MP, MLA ಹೆಸರೇಳಿ ಥೇಟ್ ಸಿನಿಮಾ ಸ್ಟೈಲ್ನಲ್ಲಿ ಯುವಕನ ಕಿಡ್ನ್ಯಾಪ್; ಇಬ್ಬರು ಅರೆಸ್ಟ್
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಜೂನ್ 16ರಂದು ನಡೆದ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಹಲಸೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ತನಿಖೆ ವೇಳೆ ಕಿಡ್ನಾಪ್ ಮಾಡಿದ ಅಸಲಿ ಸತ್ಯ ಬಯಲಾಗಿದೆ. ಕೊಟ್ಟ ಹಣ ಬರಲಿಲ್ಲ ಅನ್ನೋ ಕೋಪಕ್ಕೆ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿ ಹಣ ವಸೂಲಿ ಮಾಡಲು ಯತ್ನಿಸಲಾಗಿದೆ.
ಬೆಂಗಳೂರು, ಜೂನ್.30: ಕೆಲ ದಿನಗಳ ಹಿಂದೆ ಥೇಟ್ ಸಿನಿಮಾ ಸ್ಟೈಲ್ನಲ್ಲಿ ಎಂ.ಜಿ. ರಸ್ತೆಯಲ್ಲಿ ನಡೆದ ಕಿಡ್ನಾಪ್ (Kidnap) ಕೇಸ್ ಸಂಬಂಧ ಹಲಸೂರು ಠಾಣೆ ಪೊಲೀಸರು (Halasuru Police Station) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಜೂನ್ 16 ರಂದು MP, MLA ಹೆಸರೇಳಿ ಯುವಕನ ಕಿಡ್ನಾಪ್ ಮಾಡಿದ್ದರು. ಅಪಹರಣ ಬಳಿಕ ಯುವಕನ ಕತ್ತಿನ ಮೇಲೆ ಚಾಕು ಇಟ್ಟು ಐದು ಕೋಟಿ ಹಣ, ಬಿಟ್ ಕಾಯಿನ್ಗಳಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ. ದೇವರ ಕೊಂಡ ಶಿವಕೃಷ್ಣಾಚಾರಿ ಬಂಧಿತ ಆರೋಪಿ.
ಐಷಾರಾಮಿ ಜೀವನ ನಡೆಸುತ್ತಿದ್ದ ರಾಜು ಎಂಬ ಯುವಕನನ್ನು ಆಂಧ್ರ ಮೂಲದ ಆರೋಪಿಗಳ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ರಾಜು ಅಲಿಯಾಸ್ ಅಜ್ಮೀರ ರಾಜು ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡಿದ್ದ. ದುಬೈ ಲೈಫ್, ಐಷಾರಾಮಿ ಕಾರು, ಹಿಂದೆ ಹುಡುಗರು, ಪಾರ್ಶ್ ಲೈಫ್ (ವಿಲಾಸಿ ಜೀವನ) ನಡೆಸುತ್ತಿದ್ದ. ಅಲ್ಲದೆ ಕ್ರಿಕೆಟರ್ಗಳ ಜೊತೆ ಫೋಟೋಸ್ಗಳನ್ನೂ ತೆಗೆಸಿಕೊಂಡಿದ್ದ. ಹೀಗಾಗಿ ಆರೋಪಿಗಳ ಗ್ಯಾಂಗ್ ಈತನೊಬ್ಬ ಶ್ರೀಮಂತನೆಂದು ಭಾವಿಸಿ ಯುವಕನ ಕಿಡ್ನಾಪ್ ಮಾಡಿತ್ತು. ಕಿಡ್ನಾಪ್ ಮಾಡಿ ತೆಲಂಗಾಣಕ್ಕೆ ಕರೆದೊಯ್ದು ಫಾರ್ಮ್ ಹೌಸ್ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು.
