ನೆಲಮಂಗಲ: ಡ್ರಗ್ ಅಡಿಕ್ಟ್ ಆಗಿರುವ ಆತನಿಗೆ ಅರ್ಜೆಂಟಾಗಿ ಹಣದ ಅಗತ್ಯ ಉಂಟಾಗಿತ್ತು. ಹಾಗಾಗಿ ತನ್ನ ಸೋದರತ್ತೆ ಮನೆಗೆ ಹೋಗಿ ಹಣ ಕೇಳಿದ್ದ. ಆದ್ರೆ ಆಕೆ ಹಣ ಕೊಡೋಕೆ ನಿರಾಕರಿಸಿದ್ದೇ ತಡ, ಸೋದರತ್ತೆ ಅನ್ನೋದನ್ನೂ ನೋಡದೆ ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಅತ್ತೆಯ ಉಸಿರು ನಿಲ್ಲಿಸಿ ಚಿನ್ನ ಕದ್ದ ಖದೀಮ! ಅಕ್ಟೋಬರ್ 30ರಂದು ನೆಲಮಂಗಲದ ಕಾವೇರಿ ಬಡಾವಣೆಯಲ್ಲಿರುವ ಶಾರದಮ್ಮ ಅನ್ನೋರ ಮನೆಗೆ ಈ ಖದೀಮ ರಘು ನುಗ್ಗಿದ್ದಾನೆ. ಶಾರದಮ್ಮ ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದು, ಅವರು ಇಲ್ಲದ ಸಮಯದಲ್ಲೇ ಮನೆಗೆ ಬಂದಿದ್ಧಾನೆ. ಶಾರದಮ್ಮ ಅವರ ಅಣ್ಣನ ಮಗನಾಗಿರೋ ರಘು, 10 ಸಾವಿರ ಹಣ ಕೇಳಿದ್ದಾನೆ. ಆದ್ರೆ ಈ ಹಿಂದೆ ಕೊಟ್ಟಿದ್ದ ಹಣವನ್ನ ರಘು ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ಮತ್ತೇ ಹಣ ಕೊಡಲು ಶಾರದಮ್ಮ ನಿರಾಕರಿಸಿದ್ದಾರೆ.
3ವರ್ಷದ ಹಿಂದೆ ನೆಲಮಂಗಲ ಪಟ್ಟಣದ ಸುಭಾಷ್ ನಗರದಲ್ಲಿ ವಾಸಿಸುವಾಗ ಶಾರದಮ್ಮರ ಮನೆಯ ನಕಲಿ ಕೀ ಬಳಸಿ ಚಿನ್ನದ ನೆಕ್ಲೇಸ್ ಕದಿದ್ದ ಈ ವಿಷಯ ಪಂಚಾಯತಿಯಲ್ಲಿ ತೀರ್ಮಾನ ನಡೆಸಿದಾಗ ಅದನ್ನು ವಾಪಸು ಕೊಡುವುದಾಗಿ ಒಪ್ಪಿಕೊಂಡಿದ್ದ ಹಾಗಾಗಿ ಹಳೆಯ ಘಟನೆಗಳನ್ನ ನೆನದು ಅಂದು ಹಣ ಕೇಳಿದಾಗಲೂ ಶಾರದಮ್ಮ ಕೊಡೋಕೆ ಆಗಲ್ಲ ಅಂತ ಹೇಳಿ ರಘುವಿನ ಕಪಾಳಕ್ಕೆ ಬಾರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ರಘು ಮೊದಲು ಆಕೆಯ ಕುತ್ತಿಗೆ ಹಿಸುಕಿ ಬೆಡ್ ಮೇಲೆ ಹಾಕಿ ಚಿನ್ನಾಭರಣಕ್ಕಾಗಿ ಹುಡುಕಾಡ್ತಿದ್ದ.
ಅಷ್ಟಾದ್ರೂ ಶಾರದಮ್ಮ ಉಸಿರಾಡುತ್ತಿದ್ದಳು. ನಂತರ ಚಾರ್ಜರ್ ವೈರ್‌ನಿಂದ ಕುತ್ತಿಗೆ ಬಿಗಿದಿದ್ದ. ಆದ್ರೂ ಶಾರದಮ್ಮ ಜೀವ ಹೋಗಿರಲಿಲ್ಲ. ಮೂರನೇ ಬಾರಿಗೆ ಅಲ್ಲೇ ಇದ್ದ ದಿಂಬು ತೆಗೆದು ಮುಖದ ಮೇಲೆ ಇಟ್ಟು ಕೊಲೆ ಮಾಡಿದ್ದಾನೆ. ನಂತ್ರ ಆಕೆಯ ಮೈಮೇಲಿದ್ದ ಚಿನ್ನದ ಸರ, ಉಂಗುರ, ಬಳೆ, 25 ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾನೆ.
ಸ್ನೇಹಿತನ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಸೆರೆ: ಕೊಲೆ ಮಾಡುವ ಎರಡು ದಿನ ಮೊದಲು ಆರೋಪಿ ರಘು ತಾನು ಮನೆ ಬಿಟ್ಟು ಹೋಗ್ತಿರುವುದಾಗಿ ಪತ್ರ ಬರೆದಿಟ್ಟಿದ್ದ. ತನಿಖೆ ವೇಳೆ ಈ ಎಲ್ಲಾ ವಿಚಾರಗಳೂ ಬೆಳಕಿಗೆ ಬಂದಿದ್ದು ಪೊಲೀಸರು ರಘುವಿಗಾಗಿ ಹುಡುಕಾಟ ನಡೆಸಿದ್ದಾರೆ. ಅಂತಿಮವಾಗಿ ಬೆಳ್ಳೂರು ಸಮೀಪ ಸ್ನೇಹಿತನ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿರುವ ನೆಲಮಂಗಲ ಟೌನ್ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.