ಆರ್ ಅಶೋಕ್ ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್ ಈಶ್ವರ್
ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್, ಜಾತಿಗಳನ್ನು ಒಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿಲ್ಲ ಎಂದು ವಾಗ್ದಾಳಿ ಮಾಡಿದ್ದರು. ಇದಕ್ಕೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು, ಜೂನ್ 30: ಆರ್ ಆಶೋಕ್ (R Ashok) ಕರ್ನಾಟಕದ ಅತ್ಯಂತ ಅಸಮರ್ಥ ವಿಪಕ್ಷ ನಾಯಕ ಅಂತ ನನ್ನ ಭಾವನೆ. ಬಿಜೆಪಿಯವರಿಗೆ ಗತಿ ಇರಲಿಲ್ಲ ಅಂತ ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಪಕ್ಷದ ಆಂತರಿಕ ವಿಚಾರ ನಾವು ಬಗೆಹರಿಸುತ್ತೇವೆ. ನಿಮಗ್ಯಾಕೆ ಅದರ ತೆವಲು? ಎಂದು ಚಿಕ್ಕಬಳ್ಳಾಪುರ (Chikkaballapur) ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ಮಾಡಿದ್ದಾರೆ.
ಆರ್ ಅಶೋಕ್ ವೈಯಕ್ತಿಕ ಟೀಕೆಗೆ ಬರಬೇಡಿ. ನಿಮ್ಮ ಪಕ್ಷದ ಸಮಸ್ಯೆ ಬಗ್ಗೆ ಮಾತನಾಡಿ, ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಯಾವಾಗ ಕೋಪಿಸಿಕೊಂಡು ಎನ್ಡಿಎ ಬಿಟ್ಟು ಹೋಗುತ್ತಾರೆ ಗೊತ್ತಿಲ್ಲ. ಮೊದಲು ಎನ್ಡಿಎ ಸರ್ಕಾರವನ್ನು ಗಟ್ಟಿಯಾಗಿ ಇಟ್ಟುಕೊಳ್ಳಿ ಎಂದರು.
ವಿರೋಧ ಪಕ್ಷದ ನಾಯಕನಾಗಿ ಹೇಗೆ ಕೆಲಸ ಮಾಡಬೇಕು ಅಂತ ಆರ್ ಅಶೋಕ್ ಅವರಿಗೆ ಗೊತ್ತಿಲ್ಲ ಅಂದ್ರೆ ಸಿದ್ದರಾಮಯ್ಯ ಅವರ ಬಳಿ ತರಬೇತಿ ತೆಗೆದುಕೊಳ್ಳಲಿ. ಬಳ್ಳಾರಿವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿದರು. ಅದು ಸಿದ್ದರಾಮಯ್ಯ ತಾಕತ್ತು. ಬಿಜೆಪಿಯವರು ಗಂಭೀರ ವಿಚಾರದ ಬಗ್ಗೆ ಮಾತಾಡಿದ್ದೇ ನಾನು ನೋಡಿಲ್ಲ ಎಂದು ಟಾಂಗ್ ಕೊಟ್ಟರು.
ಹಾಲಿನ ದರ ಹೆಚ್ಚಿಸಿ ಅಂತ ಯಾರಾದರು ಅರ್ಜಿ ಕೊಟ್ಟಿದ್ರಾ ಅಂತ ಪ್ರಶ್ನೆ ಮಾಡ್ತಾರೆ, ಕೋಲಾರ ಚಿಕ್ಕಬಳ್ಳಾಪುರದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಹೀಗಾಗಿ, ಡೈರಿಗೆ ಹೆಚ್ಚಿಗೆ ಹಾಲು ತೆಗೆದುಕೊಂಡು ಬಂದ ರೈತರಿಗೆ ವಾಪಸ್ ತೆಗೆದುಕೊಂಡು ಹೋಗಿ ಅಂತ ಹೇಳಲು ಆಗಲ್ಲ. ರೈತರ ಕಷ್ಟ ಆರ್ ಅಶೋಕ್ ಅವರಿಗೆ ಏನು ಗೊತ್ತು? ರೈತರ ಸಮಸ್ಯೆ ಬಗ್ಗೆ ಆರ್ ಅಶೋಕ್ ಎಲ್ಲಿ ಧ್ವನಿ ಎತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಒಕ್ಕಲಿಗ ಸ್ವಾಮೀಜಿಗಳ ವಿರುದ್ಧ ಏಕವಚನ ಪ್ರಯೋಗ ಆರೋಪ; ಸಿಎಂ ವಿರುದ್ದ ಆರ್ ಅಶೋಕ ಕಿಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