ಎಚ್ಚರ ಎಚ್ಚರ: ಕರ್ನಾಟಕದಲ್ಲಿ ಅಮಲು ಬರುವ ಸಿರಪ್ ಮಾರಾಟ ಗ್ಯಾಂಗ್ ಪತ್ತೆ
ಅಮಲು ಬರುವ ಸಿರಪ್ಗಳನ್ನ ಅಕ್ರಮವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ನ ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 1.24 ಲಕ್ಷ ರೂಪಾಯಿ ಮೌಲ್ಯದ ಸಿರಪ್ ಹಾಗೂ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಹು ದಿನಗಳಿಂದ ಈ ಕೃತ್ಯ ನಡೆಸಿಕೊಂಡು ಬಂದಿರೋದು ತನಿಖೆ ವೇಳೆ ಗೊತ್ತಾಗಿದೆ.

ದಾವಣಗೆರೆ, ಅಕ್ಟೋಬರ್ 14: ಕೆಮ್ಮಿನ ಸಿರಪ್ನಿಂದಾಗಿ ಮಕ್ಕಳ ಸರಣಿ ಸಾವಿನ ಘಟನೆ ಮಾಸುವ ಮುನ್ನವೇ ಅಮಲು ಬರುವ ಸಿರಪ್ಗಳನ್ನ ಅಕ್ರಮವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ನ ದಾವಣಗೆರೆಯಲ್ಲಿ (Davanagere) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಘಟನೆ ಸಂಬಂಧ ಐವರು ಆರೋಪಿಗಳನ್ನ ಬಂಧಿಸಲಾಗಿದ್ದು, ಬಂಧಿತರಿಂದ 1.24 ಲಕ್ಷ ರೂಪಾಯಿ ಮೌಲ್ಯದ ಸಿರಪ್ ಹಾಗೂ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ವಿದ್ಯಾವಂತರ ನಗರ ಎಂದು ಖ್ಯಾತಿ ಪಡೆದಿರೋ ದಾವಣಗೆರೆಯಲ್ಲಿ ಇಂತಹ ಘಟನೆ ನಡೆದಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಮಲು ಬರುವ ಸಿರಪ್ ಬಾಟಲ್ಗಳನ್ನ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಯುವಕರನ್ನ ಟಾರ್ಗೆಟ್ ಮಾಡಿ, ವೈದ್ಯರ ಸಲಹೆ ಇಲ್ಲದೆ ಹೆಚ್ಚಿನ ಬೆಲೆಗೆ ಸಿರಪ್ ಮಾರುತ್ತಿದ್ದ ತಂಡವನ್ನ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದ ಮಾದಕ ದ್ರವ್ಯ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಬಂಧಿತರನ್ನು ನಗರದ ಎಸ್ಪಿಎಸ್ ನಗರದ ನಿವಾಸಿ ಶಿವಕುಮಾರ್, ಮಹಬೂಬ್ ನಗರದ ನಿವಾಸಿ ಅಜಿಮುದ್ದೀನ್, ದೇವರಾಜ ಅರಸ್ ಬಡಾವಣೆಯ ಮಹಮದ್ ಶಾರೀಕ್, ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಸೈಯದ್ ಬಾಬು ಅಲಿಯಾಸ್ ಯೂನೂಸ್ ಹಾಗೂ ಚನ್ನಗಿರಿ ಟೌನ್ ನಿವಾಸಿ ಅಬ್ದುಲ್ ಗಫರ್ ಎಂದು ಗರುತಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಶಾಲಾ ಕಟ್ಟಡದಿಂದ ಹಾರಿ 17 ವರ್ಷದ ಬಾಲಕ ಸಾವು
ಆರೋಪಿಗಳು ಬಹು ದಿನಗಳಿಂದ ಈ ಕೃತ್ಯ ನಡೆಸಿಕೊಂಡು ಬಂದಿರೋದು ತನಿಖೆ ವೇಳೆ ಗೊತ್ತಾಗಿದೆ. ಬಂಧಿತರಿಂದ 100 ಎಂ.ಎಲ್.ನ ಒಟ್ಟು 340 Broncof-C cough Syrup ಬಾಟಲ್, Edex Cd Syrupನ 15 ಬಾಟಲ್, 20 ಸಣ್ಣ ಬಾಕ್ಸ್ಗಳಲ್ಲಿದ್ದ Aceclofenac + paracetamol + serratiopeptidase ಮಾತ್ರೆಗಳು ಸೇರಿ 1200 ನಗದನ್ನ ವಶ ಪಡಿಸಿಕೊಳ್ಳಲಾಗಿದೆ. ಕೂಲಿ ಕಾರ್ಮಿಕರು ಮತ್ತು ಬಡವರ ಮಕ್ಕಳೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಇಂತಹ ಸಿರಪ್ಗಳ ಮಾರಾಟ ಮೆಡಿಕಲ್ಗಳಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿದ್ದು, ಅವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:45 pm, Tue, 14 October 25