Cyber Crime: ಬೆಂಗಳೂರಿನ ಟೆಕ್ಕಿಗೆ ಬಂದ ಆ ಒಂದು ಕರೆಯ ಬೆಲೆ ಬರೋಬ್ಬರಿ 2.24 ಕೋಟಿ ರೂ.!
ಸ್ಕೈಪ್ ಆ್ಯಪ್ನಲ್ಲಿ ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡ, ಪೊಲೀಸ್ ಸಮವಸ್ತ್ರದಂತೆಯೇ ಕಾಣುವ ದಿರಿಸು ಧರಿಸಿದ್ದ ವ್ಯಕ್ತಿ, ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ಕೂಡ ಇದೆ. ಸಿಬಿಐನವರು ಈ ಬಗ್ಗೆ ವಿಚಾರಣೆ ಮಾಡುತ್ತಾರೆ ಎಂದು ಹೆದರಿಸಿದ್ದ. ಭೀತಿಗೊಳಗಾದ ಟೆಕ್ಕಿ ಆರೋಪಿ ಹೇಳಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು.
ಬೆಂಗಳೂರು, ಏಪ್ರಿಲ್ 11: ಆನ್ಲೈನ್ ವಂಚನೆಗೆ (Online Fraud) ಗುರಿಯಾಗಿ ಬೆಂಗಳೂರಿನ ಮಹಿಳೆಯೊಬ್ಬರು 14 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತ ಕಳೆದುಕೊಂಡಿದ್ದ ಘಟನೆಯ ನೆನಪು ಮಾಸುವುದಕ್ಕೂ ಮುನ್ನವೇ ಅಂಥದ್ದೇ ಒಂದು ವಿದ್ಯಮಾನ ಮರುಕಳಿಸಿದೆ. ಪರಿಣಾಮವಾಗಿ ಬೆಂಗಳೂರಿನ (Bangalore) ಟೆಕ್ಕಿಯೊಬ್ಬರು 2.24 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಇದರೊಂದಿಗೆ, ನಗರದಲ್ಲಿ ಸೈಬರ್ ಕ್ರೈಂ (Cyber Crime) ಪ್ರಕರಣಗಳು ಹೆಚ್ಚಾಗುತ್ತಿರುವುದು ದೃಢಪಟ್ಟಿದೆ.
ಅಮೃತಹಳ್ಳಿ ಭಾಗದ ಟೆಕ್ಕಿಯೊಬ್ಬರಿಗೆ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ‘ನಿಮ್ಮ ಏರ್ ಪಾರ್ಸಲ್ ದೆಹಲಿಯ ಕಸ್ಟಮ್ಸ್ನಲ್ಲಿ ಸೀಜ್ ಮಾಡಲಾಗಿದೆ. ಅದರಲ್ಲಿ ನಿಮ್ಮ ಹೆಸರಿನ ನಕಲಿ ಪಾಸ್ ಪೋರ್ಟ್, ಬ್ಯಾಂಕ್ ಎಟಿಎಂ ಕಾರ್ಡ್ಗಳು, ಎಂಡಿಎಂಎ ಡ್ರಗ್ಸ್ ಇದೆ’ ಎಂದು ಸುಳ್ಳು ಹೇಳಿದ್ದ.
ಮುಂದುವರಿದು, ಈ ವಿಚಾರ ಆ್ಯಂಟಿ ನಾರ್ಕೊಟಿಕ್ ಬ್ಯೂರೊಗೆ ತಿಳಿದಿದೆ. ಹಾಗಾಗಿ ದೂರು ದಾಖಲು ಮಾಡಬೇಕು ಎಂದಿದ್ದ. ದೂರು ನೀಡಲು ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಆರೋಪಿ ಸೂಚನೆ ನೀಡಿದ್ದ. ಇದನ್ನು ನಂಬಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿದ ಟೆಕ್ಕಿ ಅದರ ಮೂಲಕ ದೂರು ನೀಡಲು ಆರೋಪಿ ಹೇಳಿದಂತೆಯೇ ಮಾಡಿದ್ದಾರೆ.
ಸ್ಕೈಪ್ ಆ್ಯಪ್ನಲ್ಲಿ ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡ, ಪೊಲೀಸ್ ಸಮವಸ್ತ್ರದಂತೆಯೇ ಕಾಣುವ ದಿರಿಸು ಧರಿಸಿದ್ದ ವ್ಯಕ್ತಿ, ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ಕೂಡ ಇದೆ. ಸಿಬಿಐನವರು ಈ ಬಗ್ಗೆ ವಿಚಾರಣೆ ಮಾಡುತ್ತಾರೆ ಎಂದು ಹೆದರಿಸಿದ್ದ. ಕೊನೆಗೆ ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಹಣ ನೀಡುವಂತೆ ಕೇಳಿದ್ದ. ಜೊತೆಗೆ ಕೆಲವೊಂದು ಅಕೌಂಟ್ ನಂಬರ್ಗಳನ್ನೂ ನೀಡಿದ್ದ.
ಆರೋಪಿ ಮಾತು ನಂಬಿದ ಟೆಕ್ಕಿ ಹಂತ ಹಂತವಾಗಿ 8 ಖಾತೆಗೆಗಳಿಗೆ ಒಟ್ಟು 2,42,05,000 ರೂ. ವರ್ಗಾವಣೆ ಮಾಡಿದ್ದಾರೆ. ಕೆಲ ದಿನಗಳ ನಂತರ ಟೆಕ್ಕಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಸದ್ಯ ಈ ಬಗ್ಗೆ ಈಶಾನ್ಯ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ವಿಡಿಯೋ ಕಾಲ್ನಲ್ಲಿ ಬೆಂಗಳೂರು ಮಹಿಳೆಯ ಬೆತ್ತಲಾಗಿಸಿ 14.57 ಲಕ್ಷ ರೂ. ಎಗರಿಸಿದ ಸೈಬರ್ ವಂಚಕರು!
ಕೆಲ ದಿನಗಳ ಹಿಂದೆ ಬೆಂಗಳೂರಿನ ಮಹಿಳೆಯೊಬ್ಬರು ಇದೇ ತರ ಮೋಸಹೋಗಿದ್ದರು. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚಕರು ವಿಡಿಯೋ ಕಾಲ್ನಲ್ಲಿ ಮಹಿಳೆಯನ್ನು ವಿವಸ್ತ್ರಗೊಳ್ಳುವಂತೆ ಸೂಚಿಸಿದ್ದಲ್ಲದೆ, ಆ ವಿಡಿಯೋವನ್ನು ರೆಕಾರ್ಡ್ ಮಾಡಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದರು. ಪರಿಣಾಮವಾಗಿ ಆಕೆ 14.57 ಲಕ್ಷ ರೂ. ಕಳೆದುಕೊಂಡಿದ್ದರು.
(ವರದಿ: ಪ್ರದೀಪ್, ಟಿವಿ9)
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Thu, 11 April 24