ಇವರು ಡ್ರಗ್ ಸಪ್ಲೈ ಮಾಡುತ್ತಿದ್ದ ರೀತಿ ನೋಡಿದರೆ ಓ ಮೈ ಗಾಡ್ ಅಂತೀರಾ!
ಸ್ಟ್ಯಾಂಪ್ನಲ್ಲಿ ಬರುವ ಎಲ್ಎಸ್ಡಿ ಡ್ರಗ್ಗಳನ್ನ ಬಾಯಿಯಲ್ಲಿ ಇಟ್ಟುಕೊಂಡರೆ ಕಿಕ್ ಸಿಗುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಿದ್ದು, ಪಬ್ ಮತ್ತು ಶ್ರೀಮಂತರ ಪಾರ್ಟಿಯೇ ಇವರ ಟಾರ್ಗೆಟ್ ಆಗಿತ್ತು.
ಆನೇಕಲ್: ಡ್ರಗ್ಸ್ ದಂಧೆಯ ಕುರಿತು ಬಗೆದಷ್ಟೂ ಮಾಹಿತಿ ಸಿಗುತ್ತಿದೆ. ಒಂದಕ್ಕಿಂತ ಒಂದು ಖತರ್ನಾಕ್ ಐಡಿಯಾ ಬಳಸಿ ಡ್ರಗ್ ಸಪ್ಲೈ ಮಾಡುವ ಕಿರಾತಕರನ್ನು ಮಟ್ಟ ಹಾಕಲೇಬೇಕೆಂದು ತನಿಖಾಧಿಕಾರಿಗಳು ಈಗ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗೆ ತನಿಖೆಗೆ ಹೊರಟ ಅಧಿಕಾರಿಗಳ ಬಲೆಗೆ ದೇವರ ಹೆಸರಿನಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಒಂದು ಸಿಕ್ಕಿಬಿದ್ದಿದ್ದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರ ಹೆಸರಿನಲ್ಲಿ ಮಾದಕ ಸೇವೆ!
ನೆದರ್ಲ್ಯಾಂಡ್ಸ್ನಿಂದ ಸಪ್ಲೈ ಆಗುತ್ತಿದ್ದ ಡ್ರಗ್ ಬೆಂಗಳೂರಿಗೆ ಬಂದು ತಲುಪುತ್ತಿದ್ದ ರೀತಿಯೇ ಫುಲ್ ಡಿಫರೆಂಟ್! ಡ್ರಗ್ ಪ್ಯಾಕ್ಗಳನ್ನು ಸೀದಾಸೀದಾ ಕಳುಹಿಸಿದರೆ ಅನುಮಾನ ಮೂಡುತ್ತದೆ ಎಂದು ದೇವರ ಭಾವಚಿತ್ರವಿರುವ ಸ್ಟ್ಯಾಂಪ್ಗಳಿಗೆ ಡ್ರಗ್ಸ್ ಅಂಟಿಸಿ, ಪೋಸ್ಟ್ ಅಥವಾ ಕೊರಿಯರ್ನಲ್ಲಿ ಕಳುಹಿಸುತ್ತಿತ್ತು. ಬರೀ ಇಪ್ಪತ್ತು ರೂಪಾಯಿಯ ಎನವಲಪ್ ಕವರ್ನಲ್ಲಿ ಲಕ್ಷಾಂತರ ಮೌಲ್ಯದ ಡ್ರಗ್ ಸಪ್ಲೈ ಮಾಡುತ್ತಿತ್ತು.
ಈ ಜಾಲದ ಸುಳಿವು ಸಿಕ್ಕ ಕೂಡಲೇ ಕಸ್ಟಮ್ಸ್ ಅಧಿಕಾರಿಗಳು ಪೋಸ್ಟ್, ಕೊರಿಯರ್ಗಳ ಮೇಲೆ ನಿಗಾ ವಹಿಸಿ ನಂತರ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಸಿಬಿ ಅಧಿಕಾರಿಗಳು ಜಾಲದ ಬೆನ್ನುಬಿದ್ದಾಗ ಚಾಮರಾಜಪೇಟೆಯ ಪೋಸ್ಟ್ ಆಫೀಸ್ಗೆ ಅನುಮಾನಸ್ಪದ ಪೋಸ್ಟ್ಗಳು ಬರುತ್ತಿರುವುದು ಗೊತ್ತಾಗಿದೆ. ಅಲ್ಲಿಂದ ತನಿಖೆಯನ್ನು ಚುರುಕುಗೊಳಿಸಿದಾಗ ಮಾದಕ ಸೇವೆಯ ಲೀಲೆ ಎಳೆಎಳೆಯಾಗಿ ಬಿಚ್ಚಿಕೊಂಡಿದೆ.
ಆಸ್ಪತ್ರೆ ಅಡ್ರೆಸ್ಗೆ ಬರ್ತಾ ಇತ್ತು ಡ್ರಗ್ಸ್ ಪೋಸ್ಟ್!
