Crime Update: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ, ಬೆಂಗಳೂರಿನಲ್ಲಿ ಮಾದಕ ಹ್ಯಾಶ್​ ಆಯಿಲ್ ವಶಕ್ಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಮಾಕಳಿ ಗೋದಾಮಿನಲ್ಲಿ ತುಪ್ಪ ಸಂಗ್ರಹಿಸಿ ಡೀಲ್​ಶೇರ್ ಆ್ಯಪ್ ಮೂಲಕ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದರು

Crime Update: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ, ಬೆಂಗಳೂರಿನಲ್ಲಿ ಮಾದಕ ಹ್ಯಾಶ್​ ಆಯಿಲ್ ವಶಕ್ಕೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 21, 2021 | 11:03 PM


ಬೆಂಗಳೂರು: ಹೊಸ ವರ್ಷ ಸ್ವಾಗತಕ್ಕೆಂದು ನಡೆಯುವ ಪಾರ್ಟಿಗಳಲ್ಲಿ ಬಳಸಲು ಮಾದಕ ಹ್ಯಾಶ್ ಆಯಿಲ್ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬೆಂಗಳೂರಿನ ಮೈಕೊಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಪ್ರಕಾಶ್, ಧ್ಯಾಮ್ ರಾಜ್ ಬಂಧಿತರು. ಬಂಧಿತರಿಂದ ₹ 6 ಕೋಟಿ ಮೌಲ್ಯದ 5 ಲೀಟರ್ ಹ್ಯಾಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಬಿಟಿಎಂ ಲೇಔಟ್​ನ ಅಪಾರ್ಟ್​ಮೆಂಟ್​ನಲ್ಲಿ ಒಡಿಶಾದಿಂದ ತಂದಿದ್ದ ಹ್ಯಾಶ್​ ಆಯಿಲ್ ಸಂಗ್ರಹಿಸಿದ್ದರು.

ನಕಲಿ ನಂದಿನಿ ತುಪ್ಪ
ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಸಂಗ್ರಹಿಸಿ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದ ಜಾಲವನ್ನು ಕೆಎಂಎಫ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಡೀಲ್​ಶೇರ್ ಆ್ಯಪ್ ಮೂಲಕ ನಕಲಿ ತುಪ್ಪ ಮಾರಲಾಗುತ್ತಿತ್ತು. ಬೆಂಗಳೂರು ಉತ್ತರ ತಾಲ್ಲೂಕಿನ ಮಾಕಳಿ ಗೋದಾಮಿನಲ್ಲಿ ತುಪ್ಪ ಸಂಗ್ರಹಿಸಿ ಡೀಲ್​ಶೇರ್ ಆ್ಯಪ್ ಮೂಲಕ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದರು. ಕೆಎಂಎಫ್ ನಿರ್ದೇಶಕ ಜಯರಾಮ್, ಅನಸೂಯ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು 270 ಬಾಕ್ಸ್​ಗಳಲ್ಲಿ ಸಂಗ್ರಹಿಸಿದ್ದ ₹ 15 ಲಕ್ಷ ಮೌಲ್ಯದ ನಕಲಿ ತುಪ್ಪ ಜಪ್ತಿ ಮಾಡಿದ್ದಾರೆ.

