Crime News: ವರದಕ್ಷಿಣೆ, ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಪತ್ನಿಯನ್ನೇ ಕೊಂದ ಪತಿ

| Updated By: ವಿವೇಕ ಬಿರಾದಾರ

Updated on: Jan 01, 2023 | 7:04 PM

ಗದಗ ತಾಲೂಕಿನ ಬೆಳಹೊಡ ಗ್ರಾಮದಲ್ಲಿ ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಂಡತಿಯನ್ನು ಪತಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

Crime News: ವರದಕ್ಷಿಣೆ, ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಪತ್ನಿಯನ್ನೇ ಕೊಂದ ಪತಿ
ಸ್ಪಿ ಬಾಬಾಸಾಹೇಬ ನೇಮಗೌಡ, ಘಟನೆ ನಡೆದ ಗ್ರಾಮ ಬೆಳಹೊಡ
Follow us on

ಗದಗ: ಅದು ಬಡತನದಲ್ಲೂ ಸುಖ ಜೀವನ ನಡೆಸುತ್ತಿದ್ದ ಜೋಡಿ. ಬೆಚ್ಚನೆ ಮನೆ ಇರಲು, ವೆಚ್ಚಕೆ ಹೊನ್ನಿರಲು, ಇಚ್ಚೆಯನರಿವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂಬ ಸರ್ವಜ್ಞ ಎಂಬ ಮಾತಿನಿಂತೆ ಇವರ ಜೀವನ ಸಾಗುತ್ತಿತ್ತು. ಈ ಜೋಡಿ 2 ವರ್ಷದ ಸುಖವಾಗಿಯೇ ಇತ್ತು. ಹಾಗೆ ದಂಪತಿಗೆ 1 ಮುದ್ದಾದ ಮಗು ಕೂಡ ಇದೆ. ಕುಟುಂಬ ಹೀಗೆಯೇ ಇದ್ದರೆ ಎಲ್ಲವು ಚೆನ್ನಾಗಿರುತ್ತಿತ್ತು. ಆದರೆ ಮೋಹದ ಮಾಯೆ ಇಡೀ ಕುಟುಂಬವನ್ನೇ ಹಾಳು ಮಾಡಿದೆ. ಹೌದು ಪಾಪಿ ಪತಿ ಪರಸ್ತ್ರೀ ಮೋಹಕ್ಕೆ ಬಿದ್ದು, ತನ್ನ ಮುದ್ದಾದ ಹೆಂಡತಿಯನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

6 ವರ್ಷ 8 ತಿಂಗಳ ಹಿಂದೆ ಗದಗ ತಾಲೂಕಿನ ಬೆಳಹೊಡ ಗ್ರಾಮದ ಬಸವರಾಜ್ ಹೊಸಳ್ಳಿ ಜೊತೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಾಗಮ್ಮಳ ವಿವಾಹವಾಗಿತ್ತು. ಮದುವೆಯಲ್ಲಿ ವರದಕ್ಷಿಣೆ, ಬಂಗಾರ ಕೊಟ್ಟು ಅದ್ಧೂರಿಯಾಗಿ ಮಾಡಿದ್ದಾರೆ. 2 ವರ್ಷ ಬಸವರಾಜ್, ನಾಗಮ್ಮನ ಸಂಸಾರ ಆನಂದ ಸಾಗರದಲ್ಲೇ ಇತ್ತು. ಇದಕ್ಕೆ ಸಾಕ್ಷಿ ಎಂಬಂತೆ ಈಗ ಒಂದೂವರೆ ವರ್ಷದ ಮಗು ಇದೆ. ಆದರೆ, ಮದುವೆ ಆದ 2 ವರ್ಷದ ಬಳಿಕ ಪಾಪಿ ಪತಿ ಬಸವರಾಜ್​ನಿಗೆ ಹಣದ ದಾಹ ಹೆಚ್ಚಾಗಿದೆ. ಹೀಗಾಗಿ ಪತ್ನಿ ನಾಗಮ್ಮನಿಗೆ ನಿತ್ಯವೂ ಹಣಕ್ಕಾಗಿ ಚಿತ್ರಹಿಂಸೆ ನೀಡುತ್ತಿದ್ದನಂತೆ. ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ನಿತ್ಯವೂ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ನಾಗಮ್ಮ ವಿಷಯವನ್ನು ತವರು ಮನೆಯಲ್ಲಿ ಹೇಳಿದಾಗ, ತವರು ಮನೆಯವರು 50 ಸಾವಿರ ರೂ ಹಣ ಕೂಡ ಕೊಟ್ಟಿದ್ದರಂತೆ. ಆದರೂ ಧನದಾಹಿಗೆ ತೃಪ್ತಿಯಾಗಿಲ್ಲ. ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸಿ ಜಗಳ ಮಾಡಿದ್ದಾನಂತೆ.

ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಮಿಸ್ ಫೈರಿಂಗ್: ಓರ್ವ ಸಾವು

ಡಿಸೆಂಬರ್ 24/ 2022 ರಂದು ಬೆಳಗ್ಗೆ ನಾಗಮ್ಮ, ತಾಯಿ ಸಾವಕ್ಕಗೆ ಫೋನ್ ಮಾಡಿ ನಾನು ನನ್ನ ಮಗನನ್ನು ನಿನಗೆ ತೋರಿಸುತ್ತೇನೆ ಎಂದಿದ್ದಳಂತೆ. ಅಷ್ಟೇ ಅಲ್ಲ ನಿನ್ನ ಜೊತೆ ನಾನು ವಿಡಿಯೋ ಕಾಲ್ ಮಾಡಿ ಮಾತನಾಡಬೇಕು ಎಂದಿದ್ದಳಂತೆ. ಆಗ ತಾಯಿ ಸಾವಕ್ಕ ನನ್ನ ಫೋನ್​ಗೆ ಕರೆನ್ಸಿ ಹಾಕು ಅಂತ ಹೇಳಿ ಮಾತು ಮುಗಿಸಿದ್ದಾಳೆ. ಇದಾದ ಅರ್ಧ ಗಂಟೆ ಕಳೆಯುವಷ್ಟರಲ್ಲಿ ನಾಗಮ್ಮನ ಮನೆಯಿಂದ ವಾಪಸ್ ಫೋನ್ ಬಂದಿದ್ದು, ನಿಮ್ಮ ಮಗಳು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಅಂತ ಸುದ್ದಿ ತಿಳಿಸಿದ್ದಾರೆ.

ಇದರಿಂದ ನಾಗಮ್ಮನ ತವರು ಮನೆಯವರಿಗೆ ಬರಸಿಡಿಲು ಬಡಿದಂತಾಗಿ, ಅರೆ ಅರ್ಧಗಂಟೆ ಹಿಂದೆನೇ ಮಾತಾಡಿದ ಮಗಳು ಈಗ ಸಾವನ್ನಪ್ಪಿದ್ದಾಳೆಂದರೆ ಹೇಗೆ ಎಂದು ಆಶ್ಚರ್ಯವಾಗಿದೆ. ನಂತರ ತವರು ಮನೆಯವರು ಓಡೋಡಿ ಮಗಳ ಮನೆಗೆ ಬಂದು ನೋಡಿದಾಗ, ಮಗಳು ಬಾರದ ಲೋಕಕ್ಕೆ ತೆರಳಿದ್ದಳು. ನಂತರ ಸೂಕ್ಷ್ಮವಾಗಿ ಮಗಳ ದೇಹವನ್ನು ನಾಗಮ್ಮನ ತವರು ಮನೆಯವ ಗಮನಿಸಿದಾಗ ಮಗಳ ಮೈಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ ! ಆಗಲೇ ಇದು ಆತ್ಮಹತ್ಯೆ ಅಲ್ಲ ಕೊಲೆ ಅನ್ನೋ ಅನುಮಾನ ತವರು ಮನೆಯವರಿಗೆ ಮೂಡಿದೆ. ನಮ್ಮ ಮಗಳನ್ನು ಹೊಡೆದು ಕೊಂದಿದ್ದಾರೆ. ಬಳಿಕ ನೇಣು ಹಾಕಿ ನಾಟಕವಾಡಿದ್ದಾರೆ ಅಂತ ನಾಗಮ್ಮಳ ತವರು ಮನೆಯವರು ಆರೋಪಿಸಿದ್ದಾರೆ.

