ಬಿಯರ್ ಬಾಟಲಿಯಿಂದ ಇರಿದು ಹತ್ಯೆ, ಹಿಟ್ಟಿನ ಗಿರಣಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧ ಸುದ್ದಿಗಳು

| Updated By: ganapathi bhat

Updated on: Aug 18, 2021 | 11:02 PM

Crime News: ಬೈಕ್ ಸವಾರನ ಮೇಲೆ ಅಪರಿಚಿತರು ಗುಂಡು ಹಾರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಹೊರವಲಯದಲ್ಲಿ ನಡೆದಿದೆ. ಬೈಕ್ ಸವಾರ ಗೋವಿಂದಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಯರ್ ಬಾಟಲಿಯಿಂದ ಇರಿದು ಹತ್ಯೆ, ಹಿಟ್ಟಿನ ಗಿರಣಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧ ಸುದ್ದಿಗಳು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಬಿಯರ್ ಬಾಟಲಿಯಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಲ್ಸನ್ ಗಾರ್ಡನ್ ನಿವಾಸಿ ರವೀಂದ್ರ (55) ಎಂಬವರನ್ನು ಕೊಲೆ ಮಾಡಲಾಗಿದೆ. ಅಪರಿಚಿತರು ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಇರಿದು ಹತ್ಯೆಗೈದಿದ್ದಾರೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಟ್ಟಿನ ಗಿರಣಿಗೆ ಬಂದಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಿರಣಿ ಮಾಲೀಕ ಶಾಂತಗೌಡ ಎಂಬಾತ ಹಿಟ್ಟಿನ ಗಿರಣಿಯಲ್ಲಿ ಬಾಲಕಿ ಕೂಡಿಟ್ಟುಕೊಂಡು ಅತ್ಯಾಚಾರ ಎಸಗಿದ್ದಾನೆ. ಆತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಬೈಕ್ ಸವಾರನ ಮೇಲೆ ಅಪರಿಚಿತರು ಗುಂಡು ಹಾರಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಹೊರವಲಯದಲ್ಲಿ ನಡೆದಿದೆ. ಬೈಕ್ ಸವಾರ ಗೋವಿಂದಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಡ ಬಂದೂಕಿನಿಂದ 3 ಸುತ್ತು ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಗೋವಿಂದಪ್ಪನ ತಲೆ, ಬೆನ್ನು, ಕತ್ತು ಭಾಗದಲ್ಲಿ ಬೊಬ್ಬೆ ಗುರುತು ಕಂಡುಬಂದಿದೆ. ಗಾಯಾಳು ಗೋವಿಂದಪ್ಪರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅರೆಬೆತ್ತಲೆ ಮಾಡಿ ಮಹಿಳೆ ಮೇಲೆ ಕಿರಾತಕರಿಂದ ಹಲ್ಲೆ ಮಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿತ್ತು. ಮನೆಗೆ ನುಗ್ಗಿ ರೇಖಾ ಹರ್ತಿ ಎಂಬವರ ಮೇಲೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಜುಲೈ 27ರಂದು ಡೋಣಿ ಗ್ರಾಮದಲ್ಲಿ ನಡೆದಿದ್ದ ಘಟನೆ ಸಂಬಂಧ ಈಗಲೂ ಹಲ್ಲೆಗೊಳಗಾದ ಮಹಿಳೆ ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ. ಗೀತಾ ಸಂಕನಗೌಡ್ರ, ಶಿವನಗೌಡ ಸಂಕನಗೌಡ್ರ ಹಾಗೂ ಕಲ್ಲವ್ವ ಸಂಕನಗೌಡ್ರ, ಚಂದ್ರು, ಮಂಜುಳಾ ಪಾನಗಟ್ಟಿ, ಹೊಳಲಪ್ಪಗೌಡರ ಪಾನಗಟ್ಟಿ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ಮುಂಡರಗಿ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಾಲದು ಎಂಬಂತೆ, ಎಸ್​ಪಿ, ಡಿಐಜಿ, ಐಜಿಪಿ, ಗೃಹಸಚಿವರಿಗೆ ಪತ್ರ ಬರೆದಿದ್ದೆ. ಆದರೂ ನ್ಯಾಯ ಸಿಕ್ಕಿಲ್ಲ ಎಂದು ರೇಖಾ ಹರ್ತಿ ಕಣ್ಣೀರು ಹಾಕಿದ್ದಾರೆ.