ಶಿವಾಜಿ ಪ್ರತಿಮೆಗೆ ಮಸಿ: ಪೊಲೀಸರ ವಶಕ್ಕೆ ಆರೋಪಿಗಳು
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿ ಬೆಂಗಳೂರಿನ 39ನೇ ಎಸಿಎಂಎಂ ನ್ಯಾಯಾಲಯದ ಆದೇಶ ಹೊರಡಿಸಿದೆ. ಸದಾಶಿವನಗರದ ಭಾಷ್ಯಂ ಸರ್ಕಲ್ ಬಳಿಯಿರುವ ಶಿವಾಜಿ ಪ್ರತಿಮೆಗೆ ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರಾದ ಚೇತನ್ ಗೌಡ, ನವೀನ್ ಗೌಡ, ಗುರುದೇವ್ ನಾರಾಯಣ್ ಮಸಿಬಳಿದಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಏಳು ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಮೂವರನ್ನು ಇದೀಗ ಸದಾಶಿವನಗರ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ನಗ ದೋಚಿ ಪರಾರಿಯಾಗಿದ್ದ ಪತ್ನಿ ಚೆನ್ನೈನಲ್ಲಿ ಪತ್ತೆ
ನೆಲಮಂಗಲ: ಮದುವೆಯಾದ 15 ದಿನದಲ್ಲೇ ಪತಿ ಮನೆಯಿಂದ ನಗ-ನಾಣ್ಯ ದೋಚಿ ಪರಾರಿಯಾಗಿದ್ದ ಸೋನಿಯಾ ಎಂಬಾಕೆಯನ್ನು ಬಾಗಲಕುಂಟೆ ಪೊಲೀಸರು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪತ್ತೆ ಮಾಡಿದ್ದಾರೆ. ಮದುವೆಯಾದ 15 ದಿನಗಳಲ್ಲಿ ₹ 1.5 ಲಕ್ಷ ನಗದು ಮತ್ತು 50 ಗ್ರಾಮ್ ಚಿನ್ನದೊಂದಿಗೆ ಸೋನಿಯಾ ಪರಾರಿಯಾಗಿದ್ದಳು ಎಂದು ಆಕೆಯ ಪತಿ ಬಾವರ್​ಲಾಲ್ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದ. ಸೋನಿಯಾಗೆ ಸಹಕರಿಸಿದ್ದ ಸೋನಾರಾಮ್ ಮತ್ತು ಮಂಜುಳಾ ಎನ್ನುವವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮದುವೆ ಬಳಿಕ ವಂಚಿಸುವ ಜಾಲ ಇರಬಹುದು ಎಂಬ ಶಂಕೆಯ ಮೇಲೆ ವಿಚಾರಣೆ ನಡೆಸುತ್ತಿದ್ದಾರೆ.

ಐವರು ಟಿಪ್ಪರ್ ಕಳ್ಳರ ಬಂಧನ
ವಿಜಯಪುರ: ನಗರದಲ್ಲಿ ಟಿಪ್ಪರ್ ಕಳ್ಳತನ ಮಾಡುತ್ತಿದ್ದ ಐವರನ್ನು ಆದರ್ಶ ನಗರ ಪೊಲೀಸರು ಬಂಧಿಸಿದ್ದಾರೆ. ವಿಜಯಪುರದ ರವಿ ಜಾಯಗೊಂಡ, ಶಿವಾನಂದ ಕಾಲೇಬಾಗ್, ಶ್ರೀಶೈಲ ಗಾಂಜಿ, ಮಹಾರಾಷ್ಟ್ರದ ಸೊಲ್ಲಾಪುರದ ಗೌರೀಶ ಚೌಗುಲೆ, ಇಕ್ರಾರ್ ನಾಯಕವಾಡಿ ಬಂಧಿತರು. ಬಂಧಿತರಿಂದ ಟಿಪ್ಪರ್​​ಗಳ 12 ಟೈರ್, 2 ಡೀಸೆಲ್ ಟ್ಯಾಂಕ್, ಕೃತ್ಯಕ್ಕೆ ಬಳಸಿದ ಟಾಟಾ ಸುಮೊ, ಟಿಪ್ಪರ್ ಮಾರಾಟ ಮಾಡಿ ಬಂದ ₹ 1.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಐಟಿ ದಾಳಿ
ಬೆಂಗಳೂರು: ನಗರ ಸೇರಿದಂತೆ ದೇಶದ 6 ನಗರಗಳ 30 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆಸಿ, ಆದಾಯ ತೆರಿಗೆ ವಂಚನೆ ಮಾಡಿದ ಅನುಮಾನದ ಮೇಲೆ ಶೋಧ ನಡೆಸಿದರು. ಲಖನೌ, ಮೈನ್​​ಪುರಿ, ಮೌ ನಗರ, ಕೋಲ್ಕತ್ತಾ, ಬೆಂಗಳೂರು, ದೆಹಲಿ ಎನ್​ಸಿಆರ್​ ಸೇರಿದಂತೆ 30 ಕಡೆ ಈ ಕಾರ್ಯಾಚರಣೆ ನಡೆಯಿತು.

