರು.
ಗೋಲ್ ಗುಂಬಜ್ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದ್ದೇನು?
ಗೋಲ್ ಗುಂಬಜ್ ಎಕ್ಸ್ಪ್ರೆಸ್ನ ಎಸ್-5 ಬೋಗಿಯಲ್ಲಿ ಮಂಗಳವಾರ ಘಟನೆ ನಡೆದಿತ್ತು. ರೈಲುಗಳಲ್ಲಿ ದರೋಡೆ ಮತ್ತು ಕಳ್ಳತನದ ವರದಿಗಳ ಹಿನ್ನೆಲೆಯಲ್ಲಿ, ಎಕ್ಸ್‌ಪ್ರೆಸ್‌ನಲ್ಲಿ ಭದ್ರತೆಯ ಮೇಲ್ವಿಚಾರಣೆಗೆ ಕಾನ್‌ಸ್ಟೆಬಲ್ ಸತೀಶ್ ಚಂದ್ರ ಅವರನ್ನು ನಿಯೋಜಿಸಲಾಗಿತ್ತು. ಮಂಗಳವಾರ, ಎಸ್ -5 ಬೋಗಿಯ ವಿಶ್ರಾಂತಿ ಕೊಠಡಿಯ ಬಳಿ ಆರು ವ್ಯಕ್ತಿಗಳು ಅಡ್ಡಾಡುತ್ತಿರುವುದನ್ನು ಸತೀಶ್ ಚಂದ್ರ ಗಮನಿಸಿದರು. ಅವರಲ್ಲಿ ಇಬ್ಬರು ಫುಟ್‌ಬೋರ್ಡ್‌ನಲ್ಲಿ ಕುಳಿತು ಧೂಮಪಾನ ಮಾಡುತ್ತಿದ್ದರೆ, ಉಳಿದ ನಾಲ್ವರು ವಿಶ್ರಾಂತಿ ಕೊಠಡಿಯನ್ನು ಬಳಸುವ ಪ್ರಯಾಣಿಕರ ಕಡೆಗೆ ಅಸಭ್ಯವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದರು.
ಧೂಮಪಾನ ಮಾಡುತ್ತಿರುವುದು ಮತ್ತು ಗಲಾಟೆ ಸೃಷ್ಟಿಸಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವುದನ್ನು ಗಮನಿಸಿದ ಸತೀಶ್ ಚಂದ್ರ, ಪ್ರಯಾಣಿಕರಿಗೆ ತೊಂದರೆ ನೀಡದಂತೆ ಕೇಳಿಕೊಂಡರು. ಈ ವೇಳೆ, ಆರೋಪಿಗಳು ಹಾಗೂ ಸತೀಶ್ ಚಂದ್ರ ನಡುವೆ ಮಾತಿನ ಚಕಮಕಿ ನಡೆಯಿತು. ಆರೋಪಿಗಳು ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಬಹುದೆಂಬ ಭಯದಿಂದ ಕಾನ್ಸ್‌ಟೇಬಲ್, ರೈಲು ಸಂಜೆ 4.40 ರ ಸುಮಾರಿಗೆ ಮದ್ದೂರು ತಲುಪಲು ಕೆಲವೇ ಕ್ಷಣ ಇದ್ದಾಗ ಅವರನ್ನು ಹಿಡಿಯಲು ಪ್ರಯತ್ನಿಸಿದರು. ಮದ್ದೂರಿನಲ್ಲಿ ನೆಲೆಸಿದ್ದ ತಮ್ಮ ಸಹೋದ್ಯೋಗಿಗಳಿಗೆ ತಕ್ಷಣವೇ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದರು. ಆದರೆ, ಅಷ್ಟರಲ್ಲೇ ಅಲರ್ಟ್ ಆದ ಆರೋಪಿ ಚಾಕು ಹಿಡಿದು ಬಂದು ಸತೀಶ್ ಚಂದ್ರ ಅವರ ಬೆನ್ನಿಗೆ ಚೂರಿಯಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರು ತುಮಕೂರು ಮೆಟ್ರೋ: ಕಾರ್ಯಸಾಧ್ಯತೆ ಅಧ್ಯಯನಕ್ಕೆ ಬಿಡ್ ಆಹ್ವಾನಿಸಿದ ಬಿಎಂಆರ್ಸಿಎಲ್
ನೋವು ಮತ್ತು ರಕ್ತಸ್ರಾವದ ನಡುವೆಯೂ ಸತೀಶ್ ಚಂದ್ರ ಹಲವಾರು ಪ್ರಯಾಣಿಕರ ನೆರವಿನೊಂದಿಗೆ ಆರೋಪಿಗಳಿಬ್ಬರನ್ನು ಸದೆಬಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ಇಬ್ಬರು ಆರೋಪಿಗಳನ್ನು ಮದ್ದೂರು ಠಾಣಾಧಿಕಾರಿ ಕಚೇರಿಗೆ ಕರೆತರಲಾಗಿತ್ತು. ಸತೀಶ್ ಚಂದ್ರ ಅವರಿಗೆ ಮದ್ದೂರು ಠಾಣೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮದ್ದೂರಿನ ಕೆ.ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಮಾರ್ಚ್ 11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳ ಸಂಭಾವ್ಯ ಅಪರಾಧ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Fri, 1 March 24