ಹಾಸನ ಎಸ್ಪಿ ಕಚೇರಿ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಕೊಂದ ಕಾನ್ಸ್ಟೇಬಲ್
ಅವರಿಬ್ಬರು 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪತಿ ಹಾಸನ ನಗರ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿದ್ದಾರೆ. ದಂಪತಿಗೆ ಮುದ್ದಾದ ಮಕ್ಕಳಿದ್ದಾರೆ. ಆದರೆ, ಇತ್ತೀಚಿಗೆ ಕಳೆದ ನಾಲ್ಕು ದಿನಗಳಿಂದ ದಂಪತಿ ಪ್ರತಿದಿನ ಜಗಳವಾಡುತ್ತಿದ್ದರು. ನಿತ್ಯ ಜಗಳದಿಂದ ರೋಸಿ ಹೋದ ಪತ್ನಿ ಪತಿಯ ವಿರುದ್ಧ ಎಸ್ಪಿಗೆ ದೂರು ನೀಡಲು ಬಂದಾಗ ಪತಿ, ಪೊಲೀಸ್ ಪೇದೆ ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಹಾಸನ, ಜುಲೈ 01: ಕೌಟಿಂಬಕ ಕಲಹ ಹಿನ್ನೆಲೆಯಲ್ಲಿ ದೂರು ನೀಡಲು ಬಂದ ಪತ್ನಿಯನ್ನು ಪೊಲೀಸ್ ಪೇದೆ ಹಾಸನ (Hassan) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಆವರಣದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸ್ ಪೇದೆ (Police Constable) ಲೋಕನಾಥ್ ಕೊಲೆಗೈದ ಆರೋಪಿ. ಮಮತಾ ಮೃತ ದುರ್ದೈವಿ. ಪೊಲೀಸ್ ಪೇದೆ, ಆರೋಪಿ ಲೋಕನಾಥ್ನನ್ನು ಬಂಧಿಸಲಾಗಿದೆ.
ಹಾಸನ ನಗರ ಠಾಣೆಯ ಪೊಲೀಸ್ ಪೇದೆ ಲೋಕನಾಥ್ ಮತ್ತು ಮಮತಾ ದಂಪತಿ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಮುದ್ದಾದ ಮಕ್ಕಳಿದ್ದಾರೆ. ಲೋಕನಾಥ್ ಮತ್ತು ಮಮತಾ ದಂಪತಿ ಕಳೆದ ನಾಲ್ಕೈದು ದಿನಗಳಿಂದ ನಿತ್ಯವೂ ಜಗಳವಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪತಿ ಲೋಕನಾಥ್ ವಿರುದ್ಧ ದೂರು ನೀಡಲು ಪತ್ನಿ ಮಮತಾ ಎಸ್ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಪೊಲೀಸ್ ಪೇದೆ ಮಮತಾಳ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಕೂಡಲೆ, ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದು, ಬಂಧಿಸಿದ್ದಾರೆ.
ಇದನ್ನೂ ಓದಿ: MP, MLA ಹೆಸರೇಳಿ ಥೇಟ್ ಸಿನಿಮಾ ಸ್ಟೈಲ್ನಲ್ಲಿ ಯುವಕನ ಕಿಡ್ನ್ಯಾಪ್; ಇಬ್ಬರು ಅರೆಸ್ಟ್
ಬಳಿಕ, ಮಮತಾ ಅವರನ್ನು ಪೊಲೀಸರು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟಿದ್ದಾರೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಬಗ್ಗೆ ಮಮತಾ ತಂದೆ ಶಾಮಣ್ಣ ಮಾತನಾಡಿ, ಮದುವೆಯಾದ ಆರಂಭದ ದಿನದಿಂದಲೂ ಲೋಕನಾಥ್ ನನ್ನ ಮಗಳು ಮಮತಾಳಿಗೆ ಕಿರುಕುಳ ನೀಡುತ್ತಿದ್ದನು. ಆಸ್ತಿ, ಸೈಟ್ ಹಾಗೂ ಹಣಕ್ಕಾಗಿ ಮಮತಾಳನ್ನು ಪೀಡಿಸುತ್ತಿದ್ದನು. ಈ ಹಿಂದೆ ಕೂಡ ಆರೋಪಿ ಲೋಕನಾಥ್ ದೈಹಿಕವಾಗಿ ಹಲ್ಲೆಗೈದಿದ್ದಾನೆ. ಸಾಕಷ್ಟು ಕಿರುಕುಳ ಕೊಟ್ಟರೂ ನನ್ನ ಮಗಳು ಸಹಿಸಿಕೊಂಡು ಸುಮ್ಮನಿದ್ದಳು. ಪೊಲೀಸರಿಗೆ ದೂರು ಕೊಡು ಅಂತ ನಾವು ಹೇಳಿದರೂ ಮಮತಾ ಸುಮ್ಮನಾಗಿದ್ದಳು. ಈಗ ನನ್ನ ಮಗಳು ಮಮತಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆರೋಪಿ ಲೋಕನಾಥ್ನ ಪೋಷಕರು ಕೂಡ ಕಿರುಕುಳ ನೀಡಿದ್ದಾರೆ. ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಹಾಸನ ಎಸ್ಪಿ ಮೊಹಮ್ಮದ್ ಸುಜಿತಾ ಎಂ.ಎಸ್ ಮಾತನಾಡಿ, ಕೌಟುಂಬಿಕ ಸಮಸ್ಯೆಯಿಂದ ಹತ್ಯೆಯಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಇಂದು (ಜು.01) ಬೆಳಗ್ಗೆ ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿ ಪತ್ನಿ ಬಂದಿದ್ದರು. ಈ ವೇಳೆ ಪೊಲೀಸ್ ಪೇದೆ ಲೋಕನಾಥ್ ಕೂಡ ಬಂದಿದ್ದು, ಇಬ್ಬರು ಕಚೇರಿ ಹೊರಗೆ ನಿಂತು ಮಾತನಾಡಿದ್ದಾರೆ. ಈ ವೇಳೆ ಲೋಕನಾಥ್ ಚಾಕುವಿನಿಂದ ದಾಳಿ ಮಾಡಿದಾಗ ಮಮತಾ ರಕ್ಷಣೆಗಾಗಿ ಎಸ್ಪಿ ಕಚೇರಿಯತ್ತ ಓಡಿ ಬಂದಿದ್ದಾರೆ. ನಮ್ಮ ಕಚೇರಿ ಆವರಣದ ಒಳಗೆ ಓಡಿ ಬಂದ ವೇಳೆ, ಸ್ಥಳದಲ್ಲಿ ಇದ್ದ ನಮ್ಮ ಪೊಲೀಸರು ಮಮತಾರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು ಎಂದು ಹೇಳಿದರು.
ಎಸ್ಪಿ ಕಚೇರಿಯ ಹೊರಗೆ ಚಾಕುವಿನಿಂದ ಇರಿಯಲಾಗಿದೆ. ತನ್ನ ಮೇಲೆ ದಾಳಿ ಆದ ಬಳಿಕ ಆಕೆ ರಕ್ಷಣೆಗಾಗಿ ಕಚೇರಿಯತ್ತ ಬಂದಿದ್ದಾಳೆ. ಆರೋಪಿ ಲೋಕನಾಥ್ ಸಿಪಿಐ ಕಛೇರಿಯಲ್ಲಿ ಕೆಲಸ ಮಾಡುತ್ತಾರೆ. ಘಟನೆ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸಂಬಂಧಿಕರು ದೂರು ನೀಡಿದ ಬಳಿಕ ಘಟನೆಗೆ ಕಾರಣ ಏನು ಎಂಬುವುದು ತಿಳಿಯಲಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Mon, 1 July 24