ಹಾಸನ: ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ (Prashanth Nagaraj) ಹತ್ಯೆ (Murder) ಪ್ರಕರಣ (Case)ದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಂದ ಲೋಪವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ (H.D.Revanna) ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಕೊಲೆ ನಡೆದಾಗ ತನಿಖೆ ಜವಾಬ್ದಾರಿ ಹೊತ್ತಿದ್ದ ಅರಸೀಕೆರೆ ಸಿಪಿಐ ದೂರು ಸ್ವೀಕಾರ ಮಾಡಿದ್ದರು. ಆದರೆ ಹಾಸನ ಡಿವೈಎಸ್ಪಿ ಉದಯಭಾಸ್ಕರ್ ಹಾಗು ಪೊಲೀಸ್ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ಹೀಗೆ ಬರೆಯಿರಿ ಎಂದು ಬೇರೆ ದೂರು ಬರೆಸಿದ್ದಾರೆ. ಇಬ್ಬರು ಅದಿಕಾರಿಗಳು ಶಾಮೀಲಾಗಿ ಇಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾಸನ ನಗರ ಸಭಾ ಸದಸ್ಯನ ಕೊಲೆ: ಸಿಪಿಐಯನ್ನು ವಜಾ ಮಾಡಿದ ನಂತರವೇ ಮರಣೋತ್ತರ ಪರೀಕ್ಷೆಗೆ ಅವಕಾಶ ಎಂದರು ಹೆಚ್ ಡಿ ರೇವಣ್ಣ
ಆರಂಭದಲ್ಲಿ ದುಷ್ಕರ್ಮಿಗಳು ತನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಪ್ರಶಾಂತ್ ಪತ್ನಿ ಸೌಮ್ಯ ಅವರಿಂದ ದೂರು ಬರೆಸಿಕೊಂಡಿದ್ದರು. ನಂತರ ಎರಡನೆ ದೂರಿನಲ್ಲಿ ಹಾಸನದ ಬೆಸ್ತರ ಬೀದಿಯ ಪೂರ್ಣ ಚಂದ್ರನಿಂದ ಕೊಲೆ ನಡೆದಿದೆ ಎಂದು ದೂರು ಬರೆಸಿ ಎಫ್ಐಅರ್ ದಾಖಲು ಮಾಡಲಾಗಿದೆ. ಹೀಗಾಗಿ ಪ್ರಕರಣವನ್ನು ತಿರುಚಲು ಕೆಲವರ ಹೆಸರನ್ನು ಉಲ್ಲೇಖ ಮಾಡಿ ಡೈವರ್ಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ನಗರದ ಪೆನ್ಷನ್‌ಮೊಹಲ್ಲ ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿ ರೌಡಿಗಳ ತಾಣವಾಗಿದೆ. ಬೆಳಿಗ್ಗೆ ಎದ್ದರೆ ಅವರಿಗೆ ಊಟ ತಿಂಡಿ ಎಲ್ಲವೂ ವ್ಯವಸ್ಥೆ ಆಗುತ್ತದೆ. ನಿತ್ಯ ಒಂದರಿಂದ ಎರಡು ಲಕ್ಷ ಹಣ ವಸೂಲಿ ಮಾಡುತ್ತಾರೆ. ಮರಳು ದಂದೆ, ಇತರೆ ದಂದೆಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಯಾವುದಾದರೂ ಖಾಲಿ ಸೈಟ್ಗೆ ಬೇಲಿ ಹಾಕಿಸುವುದು, ನಂತರ ಅವರನ್ನು ರಾಜಿಗೆ ಕರೆಸುವುದು, ಯಾರಾದರೊಬ್ಬರಿಂದ ಒಂದೆರಡು ಲಕ್ಷ ಪಡೆದು ಇಬ್ಬರು ಹಂಚಿಕೊಳ್ಳುವುದು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪೊಲೀಸರೇ ಮುಂದೆ ನಿಂತು ಮಟ್ಕಾ ಆಡಿಸುತ್ತಿದ್ದಾರೆ, ದಿನಕ್ಕೆ ಲಕ್ಷ ಕಲೆಕ್ಷನ್: ಜೆಡಿಎಸ್ ನಾಯಕ ಎಚ್ಡಿ ರೇವಣ್ಣ ಗಂಭೀರ ಆರೋಪ
ಹಾಸನ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಸಚಿವರು, ಹಾಸನದ ಎರಡು ಠಾಣೆಗಳು ದಂಧೆ ಕೋರರ ಕೈಗೆ ಸೇರಿದೆ. ಅವರು ಇಲ್ಲಿಗೆ ಪೋಷ್ಟಿಂಗ್ ಬರುವಾಗಲೇ ಹೇಗೆ ಬಂದಿದ್ದಾರೆ ಅನ್ನೋದಕ್ಕೆ ಆಡಿಯೊ ಇದೆ. ಓರ್ವ ಪೊಲೀಸ್ ಅದಿಕಾರಿಯಾಗಿ 18 ಕೇಸ್ ಮುಚ್ಚಿಹಾಕಿದ್ದೇನೆ, ಇಂತದೇ ಪೋಷ್ಟಿಂಗ್ ಕೊಡಿ ಎಂದು ಮಾತನಾಡಿದ್ದಾರೆ. ರೇಣುಕಾ ಪ್ರಸಾದ್ ನಾಲ್ಕು ಕೋಟಿ ಮನೆ ಕಟ್ಟಿದ್ದಾರೆ. ಅಷ್ಟು ಹಣ ಎಲ್ಲಿಂದ ಬರುತ್ತೆ ಇವರಿಗೆ? ಇವರಿಬ್ಬರೂ ಕೂಡ ನಾಲ್ಕು ಐದು ಕೋಟಿ ಹಣ ಖರ್ಚುಮಾಡಿ ಮನೆ ಕಟ್ಟಿದ್ದಾರೆ. ಇದು ಹಾಸನ ಜಿಲ್ಲೆಯ ಜನರ ದುಡ್ಡು, ಮರಳಿನ ಹಾಗೂ ಮಟ್ಕ ದುಡ್ಡು ಎಂದು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಲೋಪ ಕಂಡುಬಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ಸ್ಪೆಕ್ಟರ್ಗಳಾದ ಅರೋಕಿಯಪ್ಪ, ರೇಣುಕಾ ಪ್ರಸಾದ್, ಡಿವೈಎಸ್ಪಿ ಉದಯ ಭಾಸ್ಕರ್ ವಿರುದ್ಧ ಕ್ರಮಕ್ಕೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಏನು ಕ್ರಮ ಆಗುತ್ತದೆ ನೋಡುತ್ತೇವೆ. ಆಮೇಲೆ ನಾವು ತೀರ್ಮಾನ ಮಾಡುತ್ತೇವೆ ಎಂದರು.
ಮರಣೋತ್ತರ ಪರೀಕ್ಷೆ ಅಂತ್ಯ
ಬುಧವಾರ ರಾತ್ರಿ ಪ್ರಶಾಂತ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಅದರಂತೆ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದ್ದು ಹಿಮ್ಸ್ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಪ್ರಶಾಂತ್ ನಾಗರಾಜ್ ಮನೆಗೆ ಮೃತದೇಹ ರವಾನಿಸಲಾಯಿತು. ಅಲ್ಲಿ ಅಂತಿಮ ದರ್ಶನ ನಡೆದು ಬಿಟ್ಟಗೋಡನಹಳ್ಳಿಯ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Thu, 2 June 22