ಶ್ರೀನಗರ: ಜಮ್ಮುವಿನ (Jammu) ರೆಸಿಡೆನ್ಸಿ ರಸ್ತೆ ಬಳಿಯ ಗುಡಿಸಲುಗಳಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಇದರ ಪರಿಣಾಮವಾಗಿ ಮೂವರು ಸಜೀವ ದಹನವಾಗಿದ್ದಾರೆ. ಈ ಬೆಂಕಿ ದುರಂತದಲ್ಲಿ (Fire Accident) 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಮೂವರು ಸಜೀವ ದಹನವಾಗಿದ್ದಾರೆ. ಒಂದೇ ಸಲಕ್ಕೆ ಬೆಂಕಿಯ ಜ್ವಾಲೆಗಳು ಹೊರಹೊಮ್ಮಲು ಪ್ರಾರಂಭಿಸಿದ್ದರಿಂದ ತಕ್ಷಣ ಪ್ರದೇಶಕ್ಕೆ ಧಾವಿಸಿದ ಸ್ಥಳೀಯರು ಗಾಯಗೊಂಡಿದ್ದ ಹಲವರನ್ನು ರಕ್ಷಿಸಿದ್ದಾರೆ.
ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟ ಆಗಿದ್ದರಿಂದ ಗುಡಿಸಲುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆದರೆ ನಿಖರವಾದ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಗುಡಿಸಲುಗಳಲ್ಲಿ ಬೆಂಕಿ ಹೊತ್ತಿಕೊಂಡ ನಂತರ ಅಕ್ಕಪಕ್ಕದಲ್ಲಿದ್ದ ಗುಜರಿ ಅಂಗಡಿ ಸೇರಿದಂತೆ ಇನ್ನಿತರ ಮನೆಗಳಲ್ಲಿದ್ದ ಗ್ಯಾಸ್ ಸಿಲಿಂಡರ್ಗಳು ಕೂಡ ಸ್ಫೋಟವಾಗಿವೆ. ಇದರಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ವಿದ್ಯುತ್ ವೈರಿಂಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಡ ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಬೆಂಕಿ ದುರಂತಕ್ಕೆ ಸಿಲಿಂಡರ್ ಸ್ಫೋಟ ಕಾರಣವಾ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ದುರಂತ ಸಂಭವಿಸಿದೆಯಾ ಎಂಬುದು ಇನ್ನೂ ಖಚಿತವಾಗಿಲ್ಲ.
ಬೆಂಕಿ ಹೊತ್ತಿಕೊಂಡಿದ್ದರಿಂದ ಗಾಯಗೊಂಡ 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಸ್ಥಳೀಯರ ನೆರವಿನೊಂದಿಗೆ ಎಲ್ಲರನ್ನು ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಲಭಿಸಿದ ತಕ್ಷಣ ಅಧಿಕಾರಿಗಳು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಇದನ್ನೂ ಓದಿ: ಬೆಂಕಿಯಿಂದ ಪಾರಾಗಲು ಮೂರು ವರ್ಷದ ಮಗುವನ್ನು ಕಟ್ಟಡದಿಂದ ಕೆಳಗೆ ಎಸೆದ ತಂದೆ; ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ
ಮೈಸೂರು: ಮನೆಯಲ್ಲಿ ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವದಹನ! ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ
Published On - 8:23 pm, Mon, 14 March 22