ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ಚಾಕುವಿನಿಂದ ಇರಿದು ಯುವಕನ ಹತ್ಯೆ ಮಾಡಲಾಗಿರುವ ಘಟನೆ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಧ್ರುವರಾಜ್ ಅರಸ್(26) ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಪ್ರೇಯಸಿ ಮೇಲೆ ಕಣ್ಣು ಹಾಕಿದ್ದ ಯುವಕನ ಕೊಲೆ
ಇನ್ನು ಮತ್ತೊಂದು ಕಡೆ ಕಲಬುರಗಿಯಲ್ಲಿ ಪ್ರೇಯಸಿ ಮೇಲೆ ಕಣ್ಣು ಹಾಕಿದ್ದ ಯುವಕನ ಕೊಲೆ ಮಾಡಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಜಾಮಿಲ್ ಖುರೇಷಿ, ಜುನೇದ್, ಮಹ್ಮದ್ ಅಯಾನ್, ಅಬ್ರಾರ್ ಶೇಖ್‌ನನ್ನು ಕಲಬುರಗಿಯ ರಾಘವೇಂದ್ರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಜಾಮಿಲ್ ಪ್ರೇಯಸಿ ಮೇಲೆ ಸೊಹೇಲ್(20) ಕಣ್ಣಾಕಿದ್ದ. ಅಲ್ಲದೆ ಹಣಕಾಸು ವ್ಯವಹಾರ ವಿಚಾರವಾಗಿ ಜಗಳವಾಗಿ ಕೊಲೆ ನಡೆದಿದೆ. ಕಲಬುರಗಿ ನಗರದ ಮೌಲಾಲಿ ಕಟ್ಟಾ ಬಡಾವಣೆಯಲ್ಲಿ ಮಾರ್ಚ್ 31 ರಂದು ಸೊಹೇಲ್ ಕೊಲೆ ನಡೆದಿತ್ತು. ಪ್ರಕರಣ ಬೇಧಿಸಿದ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ ಯುವಕನ ಕೊಲೆ
ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಯುವಕನ ಕೊಲೆಯಾಗಿದೆ. ಚಂದ್ರು (22) ಕೊಲೆಯಾದ ಯುವಕ. ತಡರಾತ್ರಿ ಸ್ನೇಹಿತರ ಜತೆ ಊಟಕ್ಕೆ ಬಂದಾಗ ಅಪರಿಚಿತ ಯುವಕರ ಗುಂಪಿನಿಂದ ಚಂದ್ರು ಕೊಲೆಯಾಗಿದೆ. ಮೃತ ಚಂದ್ರು ಸ್ನೇಹಿತ ಸೈಮನ್ ಹುಟ್ಟುಹಬ್ಬದ ಪ್ರಯುಕ್ತ ಊಟಕ್ಕೆ ಹೊರಟ್ಟಿದ್ದರು. ಈ ವೇಳೆ ಬೈಕ್ ಟಚ್ ಆದ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಚಂದ್ರುಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮೃತ ಚಂದ್ರು ಸ್ನೇಹಿತ ಜೆಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಾಡು ಪ್ರಾಣಿಗಳ ಭೇಟೆ ಆರೋಪ ಐವರ ಬಂಧನ
ಮೈಸೂರು: ಕಾಡು ಪ್ರಾಣಿಗಳ ಬೇಟೆ ಹಿನ್ನೆಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ರವಿ, ನಾರಾಯಣ್, ಸ್ವಾಮಿ, ಸುದೀಪ್, ಪ್ರೇಮ್‌ಕುಮಾರ್ನನ್ನು ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 5 ದ್ವಿಚಕ್ರ ವಾಹನ, 2 ಒಂಟಿ ನಳಿಕೆ ಬಂದೂಕು, ಕಡವೆ ಮಾಂಸ ವಶಕ್ಕೆ ಪಡೆಯಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿಗಳ ಅರೆಸ್ಟ್
ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮಂಜುನಾಥ್(38), ಚೇತನ್ ಕುಮಾರ್(31), ದೀಪಕ್(31)ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ 10 ಸಾವಿರ ನಗದು, 3 ಮೊಬೈಲ್ ಜಪ್ತಿ ಮಾಡಲಾಗಿದೆ.
ಈಜಲು ಹೋದ ವ್ಯಕ್ತಿ ಸಾವು
ತುಮಕೂರು: ಕುಣಿಗಲ್ ತಾಲೂಕಿನ ಕನ್ನಗುಣಿ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಬೆಂಗಳೂರಿನ ರಾಜು(40) ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆ ಮುಂದೆ ನಿಂತಿದ್ದ ವೃದ್ಧೆಯ ಮಾಂಗಲ್ಯ ಸರ ದೋಚಿ ಪರಾರಿ
ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮನೆ ಮುಂದೆ ನಿಂತಿದ್ದ ವೃದ್ಧೆಯ ಮಾಂಗಲ್ಯ ಸರ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ. ಸತ್ಯವತಿ(68) ಬಳಿ 50 ಗ್ರಾಂ ಮಾಂಗಲ್ಯ ಸರ ದೋಚಿ ಪರಾರಿ. ಬೈಕ್ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕುಡಿದ ಮತ್ತಿನಲ್ಲಿ ಪುಂಡರ ಪುಂಡಾಟ; ಕಾರುಗಳ ಗಾಜು ಪುಡಿ ಪುಡಿ
ಬೆಂಗಳೂರು: ನಗರದ ನ್ಯಾನಪ್ಪನಹಳ್ಳಿಯ ಸುಗಮಾ ಬಡಾವಣೆಯಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಪುಂಡರ ಹಾವಳಿ. ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ಕಲ್ಲು ಎತ್ತಿ ಹಾಕಿ ಪುಂಡಾಟ ಮೆರೆದಿದ್ದಾರೆ. 4 ಕಾರುಗಳ ಗಾಜುಗಳು ಪುಡಿ ಪುಡಿಯಾಗಿದ್ದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 8:51 am, Tue, 5 April 22