ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಬಂದಿದ್ದ ತಾಯಿ ಪರಪ್ಪನ ಅಗ್ರಹಾರ ಜೈಲು ಸೇರಿದಳು! ಯಾಕೆ ಗೊತ್ತಾ?
ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಗ ಮೊಹಮ್ಮದ್ ಬಿಲಾಲ್ನಿಗೆ ಬಟ್ಟೆ ಕೊಡಲು ಬಂದ ತಾಯಿ ಫರ್ವೀನ್ ತಾಜ್ ಬ್ಯಾಗ್ನಲ್ಲಿ 5 ಲಕ್ಷ ರೂ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ
ಬೆಂಗಳೂರು: ಜೂನ್ 13ರಂದು ಪರಪ್ಪನ ಅಗ್ರಹಾರ (Parappana Agrgar Jail) ಜೈಲಿನಲ್ಲಿದ್ದ ಮಗ (Son) ಮೊಹಮ್ಮದ್ ಬಿಲಾಲ್ನಿಗೆ ಬಟ್ಟೆ ಕೊಡಲು ಬಂದ ತಾಯಿ (Mother) ಫರ್ವೀನ್ ತಾಜ್ ಬ್ಯಾಗ್ನಲ್ಲಿ 5 ಲಕ್ಷ ರೂ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಮಹಿಳೆ ಫರ್ವೀನ್ ತಾಜ್ರನ್ನು ಸೆರೆ ಹಿಡಿದಿದ್ದಾರೆ. ಫರ್ವೀನ್ ತಾಜ್ ಬಳಿಯಿದ್ದ 5 ಲಕ್ಷ ಮೌಲ್ಯದ ಹ್ಯಾಶ್ ಆಯಿಲ್ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪುತ್ರ ಬಿಲಾಲ್ ದರೋಡೆ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಬಿಲಾಲ್ನನ್ನ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
2 ಇಲಾಖೆಗಳ ಜಟಾಪಟಿಯಿಂದ ಸಾರ್ವಜನಿಕರಿಗೆ ಸಂಕಷ್ಟ
ತುಮಕೂರು: ನಗರದ RTO ಮತ್ತು ಬೆಸ್ಕಾಂ ಎರಡು ಸರ್ಕಾರಿ ಇಲಾಖೆಗಳ ನಡುವೆ ಕಿತ್ತಾಟ ಶುರುವಾಗಿದೆ. ತುಮಕೂರು ಆರ್ ಟಿ ಓ ಕಚೇರಿ ವಿದ್ಯುತ್ ಬಿಲ್ ಕಟ್ಟದಿದ್ದಕ್ಕೆ ಬೆಸ್ಕಾಂ, ಆರ್ ಟಿ ಓ ಕಚೇರಿ ವಿದ್ಯುತ್ ಕನೆಕ್ಷನ್ ಕಟ್ ಮಾಡಿದೆ. ಕಳೆದ ಮೂರು ತಿಂಗಳಿಂದ ವಿದುತ್ ಬಿಲ್ನ್ನು ಆರ್ ಟಿ ಓ ಕಚೇರಿ ಬಾಕಿ ಉಳಿಸಿಕೊಂಡಿದೆ. ಒಂದು ಲಕ್ಷದ ಹದಿನಾರು ಸಾವಿರ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಸಂಬಂಧ ಬೆಸ್ಕಾಂ ಸರ್ಕಾರದ ಆದೇಶದ ಅನ್ವಯ ನಿನ್ನೆ (ಜೂನ್ 16) ರಂದು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದೆ. ಈ ಸಂಬಂಧ ಬೆಸ್ಕಾಂ ವಿರುದ್ಧ ಸೇಡು ತೀರಿಸಿಕೊಳ್ಳಲು ಆರ್ ಟಿಓ ಅಧಿಕಾರಿಗಳು ಬೆಸ್ಕಾಂ ಸರ್ವೀಸ್ ವಾಹನಕ್ಕೆ 2 ಸಾವಿರ ರೂಪಾಯಿ ದಂಡ ಹಾಕಿ ಸೀಜ್ ಮಾಡಿದ್ದಾರೆ. ಸೀಜ್ ಮಾಡಿರುವ ಸರ್ವಿಸ್ ವಾಹನ ಓಮ್ನಿಯನ್ನು RTO ಅಧಿಕಾರಿಗಳು ಕಾಪೌಂಡ್ ಒಳಗಡೆ ನಿಲ್ಲಿಸಿಕೊಂಡಿದ್ದಾರೆ. ಸರ್ವಿಸ್ ವಾಹನದ ಮೇಲೆ ಏಣಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ದಂಡ ಹಾಕಿದ್ದಾರೆ. ಈ ಹಿನ್ನೆಲೆ ವಿದ್ಯುತ್ ತಂತಿ ಮತ್ತು ಕಂಬಗಳಲ್ಲಿನ ತೊಡಕುಗಳನ್ನ ದುರಸ್ಥಿಗೊಳಿಸಲು ಬೆಸ್ಕಾಂ ನೌಕರರ ಹಿಂದೇಟು ಹಾಕುತ್ತಿದ್ದಾರೆ.
ಒಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತೊಂದೆಡೆ ಕರ್ತವ್ಯ ನಿಷ್ಠೆ. ಇವರಿಬ್ಬರ ಮಧ್ಯೆ ಕರೆಂಟ್ ಇಲ್ಲದೇ ಜನತೆ ಒದ್ದಾಡುತ್ತಿದ್ದಾರೆ. ಸಧ್ಯ ಆರ್ ಟಿ ಒ ಕಚೇರಿಗೆ ಇನ್ನೂ ಪವರ್ ಸಪ್ಲೈ ಆಗಿಲ್ಲ.
ಸಾರಿಗೆ ಬಸ್- ಓಮ್ನಿ ಕಾರು ನಡುವೆ ಬೀಕರ ಅಪಘಾತ
ಹಾಸನ: ಸಾರಿಗೆ ಬಸ್- ಓಮ್ನಿ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳೆಗದ್ದೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಓಮ್ನಿ ಕಾರಿನಲ್ಲಿದ್ದ ಚಂದ್ರಶೇಖರ್ (55), ಶಾರದಾ(52) ದಂಪತಿ ಸಾವನ್ನಪ್ಪಿದ್ದಾರೆ. ಪತಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆಂದು ಕೊಂಡೊಯ್ಯುವ ಮಾರ್ಗಮಧ್ಯೆ ಪತ್ನಿ ಸಾವನ್ನಪ್ಪಿದ್ದಾರೆ. ಮೃತರು ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಸಮೀಪದ ಕುಣಿಗಲ್ ಗ್ರಾಮದವರು ಎಂದು ತಿಳಿದು ಬಂದಿದೆ.
ಇದನ್ನು ಓದಿ: ತುಮಕೂರಿನಲ್ಲೊಂದು ಭೀಕರ ರಸ್ತೆ ಅಪಘಾತ: ಅವೈಜ್ಞಾನಿಕ ಕಾಮಗಾರಿಯೇ ಘಟನೆಗೆ ಕಾರಣವೆಂದ ಸಾರ್ವಜನಿಕರು
ಹಾಸನದಲ್ಲಿರುವ ತಮ್ಮ ಮಗಳ ಮನೆಯಲ್ಲಿ ಕಾರ್ಯಕ್ರಮ ವೊಂದನ್ನ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಸಕಲೇಶಪುರದ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಕ್ಷ್ಮಣತೀರ್ಥ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು
ಮೈಸೂರು:ಜಿಲ್ಲೆಯ ಹುಣಸೂರು ತಾಲೂಕಿನ ಹೆಗ್ಗಂದೂರು ಗ್ರಾಮಲಕ್ಷ್ಮಣತೀರ್ಥ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಶರತ್(17), ಶಿವಕುಮಾರ್(17) ನೀರುಪಾಲಾದವರು. ನೀರುಪಾಲಾದ ಇಬ್ಬರೂ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದು, ಶಿವಕುಮಾರ್ನ ಶವ ಪತ್ತೆ ಹಚ್ಚಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 pm, Fri, 17 June 22