ಮಂಗಳೂರು: ಮೊಬೈಲ್ಗಾಗಿ ಕೊಲೆ ಮಾಡಿದ ಗ್ಯಾಂಗ್; ನಾಲ್ಕು ಜನ ಆರೋಪಿಗಳ ಬಂಧನ
ಮಂಗಳೂರಿನ ನೆಹರೂ ಮೈದಾನ ಕಳ್ಳ ಖದೀಮರ ಪಾಲಿನ ಅಡ್ಡವಾಗಿದೆ. ಮಂಗಳೂರು ನಗರದಲ್ಲಿ ಕ್ರೈಂ ಕಂಟ್ರೋಲ್ ಮಾಡುವ ಪ್ರಧಾನ ಕಛೇರಿ ಇರುವುದು, ಇದೇ ನೆಹರೂ ಮೈದಾನದ ಕೂಗಳತೆ ದೂರದಲ್ಲಿ. ಹೌದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಎದುರಿಗೆ ಇರುವ ಈ ನೆಹರು ಮೈದಾನ ಕಳ್ಳರ ಪಾಲಿನ ಸ್ವರ್ಗ. ಕಳ್ಳತನ, ಹಲ್ಲೆ, ದರೋಡೆ ನಡೆಯುತ್ತಿದ್ದ ಜಾಗದಲ್ಲೀಗ ಇದೇ ವಿಚಾರಕ್ಕೆ ಕೊಲೆ ನಡೆದಿದೆ.
ದಕ್ಷಿಣ ಕನ್ನಡ: ಏಪ್ರಿಲ್ 18 ರಂದು ಸಂಜೆ ಜಿಲ್ಲೆಯ ಬಾರಿಂಜ ನಿವಾಸಿ ಜನಾರ್ಧನ ಪೂಜಾರಿ ಎಂಬುವವರು ಮಂಗಳೂರಿನ ನೆಹರು ಮೈದಾನದ ಪುಟ್ಬಾಲ್ ಗ್ರೌಂಡ್ನ ಪಬ್ಲಿಕ್ ಗ್ಯಾಲರಿ ಮೇಲೆ ಮಲಗಿದ್ರು. ವೃತ್ತಿಯಲ್ಲಿ ಚಾಲಕನಾಗಿದ್ದ ಜನಾರ್ಧನ ಪೂಜಾರಿ ಡ್ಯೂಟಿ ಮುಗಿಸಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ನಾಲ್ಕು ಜನ ಕ್ರಿಮಿನಲ್ಗಳ(Criminals)ಗುಂಪು ಇವರ ಮೇಲೆ ಕಣ್ಣಿಟ್ಟಿತ್ತು. ಇವರು ಮಲಗಿದ್ದ ಜಾಗದ ಸಮೀಪ ಕಟ್ಟೆಯಲ್ಲಿ ಕುಳಿತುಕೊಂಡ ನಾಲ್ವರು, ದರೋಡೆಗೆ ಸ್ಕೆಚ್ ಹಾಕಿದ್ದರು. ನಾಲ್ಕು ಜನ ಒಂದೆಡೆ ಕುಳಿತು ಜನಾರ್ಧನ ನಿದ್ರಾವಸ್ಥೆ ತಲುಪುವವರೆಗೂ ಕಾದು ಬಳಿಕ ಅಲ್ಲಿಂದ ಒಬ್ಬ ಹೋಗಿ ಜನಾರ್ಧನ ನಿದ್ದೆ ಮಾಡಿದ್ದಾನಾ ಎಂದು ಚೆಕ್ ಮಾಡಿಕೊಂಡು ದರೋಡೆ ಮಾಡಲು ಮುಂದಾಗಿದ್ದರು. ಅಷ್ಟೊತ್ತಿಗೆ ಜನಾರ್ಧನ ಎಚ್ಚರಗೊಂಡಿದ್ದಾರೆ. ಏನು ಮಾಡುತ್ತಿದ್ದೀಯ ಎಂದು ಕೇಳಿದ್ದಾರೆ. ಈ ವೇಳೆ ಖದೀಮರು ಮೊಬೈಲ್ ಮತ್ತು ಹಣ ಕೊಡು, ಇಲ್ಲ ಸಾಯಿಸಿಬಿಡುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಇದಕ್ಕೆ ಪ್ರತಿರೋದ ವ್ಯಕ್ತಪಡಿಸಿದ ಜನಾರ್ಧನ ಪೂಜಾರಿಗೆ ಹಿಂದಿನಿಂದ ಬಲವಾಗಿ ಹೊಡಿದಿದ್ದಾರೆ. ಬಳಿಕ ಅತನ ಬಳಿ ಇದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡಿದ್ದಾರೆ. ಒಬ್ಬ ಆತನಿಗೆ ಬಲವಾಗಿ ಒದ್ದು ಮೇಲಿಂದ ಕಳೆಗೆ ತಳ್ಳಿದ್ದಾನೆ. ಕೆಳಗೆ ಬಿದ್ದ ಜನಾರ್ಧನ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ನಿತ್ರಾಣನಾಗಿದ್ದಾನೆ ಎಂದು ಸ್ಥಳದಲ್ಲಿದ್ದವರು ಮತ್ತು ಪೊಲೀಸರು ಜನಾರ್ಧನ ಪೂಜಾರಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಜನಾರ್ಧನ ಪೂಜಾರಿ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ. ತಕ್ಷಣ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ತಿರುವನಂತಪುರಂನ ಪ್ರಶಾಂತ್, ವಿಟ್ಲದ ಶರತ್.ವಿ, ಕೊಡಗಿನ ಕುಶಾಲನಗರದ ಜಿ.ಕೆ.ರವಿಕುಮಾರ್ ಅಲಿಯಾಸ್ ನಂದೀಶ್, ಕೊಣಾಜೆಯ ವಿಜಯ ಕುಟಿನ್ಹಾ ಬಂಧಿತ ಆರೋಪಿಗಳು. ರವಿಕುಮಾರ್ ಅಲಿಯಾಸ್ ನಂದೀಶ್ 2009 ರಲ್ಲಿ ಕುಶಾಲನಗರದಲ್ಲಿ ಒಂದು ಕೊಲೆಯ ಆರೋಪಿಯಾಗಿದ್ದಾನೆ. ಆರೋಪಿ ಶರತ್ 2022 ರಲ್ಲಿ ಮನೆ ಕಳ್ಳತನ ಮತ್ತು ಸುಲಿಗೆಯಲ್ಲಿ ಜೈಲಿಗೆ ಹೋಗಿ ಬಂದವನಾಗಿದ್ದಾನೆ. ಆರೋಪಿ ವಿಜಯ ಕುಟಿನ್ಹಾ 2022 ರಲ್ಲಿ ಪೋಕ್ಸೋ ಕಾಯ್ದೆ ಅಡಿ ಬಂಧನವಾಗಿದ್ದ. ಹೆಬಿಚುವಲ್ ಅಫೆಂಡರ್ಸ್ ಆದ ಈ ಕ್ರಿಮಿನಲ್ಗಳು ಕೊಲೆ ಮಾಡಿ ದರೋಡೆ ಮಾಡಿಕೊಂಡು ಹೋಗಿದ್ದರು.
ಇದನ್ನೂ ಓದಿ: ರಾಜಕೀಯ ತಿರುವು ಪಡೆದುಕೊಂಡ ಬಿಜೆಪಿ ಯುವ ಮೋರ್ಚಾ ಮುಖಂಡ ಹತ್ಯೆ ಕೇಸ್; ಇದು ರಾಜಕೀಯ ಕೊಲೆ ಎಂದ ಪ್ರಲ್ಹಾದ್ ಜೋಶಿ
2022 ರ ಜನವರಿಯಲ್ಲಿ ಟಿವಿ9 ಕ್ಯಾಮೆರಾದಲ್ಲಿ ಸೆರೆಯಾದ ಸಿನಿಮೀಯ ರೀತಿಯಲ್ಲಿ ಅಸಲಿ ಪೊಲೀಸ್ ಚೇಸಿಂಗ್ನ ದೃಶ್ಯ ದೇಶಾದ್ಯಂತ ಸದ್ದು ಮಾಡಿತ್ತು. ಅಲ್ಲೂ ಕೂಡ ಬಂಧಿತರಾಗಿದ್ದ ಕಳ್ಳರು ಇದೇ ರೀತಿ ಕ್ರಿಮಿನಲ್ ಗ್ಯಾಂಗ್ ಸದಸ್ಯರಾಗಿದ್ದರು. ಅಂದು ಪೊಲೀಸ್ ಚೇಸಿಂಗ್ ರಿಯಲ್ ಆಪರೇಷನ್ನಲ್ಲಿ ಟಿವಿ9 ಪ್ರಮುಖ ಪಾತ್ರ ವಹಿಸಿತ್ತು. ಆಗ ಪೊಲೀಸ್ ಇಲಾಖೆ ಈ ಖದೀಮರ ಮೇಲೆ ಒಂದು ಕಣ್ಣಿಟ್ಟಿತ್ತು. ಈಗ ಮತ್ತೆ ಅದೇ ರೀತಿ, ಅದೇ ಸ್ಥಳದಲ್ಲಿ ಕಳ್ಳರು ಮತ್ತೆ ತಮ್ಮ ಕೃತ್ಯವನ್ನು ಮುಂದುವರೆಸಿದ್ದು ಪೊಲೀಸರು ಇನ್ನಷ್ಟು ಅಲರ್ಟ್ ಆಗಬೇಕಿದೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:32 am, Sun, 23 April 23