₹20,000 ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ ಬಿದ್ದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ನಡೆದಿದೆ. ಯಸಳೂರು ಗ್ರಾಮ ಲೆಕ್ಕಿಗ ಹರಿಪ್ರಸಾದ್ ಎಂಬಾತ ಫಾರಂ ನಂಬರ್ 53ರ ಅರ್ಜಿ ಸಂಬಂಧ ಜಮೀನು ಪರಿಶೀಲನೆ ವರದಿಗೆ ರೈತರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ರೈತನಿಂದ ಲಂಚ ಸ್ವೀಕರಿಸುವಾಗ ವಿಎ ಹರಿಪ್ರಸಾದ್ ಸಿಕ್ಕಿಬಿದ್ದಿದ್ದಾನೆ. ಎಸಿಬಿ ಡಿವೈಎಸ್​ಪಿ ಪೂರ್ಣಚಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ವೈದ್ಯನನ್ನು ಹೆದರಿಸಿ ಸುಲಿಗೆ ಮಾಡಲು ಯತ್ನ ಆರೋಪಕ್ಕೆ ಸಂಬಂಧಸಿ, ಜೈ ಭಾರತ್ ಸೇನೆ ಸಂಘಟನೆ ಅಧ್ಯಕ್ಷ ಪ್ರದೀಪ್ ಅರೆಸ್ಟ್ ಮಾಡಲಾಗಿದೆ. ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಅನಾರೋಗ್ಯ ಹಿನ್ನೆಲೆ ಮಧುಗಿರಿಯ ವ್ಯಕ್ತಿ ಆಸ್ಪತ್ರೆಗೆ ದಾಖಲು ಆಗಿದ್ದ. ಚಿಕಿತ್ಸೆ ಪಡೆದು ಕನಿಷ್ಠ 10,000 ಬಿಲ್ ಪಾವತಿಸಲು ನಿರಾಕರಣೆ ಮಾಡಿದ್ದ. ಇದೇ ವಿಚಾರವಾಗಿ ಸಂಘಟನೆ ಹೆಸರಿನಲ್ಲಿ ಬಂದು ಧಮ್ಕಿ ಹಾಕಿದ್ದ. ರೋಗಿಯ ಬಳಿ ಹಣಕ್ಕೆ ಒತ್ತಡ ಹಾಕುತ್ತಿದ್ದೀಯಾ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ವೈದ್ಯ ಡಾ.ಅನ್ಸರ್ ಅಹ್ಮದ್‌ಗೆ ಬೆದರಿಕೆ ಹಾಕಿದ್ದ ಪ್ರದೀಪ್ ಈಗ ಬಂಧನಕ್ಕೆ ಒಳಗಾಗಿದ್ದಾನೆ. ವೈದ್ಯನ ದೂರು ಆಧರಿಸಿ ಪ್ರದೀಪ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೋಟಗಲ್ ಬಳಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗಾಂಜಾ ಬೆಳೆದಿದ್ದ ವ್ಯಕ್ತಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ, ಎಂಡಿಎಂಎ ಮಾತ್ರೆ ಸಾಗಿಸುತ್ತಿದ್ದ ಇಬ್ಬರ ಬಂಧನವಾಗಿದೆ. ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಈ ಕ್ರಮ ಕೈಗೊಳ್ಳಲಾಗಿದೆ. 10.536 ಕೆಜಿ ಒಣ ಗಾಂಜಾ, 5 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಒಂದು ಬೈಕ್ ಸೇರಿ ₹4.40 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Crime News: ಕತ್ತು ಸೀಳಿ ಮಗನ ಕೊಂದ ತಾಯಿ: ವಿಚಾರಣೆ ವೇಳೆ ಬಯಲಾಯ್ತು ಎರಡು ಕೊಲೆ ರಹಸ್ಯ

ಅಪರಾಧ ಸುದ್ದಿಗಳು: ಚಿತ್ರದುರ್ಗದಲ್ಲಿ ಗುಂಡು ಹಾರಿಸಿ ಬಟ್ಟೆ ವ್ಯಾಪಾರಿಯ ಹತ್ಯೆ; ದರೋಡೆಗೆ ಹೊಂಚುಹಾಕಿ ಕುಳಿತಿದ್ದ ಆರೋಪದಡಿ ಕೋಲಾರದಲ್ಲಿ ಇಬ್ಬರ ಬಂಧನ