ಇದನ್ನೂ ಓದಿ:  ಮೂರು-ವರ್ಷದ ಮಗಳನ್ನು ನೋಡಿಕೊಳ್ಳಲು ಆಕೆ ಒಬ್ಬ ಬೇಬಿಸಿಟ್ಟರ್​ಳನ್ನು ಗೊತ್ತುಮಾಡಿಕೊಂಡಳು, ಆದರೆ ಮನೆಯಲ್ಲಿ ನಡೆದಿದ್ದೇ ಬೇರೆ!

ಪಾಪಿ ಬಸಪ್ಪ ಹಣದ ಪಿಶಾಚಿಯಾಗಿದ್ದ. ಹೀಗಾಗಿ ಹಣ ಅಂದರೆ ಹೆಣವೂ ಬಾಯಿಡುತ್ತೆ ಅಂತಾರಲ್ಲ. ಹಾಗೇ ನಿತ್ಯವೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನಂತೆ. ಪತಿಗೆ ತಂದೆ, ತಾಯಿ, ನಾದನಿ, ಮೈದುನ ಸಾಥ್ ನೀಡಿದ್ದಾರಂತೆ. ಎಲ್ಲರೂ ಸೇರಿ ಕೊಂದು ಹಾಕಿದ್ದಾರೆ ಅಂತ ನಾಗಮ್ಮಳ ತವರು ಮನೆಯವರು ಕುಟುಂಬಸ್ಥರು ಕಿಡಿಕಾರಿದ್ದಾರೆ. ಈ ಪಾಪಿಗೆ ಈ ಮೊದಲು ಮದುವೆಯಾಗಿತ್ತು. ಮೊದಲು ಪತ್ನಿ ಗರ್ಭಿಣಿಯಿದ್ದಾಗ ಕೊಂದು ಹಾಕಿದ್ದಾನಂತೆ. ಇದು ನನ್ನ ಮಗಳದ್ದು, ಎರಡನೇ ಮದುವೆ. ನಮಗೆ ಮದುವೆಯಾದ ಬಳಿಕ ಹಂತಕರ ಬಗ್ಗೆ ಗೋತ್ತಾಗಿದೆ. ನಾವು ಮೋಸ ಹೋಗಿದ್ದೇವೆ. ಬೇಡವಾದರೆ ತವರು ಮನೆಗೆ ಬಿಡಬೇಕಿತ್ತು. ಆದರೆ ಈ ರೀತಿ ಅಮಾನುಷವಾಗಿ ಕೊಂದು ಹಾಕಿದ್ದು, ನ್ಯಾಯವಾ ಅಂತ ತವರು ಮನೆಯವರು ಕಣ್ಣೀರು ಹಾಕುತ್ತಿದ್ದಾರೆ.