ಎಸಿಬಿ ಬಲೆಗೆ ಶಸ್ತ್ರಚಿಕಿತ್ಸಕ
ಆಸ್ಪತ್ರೆಗೆ ವಿವಿಧ ಉತ್ಪನ್ನಗಳನ್ನು ಪೂರೈಸಿದ್ದ ಸರಬರಾಜುದಾರರೊಬ್ಬರಿಂದ ಲಂಚ ಪಡೆಯುವಾಗ ಕೋಲಾರ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಮತ್ತು ಆಡಳಿತಾಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳ ಬಲೆಗೆ ಸಿಲುಕಿದ್ದಾರೆ. ಕೊರೊನಾ ಪಿಡುಗು ವ್ಯಾಪಿಸಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ಪೂರೈಸಿದ್ದ ತಟ್ಟೆ-ಲೋಟಗಳ ಬಿಲ್ ಚುಕ್ತ ಮಾಡಲು ಇವರು ₹ 25 ಸಾವಿರ ಲಂಚ ಕೇಳಿದ್ದರು ಎಂದು ದೂರಲಾಗಿದೆ. ಲಂಚದ ಆರೋಪದ ಮೇಲೆ ಕೋಲಾರ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರವಿಕುಮಾರ್ ಮತ್ತು ಜಿಲ್ಲಾಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಗೋಪಾಲಕೃಷ್ಣ ಬಲೆಗೆ ಬಿದ್ದಿದ್ದಾರೆ.

ಅಪಘಾತದಲ್ಲಿ: ತಾಯಿ-ಮಕ್ಕಳ ಸಾವು, ಚಾಲಕನಿಗೆ ಧರ್ಮದೇಟು
ಹಾಸನ: ಪಾನಮತ್ತ ಚಾಲಕನ ನಿರ್ಲಕ್ಷ್ಯದಿಂದ ತಾಯಿ, ಮಕ್ಕಳ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕನನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಹಾಸನದಲ್ಲಿ ನಡೆದಿದೆ. ಡಿ.19ರಂದು ಹಾಸನದ ರಿಂಗ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತಾಯಿ ಜ್ಯೋತಿ, ಅವಳಿ ಮಕ್ಕಳಾದ ಪ್ರಣತಿ, ಪ್ರಣವ್​ ಮೃತಪಟ್ಟಿದ್ದರು. ಅಪಘಾತದ ಬಳಿಕ ಪರಾರಿಯಾಗುವ ವೇಳೆ 3 ಬೈಕ್​ಗೆ ಡಿಕ್ಕಿ ಹೊಡೆಸಿದ್ದ ಚಾಲಕನನ್ನು ಹಿಡಿದು ಜನರು ಪೊಲೀಸರಿಗೆ ಒಪ್ಪಿಸಿದ್ದರು.

ಬಸ್​ ನಿಲ್ದಾಣದಲ್ಲಿ ಅತ್ಯಾಚಾರಕ್ಕೆ ಯತ್ನ
ಗದಗ: ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅಪರಿಚಿತ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಗದಗ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್​ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಹೊತ್ತೊಯ್ದ ಅಪರಿಚಿತ ಅತ್ಯಾಚಾರಕ್ಕೆ ಯತ್ನಿಸಿದ್ದ. ತಪ್ಪಿಸಿಕೊಂಡು ಬಂದ ಮಹಿಳೆ ಸಾರಿಗೆ ನಿಗಮದ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದರು. ಪೊಲೀಸರು ಬೇಜವಾಬ್ದಾರಿಯಿಂದ ಉತ್ತರಿಸಿದ್ದರಿಂದ ಮಹಿಳೆಯು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: Bengaluru Crime: ಹಣಕ್ಕಾಗಿ ಪ್ರೇಯಸಿಯನ್ನೇ ಹತ್ಯೆ ಮಾಡಿದ್ದ ಆರೋಪಿ ಬಂಧನ
ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada