ಸತ್ತಂತೆ ನಟಿಸಿ ಹಣ ದೋಚಿದ್ರು… ನಾಲ್ಕು ಇನ್ಷೂರೆನ್ಸ್ ಕಂಪನಿಗಳಿಗೆ ಪಂಗನಾಮ ಹಾಕಿದ್ರು…
Insurance companies cheated by a family: ಕುಟುಂಬವೊಂದು ನಾಲ್ಕು ಇನ್ಷೂರೆನ್ಸ್ ಕಂಪನಿಗಳಿಗೆ ಸುಳ್ಳು ದಾಖಲಾತಿಗಳನ್ನು ನೀಡಿ 70 ಲಕ್ಷ ರೂ ಹಣ ಕ್ಲೇಮ್ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಕಾಂಚನ್ ಪೈ, ರೋಹಿತ್ ಪೈ, ಧನರಾಜ್ ಪೈ ಮತ್ತು ಆಶುತೋಷ್ ಯಾದವ್ ಎಂಬ ವೈದ್ಯರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವಿವಿಧ ಇನ್ಷೂರೆನ್ಸ್ ಕಂಪನಿಗಳಿಂದ ಎರಡು ಹೆಸರುಗಳಲ್ಲಿ ಒಟ್ಟು 1.1 ಕೋಟಿ ರೂ ಮೊತ್ತಕ್ಕೆ ಇನ್ಷೂರೆನ್ಸ್ ಮಾಡಿಸಲಾಗಿತ್ತು.
ಮುಂಬೈ, ಜುಲೈ 1: ಆಪತ್ಕಾಲಕ್ಕೆ ಆಗಿಬರುತ್ತದೆಂದು ಲೈಫ್ ಇನ್ಷೂರೆನ್ಸ್ ಪಾಲಿಸಿಗಳನ್ನು ಮಾಡಿಸುತ್ತೇವೆ. ಬಹಳ ಜನರು ಇನ್ಷೂರೆನ್ಸ್ ಹಣಕ್ಕೋಸ್ಕರ ಮಾಡಬಾರದ ಕೆಲಸಗಳನ್ನು ಮಾಡುವುದನ್ನು ನೋಡುತ್ತೇವೆ. ಇನ್ಷೂರೆನ್ಸ್ ಹಣಕ್ಕೆ ತಂದೆಯನ್ನೋ, ತಾಯಿಯನ್ನೋ ಕೊಲೆ ಮಾಡಿದ ಘಟನೆಗಳು ಹಲವಿವೆ. ಇನ್ಷೂರೆನ್ಸ್ ಮಾಡಿಸಲಾದ ವ್ಯಕ್ತಿ ಸತ್ತನೆಂದು ಸುಳ್ಳು ದಾಖಲೆ ಸೃಷ್ಟಿಸಿ ಇನ್ಷೂರೆನ್ಸ್ ಕಂಪನಿಯಿಂದ ಪರಿಹಾರ ಪಡೆದಿರುವ ಹಲವು ಪ್ರಕರಣಗಳಿವೆ. ಇಂಥದ್ದೇ ಒಂದು ಒಂದು ಪ್ರಕರಣ ಮುಂಬೈನ ಒಂದು ಕುಟುಂಬದಿಂದ ಆಗಿದೆ. ಒಂದು ಕುಟುಂಬಕ್ಕೆ ಸೇರಿದ ಮಹಿಳೆ, ಆಕೆಯ ಪತಿ ಮತ್ತು ಮಗ, ಹಾಗೂ ಮತ್ತೊಬ್ಬ ವೈದ್ಯ ಸೇರಿ ನಾಲ್ಕು ಇನ್ಷೂರೆನ್ಸ್ ಕಂಪನಿಗಳಿಗೆ ಪಂಗನಾಮ ಹಾಕಿ 70 ಲಕ್ಷ ರೂ ಹಣ ಲಪಟಾಯಿಸಿದ ಘಟನೆ ಬೆಳಕಿಗೆ ಬಂದಿದೆ.
ಮುಂಬೈನ ಭಾಯಂದಾರ್ನ ನಿವಾಸಿ ಕಾಂಚನ್ ಪೈ, ಆಕೆಯ ಗಂಡ ರೋಹಿತ್ ಪೈ, ಮಗ ಧನರಾಜ್ ಪೈ ಮತ್ತು ವೈದ್ಯ ಆಶುತೋಷ್ ಯಾದವ್ ಅವರು ಆರೋಪಿಗಳಾಗಿದ್ದಾರೆ. ಪೊಲೀಸರು ಈ ನಾಲ್ವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಈ ಆರೋಪಿಗಳು ಸದ್ಯಕ್ಕೆ ನಾಪತ್ತೆಯಾಗಿದ್ದು ಪೊಲೀಸರು ಅವರನ್ನು ಹಿಡಿಯಲು ಬಲೆಬೀಸಿದ್ದಾರೆ.