ಅಷ್ಟಕ್ಕೂ ಪತ್ನಿ ಕೊಲೆ ಹಿಂದೆ ಅನೈತಿಕ ಸಂಬಂಧದ ವಾಸನೆಯೂ ಇದೆ ಅಂತ ಆರೋಪ ಕೇಳಿಬಂದಿದೆ. ಆತ ಇನ್ನೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಅಂತ ನಾಗಮ್ಮಳ ತವರು ಮನೆಯವರು ಆರೋಪಿಸಿದ್ದಾರೆ. ಪರಸ್ತ್ರೀ ವ್ಯಾಮೋಹಕ್ಕೆ ಪಾಪಿ ತಾಳಿ ಕಟ್ಟಿದ ಪತ್ನಿಯನ್ನೇ ರಾಡ್​ನಿಂದ ಹೊಡೆದು ಕೊಂದು ಹಾಕಿದ್ದಾನೆ. ಆ ಮೇಲೆ ಮನೆಯವರು ಸೇರಿ ನೇಣು ಹಾಕಿದ್ದಾರೆ. ಮುಖ, ಮೈಮೇಲೆ ರಾಡ್​ನಿಂದ ಹೊಡೆದ ಗಾಯಗಳಿವೆ ಅಂತ ಆರೋಪಿಸಿದ್ದಾರೆ.

ಪತಿ ಬಸಪ್ಪ, ಅತ್ತೆ ಶೆಖವ್ವಾ, ಮಾವ ಶಂಕ್ರಪ್ಪ, ನಾದನಿಯರಾದ ಸುರೇಖಾ, ರೇಣವ್ವ, ಮೈದುನ ಶರಣಪ್ಪ ವಿರುದ್ಧ ನಾಗಮ್ಮಳ ತವರು ಮನೆಯವರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಅಲ್ಲ ಕೊಲೆ ಎಂದು ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದಂತೆ ಬಸಪ್ಪ ಮತ್ತು ಆತನ ಕುಟುಂಬಸ್ಥರು ಮನೆ ಬಿಟ್ಟು ಎಸ್ಕೇಪ್ ಆಗಿದ್ದರು. ಆದರೆ ಗದಗ ಗ್ರಾಮೀಣ ಠಾಣೆಯ ಖಾಕಿ ಪಡೆ ಆರೋಪಗಳಿಗಾಗಿ ಬಲೆ ಬೀಸಿದ್ದರು. ಪೊಲೀಸರು ಬೀಸಿದ ಬಲೆಗೆ ಆರೋಪಿ ಬಸಪ್ಪ ಬಿದ್ದಿದ್ದು, ಬಸಪ್ಪನನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.

ವಿಚಾರಣೆ ವೇಳೆ ಬಸಪ್ಪ ಕೆಲವು ಸಂಗತಿಗಳನ್ನು ಬಾಯಿ ಬಿಟ್ಟಿದ್ದು ಡಿಸೆಂಬರ್ 24 ರಂದು ವರದಕ್ಷಿಣೆ ವಿಚಾರವಾಗಿಜಗಳ ಪ್ರಾರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಬಸಪ್ಪ, ನಾಗಮ್ಮಳಿಗೆ ಹೊಡೆದಿದ್ದರಂತೆ. ಇದರಿಂದ ಮೂರ್ಛೆ ಹೋಗಿ ನಾಗಮ್ಮ ಬಿದ್ದಿದ್ದಳಂತೆ. ಬಳಿಕ ನೇಣು ಹಾಕಿ ಕೊಂದಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಬಿಂಬಿಸಿದ್ದಾನೆ.

ಪತಿ ಬಸವರಾಜ್​ನನ್ನು ಏನೋ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಕೊಲೆಯಲ್ಲಿ ತಾಯಿ ಶೆಖವ್ವಾ, ತಂದೆ ಶಂಕ್ರಪ್ಪ, ತಂಗಿಯರಾದ ಸುರೇಖಾ, ರೇಣವ್ವ, ಸಹೋದರ ಶರಣಪ್ಪ ಅವರ ಪಾತ್ರ ಏನು ಅನ್ನೋದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ, ಇಲ್ಲಿ ಕೊಲೆಯಲ್ಲಿ ಅಂತ್ಯವಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವರದಿ-ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 7:01 pm, Sun, 1 January 23