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಬಳಿಯ ಸ್ಪರ್ಶ್ ಮತ್ತು ಹೆಲ್ತ್ ಸಿಟಿಯಲ್ಲಿ ಎಕ್ಸ್ ರೇ ಟೆಕ್ನೀಶಿಯನ್ ಆಗಿರುವ ಕೇರಳದ ಕೊಟ್ಟಾಯಂ ಜಿಲ್ಲೆಯ ಅರುಣ್ ಆಂಥೋನಿಗೆ ಆಗಾಗ ಪೋಸ್ಟ್ ಬರುತ್ತಿತ್ತು. ಅರುಣ್ ಆಂಥೋನಿಯ ಸ್ನೇಹಿತ ಗಣೇಶ್ ಕೊಟ್ಟಾಯಂನಿಂದ ಪೋಸ್ಟ್ ಕಳುಹಿಸುತ್ತಿದ್ದು ಇದನ್ನು ಅಮಲ್ ಬೈಜು ಎನ್ನುವವನಿಗೆ ಕೊಡು ಎಂದಷ್ಟೇ ಹೇಳುತ್ತಿದ್ದ. ಪೋಸ್ಟ್ನಲ್ಲಿ ಏನಿದೆ ಎಂದೂ ಗೊತ್ತಿರದ ಅರುಣ್ ತನ್ನ ಸ್ನೇಹಿತನನ್ನು ನಂಬಿ ಪೋಸ್ಟ್ ಪಡೆದು ನಂತರ ಅಮಲ್ ಬೈಜುಗೆ ತಲುಪಿಸುತ್ತಿದ್ದ.
ಕೊಟ್ಟಾಯಂನಿಂದ ಡ್ರಗ್ ಕಳುಹಿಸುತ್ತಿದ್ದ ಗಣೇಶ್ ಡ್ರಗ್ ಸಪ್ಲೈ ಕುರಿತು ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆಸ್ಪತ್ರೆ ಅಡ್ರೆಸ್ಗೆ ಪೋಸ್ಟ್ ಮಾಡುತ್ತಿದ್ದ. ಅಲ್ಲಿಂದ ಡ್ರಗ್ ಲೇಪಿತ ಸ್ಟ್ಯಾಂಪ್ಗಳನ್ನ ಪಡೆಯುತ್ತಿದ್ದ ಅಮಲ್ ಬೈಜು ಬೆಂಗಳೂರಿನ ಗಿರಾಕಿಗಳಿಗೆ ಅದನ್ನು ತಲುಪಿಸುತ್ತಿದ್ದ.
ಬಾಯಲಿ ಇಟ್ಟರೆ ಕರಗುವ ಸ್ಟ್ಯಾಂಪ್!
ಸ್ಟ್ಯಾಂಪ್ನಲ್ಲಿ ಬರುವ ಎಲ್ಎಸ್ಡಿ ಡ್ರಗ್ಗಳನ್ನ ಬಾಯಿಯಲ್ಲಿ ಇಟ್ಟುಕೊಂಡರೆ ಕಿಕ್ ಸಿಗುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಿದ್ದು, ಪಬ್ ಮತ್ತು ಶ್ರೀಮಂತರ ಪಾರ್ಟಿಯೇ ಇವರ ಟಾರ್ಗೆಟ್ ಆಗಿತ್ತು. ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರವಾಗಿ ಈ ದಂಧೆಯಲ್ಲಿ ತೊಡಗಿಕೊಂಡಿದ್ದ ಗಣೇಶ್ ಮತ್ತು ಅಮಲ್ ಬೈಜು ಒಂದು ಎಲ್ಎಸ್ಡಿ ಲೇಪಿತ ಸ್ಟ್ಯಾಂಪ್ಗೆ 4 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.
ಸದ್ಯ ಪೋಸ್ಟ್ ಚೆಕ್ ಮಾಡಿದಾಗ ಪೊಲೀಸರಿಗೆ ದೇವರ ಭಾವಚಿತ್ರವಿರುವ 400ಕ್ಕೂ ಹೆಚ್ಚು ಸ್ಟ್ಯಾಂಪ್ಸ್ ಸಿಕ್ಕಿದ್ದು, ಒಟ್ಟಾರೆ 15 ಲಕ್ಷ ಮಾಲ್ಯದ ಡ್ರಗ್ಸ್ ಎನವಲಪ್ ಕವರ್ನಲ್ಲಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಮಲ್ ಬೈಜು ತಲೆಮರೆಸಿಕೊಂಡಿದ್ದು ಪೋಸ್ಟ್ ಕಳುಹಿಸುತ್ತಿದ್ದ ಗಣೇಶ್ ಮತ್ತು ಅಡ್ರೆಸ್ ಕೊಟ್ಟಿದ್ದ ಅರುಣ್ನನ್ನು ಪೊಲೀಸರು ಬಂಧಿಸಿದ್ದಾರೆ.