ಇದನ್ನೂ ಓದಿ: ಐಪಿಸಿ, ಸಿಆರ್ಪಿಸಿ ಇನ್ನು ಗತ ಇತಿಹಾಸ; ಇಂದಿನಿಂದ ಹೊಸ ಕ್ರಿಮಿನಲ್ ಕಾನೂನುಗಳು ಅಸ್ತಿತ್ವಕ್ಕೆ
ನಾಲ್ಕು ಇನ್ಷೂರೆನ್ಸ್ ಕಂಪನಿಗಳಿಗೆ ಪಂಗನಾಮ ಹಾಕಿದ್ದು ಹೀಗೆ…
ಪ್ರಮುಖ ಆರೋಪಿತ ಮಹಿಳೆಯಾದ ಕಾಂಚನ್ ಪೈ ಅವರು ತಮ್ಮ ಹೆಸರು ಮತ್ತು ಪವಿತ್ರಾ ಹೆಸರು ಬಳಸಿ ನಾಲ್ಕು ಇನ್ಷೂರೆನ್ಸ್ ಕಂಪನಿಗಳಲ್ಲಿ ಒಂದು ಕೋಟಿ ರೂಗೂ ಹೆಚ್ಚು ಮೊತ್ತದ ಜೀವ ವಿಮೆ ಪಾಲಿಸಿ ಮಾಡಿಸುತ್ತಾಳೆ. ಇದಾದ ಬಳಿಕ ಅವರು ಸತ್ತರೆಂದು ದಾಖಲಾತಿಗಳನ್ನು ನೀಡಿ ಕುಟುಂಬದ ಇತರ ಸದಸ್ಯರು ಇನ್ಷೂರೆನ್ಸ್ ಹಣಕ್ಕೆ ಕ್ಲೇಮ್ ಮಾಡುತ್ತಾರೆ.
ನಕಲಿ ಡೆತ್ ಸರ್ಟಿಫಿಕೇಟ್, ನಕಲಿ ಅಂತ್ಯ ಸಂಸ್ಕಾರ ದಾಖಲೆ ಇತ್ಯಾದಿಯನ್ನು ಒದಗಿಸಿರುತ್ತಾರೆ. ಇವರಿಗೆ ಡೆತ್ ಸರ್ಟಿಫಿಕೇಟ್ಗಳನ್ನು ಆಶುತೋಷ್ ಯಾದವ್ ಎಂಬ ವೈದ್ಯ ನೀಡಿರುತ್ತಾನೆ. 2021ರಿಂದ 2023ರ ಮಧ್ಯೆ ಈ ಕುಟುಂಬದವರು 70 ಲಕ್ಷ ರೂ ಹಣವನ್ನು ಕ್ಲೇಮ್ ಮಾಡಿರುತ್ತಾರೆ. ಐಸಿಐಸಿಐ ಪ್ರುಡೆನ್ಷಿಯಲ್, ಮ್ಯಾಕ್ಸ್ ಲೈಫ್, ಭಾರತಿ ಎಎಕ್ಸ್ಎ, ಎಚ್ಡಿಎಫ್ಸಿ ಮತ್ತು ಫ್ಯೂಚರ್ ಜನರಾಲಿ ಎಂಬ ಇನ್ಷೂರೆನ್ಸ್ ಕಂಪನಿಗಳಲ್ಲಿ ಈ ಆರೋಪಿಗಳು ವಿಮೆ ಮಾಡಿಸಿ ಸುಳ್ಳು ಕ್ಲೇಮ್ ಮಾಡಿ ಹಣ ಲಪಟಾಯಿಸಿದ್ದರು.
ಇದನ್ನೂ ಓದಿ: ಪುಣೆ: ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ಐವರು! ಇಲ್ಲಿದೆ ವಿಡಿಯೋ
ಸಿಕ್ಕಿಬಿದ್ದಿದ್ದು ಹೇಗೆ?
ಒಟ್ಟು 70 ಲಕ್ಷ ರೂ ಹಣ ಕ್ಲೇಮ್ ಮಾಡಿ ಪಡೆದಿದ್ದ ಆರೋಪಿಗಳು ಇದೇ ರೀತಿಯಲ್ಲಿ ಇನ್ನೂ ಒಂದು ಇನ್ಷೂರೆನ್ಸ್ ಪಾಲಿಸಿಯಲ್ಲಿ 41 ಲಕ್ಷ ರೂ ಹಣಕ್ಕೆ ಕ್ಲೇಮ್ ಸಲ್ಲಿಸಿದ್ದರು. ಇವರು ಸಲ್ಲಿಸಿದ್ದ ದಾಖಲೆಗಳ ಬಗ್ಗೆ ಇನ್ಷೂರೆನ್ಸ್ ಕಂಪನಿಗೆ ಅನುಮಾನ ಬರುತ್ತದೆ. ಆಗ ಆಂತರಿಕವಾಗಿ ತನಿಖೆ ನಡೆಸಲಾಗುತ್ತದೆ. ಅವರ ಹಿಂದಿನ ಕ್ಲೇಮ್ಗಳ ವಿವರವನ್ನು ಪರಿಶೀಲಿಸಲಾಗುತ್ತದೆ. ಎರಡು ಕ್ಲೇಮ್ಗಳಿಗೆ ಸಲ್ಲಿಸಲಾಗಿದ್ದ ಡೆತ್ ಸರ್ಟಿಫಿಕೇಟ್ಗಳನ್ನು ಒಬ್ಬರೇ ವೈದ್ಯರು ನೀಡಿರುತ್ತಾರೆ. ಆಗ ಮತ್ತಷ್ಟು ಆಳವಾಗಿ ತನಿಖೆ ಮಾಡಿದಾಗ ಎಲ್ಲಾ ದಾಖಲಾತಿಗಳು ನಕಲಿ ಎಂಬುದು ಗೊತ್ತಾಗುತ್ತದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Mon, 1 July 24