Ramanagara: ಗೃಹಲಕ್ಷ್ಮೀ ಯೋಜನೆ ನೋಂದಣಿಗೆಂದು ಕರೆದೊಯ್ದು ವೃದ್ಧೆಯ ಚಿನ್ನದ ಸರ ಕಳ್ಳತನ
ಗೃಹಲಕ್ಷ್ಮೀ ಯೋಜನೆ ನೋಂದಣಿ ಮಾಡುವುದಾಗಿ ನಂಬಿಸಿ ವೃದ್ಧೆಯೊಬ್ಬರನ್ನು ಕರೆದೊಯ್ದು ಅವರ ಬಳಿ ಇದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಪ್ರಕರಣ ರಾಮನಗರದಲ್ಲಿ ಇಂದು (ಜುಲೈ 27) ನಡೆದಿದೆ.
ರಾಮನಗರ, ಜುಲೈ 27: ಅಪರಿಚಿತ ವ್ಯಕ್ತಿಯೊಬ್ಬ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ನೋಂದಣಿ ಮಾಡುವುದಾಗಿ ನಂಬಿಸಿ ಅಂಚೆ ಕಚೇರಿಗೆ ಕರೆದೊಯ್ದು ವೃದ್ಧೆಯ ಬಳಿ ಇದ್ದ 40 ಗ್ರಾಂ ಚಿನ್ನದ ಸರ ಕಳ್ಳನ (Snatching) ಮಾಡಿದ ಘಟನೆ ಜಿಲ್ಲೆಯ ಚನ್ನಪಟ್ಟಣ (Channapatna) ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾರೋಕೊಪ್ಪದ ಸಾವಿತ್ರಮ್ಮ (62) ಎಂಬವರು ಮಂಡ್ಯದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುತ್ರನನ್ನು ನೋಡಲೆಂದು ಹೋಗಿದ್ದರು. ವಾಪಸ್ ಮಂಡ್ಯದಿಂದ ಚನ್ನಪಟ್ಟಣ ಬಸ್ ನಿಲ್ದಾಣಕ್ಕೆ ಬಂದಿಳಿದಾಗ ಅಪರಿಚಿತ ವ್ಯಕ್ತಿಯೊಬ್ಬ ಪರಿಚಿತನಂತೆ ನಟಿಸಿ ಸಾವಿತ್ರಮ್ಮ ಜೊತೆ ಮಾತನಾಡಿದ್ದಾನೆ. ಅಲ್ಲದೆ, ಗೃಹಲಕ್ಷ್ಮೀ ಯೋಜನೆ ಹಣ ಬರುವಂತೆ ಮಾಡಿಸುತ್ತೇನೆ ಎಂದು ನಂಬಿಸಿದ್ದಾನೆ.
ಇದನ್ನೂ ಓದಿ: ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ: 3 ಖಾಸಗಿ ಸೈಬರ್ ಸೆಂಟರ್ ಸೀಜ್
ವ್ಯಕ್ತಿಯ ಮಾತು ನಂಬಿದ ಸಾವಿತ್ರಮ್ಮ ಅರ್ಜಿ ಹಾಕಲು ಒಪ್ಪಿಕೊಂಡಿದ್ದಾರೆ. ಅದರಂತೆ, ಅಪರಿಚಿತ ವ್ಯಕ್ತಿ ಅರ್ಜಿಗೆ ವೈದ್ಯರು ಸಹಿಮಾಡಬೇಕೆಂದು ವೃದ್ಧೆಯನ್ನು ಆಸ್ಪತ್ರೆಗೆ ಬಳಿಗೆ ಕರೆದೊಯ್ದಿದ್ದಾನೆ. ಅಲ್ಲಿ ಸರ ನೋಡಿದರೆ ವೈದ್ಯರು ಸಹಿ ಹಾಕಲ್ಲ ತೆಗೆಯಿರಿ ಎಂದಿದ್ದಾನೆ. ಹೀಗಾಗಿ ಸಾವಿತ್ರಮ್ಮ ತನ್ನಲ್ಲಿದ್ದ ಚಿನ್ನದ ಸರ, ಹಣವನ್ನು ಪರ್ಸ್ನಲ್ಲಿ ಹಾಕಿದ್ದಾರೆ. ಈ ವೇಳೆ ಸಾವಿತ್ರಮ್ಮಗೆ ಗೊತ್ತಾಗದಂತೆ ಪರ್ಸ್ನಿಂದ ಚಿನ್ನದ ಸರ ಎಗರಿಸಿದ್ದಾನೆ.
ಚಿನ್ನದ ಸರ ಕಳವು ಮಾಡಿದ ನಂತರ ಸಾವಿತ್ರಮ್ಮರನ್ನು ಅಂಚೆ ಕಚೇರಿ ಬಳಿಗೆ ಕರೆತಂದು ಕೂರಿಸಿ ಹೋಗಿದ್ದಾನೆ. ಎಷ್ಟೇ ಹೊತ್ತು ಕಾದರೂ ಆ ವ್ಯಕ್ತಿ ವಾಪಸ್ ಬಾರದ್ದನ್ನು ಅನುಮಾನಿಸಿದ ಸಾವಿತ್ರಮ್ಮ, ಪರ್ಸ್ ತೆಗೆದು ನೋಡಿದಾಗ ಸರ ಕಳ್ಳತನ ಆಗಿರುವುದು ತಿಳಿದುಬಂದಿದೆ. ಸರಗಳ್ಳತನ ಸಂಬಂಧ ಸಾವಿತ್ರಮ್ಮ ಅವರು ಚನ್ನಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿತ್ರಮ್ಮಗೆ ವಂಚಿಸಿದ ವ್ಯಕ್ತಿಯ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