ಬಳಿಕ ಕತ್ತಿನ ಮೇಲೆ ಚಾಕು ಇಟ್ಟು ಬೆದರಿಸಿ ಐದು ಕೋಟಿ ಹಣ, ಬಿಟ್ ಕಾಯಿನ್ಗೆ ಬೇಡಿಕೆ ಇಟ್ಟಿದ್ದರು. ಇಂಟರ್ ನ್ಯಾಷನಲ್ ಅಕೌಂಟ್ನಲ್ಲಿರುವ ಹಣ ಟ್ರಾನ್ಸ್‌ಫರ್ ಮಾಡುವಂತೆ ಬೆದರಿಸಿದ್ದರು. ಇನ್ನು ಇತ್ತ ರಾಜು ಸ್ನೇಹಿತ ಕಿಡ್ನಾಪ್ ಬಗ್ಗೆ ಹಲಸೂರು ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕಾಲಿನ ಗಾಯಕ್ಕೆ ಆಸ್ಪತ್ರೆಗೆ ದಾಖಲಾದ ಬಾಲಕನ ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಎಡವಟ್ಟು
ಕಿಡ್ನಾಪ್ ಆದ ಯುವಕನ ಮೇಲೂ ಇದೆ ಪ್ರಕರಣ, ತನಿಖೆ ವೇಳೆ ಸತ್ಯ ಬಯಲು
ಕಿಡ್ನಾಪ್ ಆಗಿರುವ ರಾಜು ವಿರುದ್ಧ ತೆಲಂಗಾಣದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ತೆಲಂಗಾಣದ ಸಿಸಿಎಸ್ ನಲ್ಲಿ ಕಿಡ್ನಾಪ್ ಆಗಿದ್ದ ರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ. ರಾಜುವನ್ನ ಸಿಸಿಎಸ್ ಪೊಲೀಸರು ಮುಂಬೈನಲ್ಲಿ ಬಂಧಿಸಿ ಕರೆ ತಂದಿದ್ದರು. ಆ ಬಳಿಕ ವಂಚನೆ ಕೇಸ್ ನಲ್ಲಿ ಜಾಮೀನು ಪಡೆದು ರಾಜು ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದ. ಕಳೆದ ಆರು ತಿಂಗಳಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿನ ಹೋಟೆಲ್ನಲ್ಲಿ ವಾಸವಾಗಿದ್ದ.
ಕಿಡ್ನಾಪ್ ಆಗಿರುವ ರಾಜು ಮೂಲತಃ ತೆಲಂಗಾಣದವನು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಜಗನ್ ಹಾಗೂ ಸಹೋದರ ಅನಿಲ್ ಹೆಸರು ಬಳಿಸಿಕೊಂಡು ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚನೆ ಮಾಡಿರುವ ಆರೋಪ ರಾಜು ವಿರುದ್ಧ ಕೇಳಿ ಬಂದಿದೆ. ಹಣ ಕೊಟ್ಟಿರುವಂತ ವ್ಯಕ್ತಿಗಳು ಪೊಲೀಸರಿಗೆ ದೂರು ಕೊಟ್ಟು ರಾಜು ಅರೆಸ್ಟ್ ಆಗಿದ್ದ. ತೆಲಂಗಾಣ ಪೊಲೀಸರ ಬಂಧನದ ಬಳಿಕ ಜಾಮೀನು ಪಡೆದು ಹೊರಬಂದು ಬೆಂಗಳೂರಿನಲ್ಲಿ 6 ತಿಂಗಳಿನಿಂದ ವಾಸವಿದ್ದ.
ಕೊಟ್ಟ ಹಣ ಬರಲಿಲ್ಲ ಅನ್ನೋ ಕೋಪಕ್ಕೆ ರಾಜು ಬೆಂಗಳೂರಿನಲ್ಲಿರುವ ವಿಚಾರ ತಿಳಿದು ಕಿಡ್ನಾಪ್ ಮಾಡಲಾಗಿದೆ ಎಂದು ತನಿಖೆಯ ವೇಳೆ ಕಾರಣ ರಿವೀಲ್ ಆಗಿದೆ. ಹಲಸೂರು ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಒದಲು ಇದರ ಮೇಲೆ ಕ್ಲಿಕ್ ಮಾಡಿ