Gang Rape: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಚೂಪಾದ ವಸ್ತು ಹಾಕಿದ ಕಾಮುಕರು!

| Updated By: ಸುಷ್ಮಾ ಚಕ್ರೆ

Updated on: Jan 13, 2022 | 4:21 PM

Crime News: ಅತ್ಯಾಚಾರವೆಸಗಿರುವ ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದಿರುವ ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮಮತಾ ಭೂಪೇಶ್, ಬಾಲಕಿಯ ಕುಟುಂಬಕ್ಕೆ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Gang Rape: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಚೂಪಾದ ವಸ್ತು ಹಾಕಿದ ಕಾಮುಕರು!
ಸಾಂದರ್ಭಿಕ ಚಿತ್ರ
Follow us on

ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಆಕೆಯ ಗುಪ್ತಾಂಗಕ್ಕೆ ಚೂಪಾದ ವಸ್ತುವನ್ನು ಹಾಕಿ ಹಿಂಸೆ ಮಾಡಿ ಮೇಲ್ಸೇತುವೆಯಿಂದ ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಬಾಲಕಿ ವಿಶೇಷಚೇತನಳಾಗಿದ್ದು, ಅಲ್ವಾರ್‌ನ ತಿಜಾರಾ ಫ್ಲೈ ಓವರ್​ನ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.

ತಕ್ಷಣ ಆ ಬಾಲಕಿಯನ್ನು ಅಲ್ವಾರ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಆ ಬಾಲಕಿಯ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಆಕೆ ಅಪಾಯದಿಂದ ಪಾರಾಗಿದ್ದಾಳೆ.

“ವೈದ್ಯರು ಆಕೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ಆಕೆ ಅಪಾಯದಿಂದ ಪಾರಾಗಿದ್ದಾಳೆ” ಎಂದು ರಾಜಸ್ಥಾನದ ಸಚಿವ ಪರ್ಸಾದಿ ಲಾಲ್ ಮೀನಾ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯ ದೇಹದ ಖಾಸಗಿ ಭಾಗಗಳಿಗೆ ಚೂಪಾದ ವಸ್ತುಗಳನ್ನು ಹಾಕಿ ಹಿಂಸೆ ನೀಡಲಾಗಿದೆ. ಇದರಿಂದ ಆಕೆಯ ಗುಪ್ತಾಂಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಗುಪ್ತಾಂಗಕ್ಕೆ ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಆ ಬಾಲಕಿಯ ದೇಹದ ಖಾಸಗಿ ಅಂಗಗಳಿಗೆ ಆಳವಾದ ಗಾಯಗಳಾಗಿವೆ. ವೈದ್ಯರು ಬಾಲಕಿಯ ಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ಜೈಪುರದ ಜೆಕೆ ಲೋನ್ ಆಸ್ಪತ್ರೆಯ ಡಾ. ಅರವಿಂದ್ ಶುಕ್ಲಾ ತಿಳಿಸಿದ್ದಾರೆ.

ಪೊಲೀಸರಿ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಘಟನೆ ನಡೆದ 25 ಕಿಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗುವುದು ಎಂದು ಪರ್ಸಾದಿ ಲಾಲ್ ಮೀನಾ ಹೇಳಿದ್ದಾರೆ.

ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದಿರುವ ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮಮತಾ ಭೂಪೇಶ್, ಬಾಲಕಿಯ ಕುಟುಂಬಕ್ಕೆ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 6 ಲಕ್ಷದಲ್ಲಿ 5 ಲಕ್ಷ ರೂ.ಗಳನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು 1 ಲಕ್ಷವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಲಿದೆ. ಹಾಗೇ, ರಾಜಸ್ಥಾನದ ಸಾಮಾಜಿಕ ನ್ಯಾಯ ಸಚಿವ ಟಿಕಾರಾಂ ಜೂಲಿ ಅಲ್ವಾರ್‌ನಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ 3.5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.

ಇದನ್ನೂ ಓದಿ: Gang Rape: ಸಾಮೂಹಿಕ ಅತ್ಯಾಚಾರ ಪ್ರಕರಣ; ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ

Crime News: ಜೈಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮೊಬೈಲನ್ನೇ ನುಂಗಿದ ಕೈದಿ!