Sign In

By signing in or creating an account, you agree with Associated Broadcasting Company's Terms & Conditions and Privacy Policy.

​ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ: ಘಟನೆಯಲ್ಲಿ ಕ್ರಿಮಿನಲ್​ ಹಿನ್ನೆಲೆಯುಳ್ಳವರಿದ್ದಾರೆ- ಆರಗ ಜ್ಞಾನೇಂದ್ರ

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಶಿಕಾರಿಪುರ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕಾರಿಪುರಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದರು.

​ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ: ಘಟನೆಯಲ್ಲಿ ಕ್ರಿಮಿನಲ್​ ಹಿನ್ನೆಲೆಯುಳ್ಳವರಿದ್ದಾರೆ- ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us
ವಿವೇಕ ಬಿರಾದಾರ
|

Updated on:Mar 28, 2023 | 2:44 PM

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ (BS Yediyurapp) ಅವರ ಶಿಕಾರಿಪುರ (Shikaripur) ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಶಿಕಾರಿಪುರಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ (BY Raghavendra) ಜೊತೆ ಸಚಿವ ಆರಗ ಜ್ಞಾನೇಂದ್ರ ಚರ್ಚಿಸಿದ್ದಾರೆ. ಕೇಸ್​ ದಾಖಲಿಸಬೇಡಿ ಎಂದು ಬಿಎಸ್​ ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಕಲ್ಲುತೂರಾಟ ವೇಳೆ ಕೆಲವು ಪೊಲೀಸರಿಗೆ ಪೆಟ್ಟು ಬಿದ್ದಿದೆ. ಈ ಘಟನೆ ಕುರಿತು ತನಿಖೆ ಮಾಡುತ್ತೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿಕಾರಿಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಗಲಾಟೆಯಲ್ಲಿ ಕೆಲವರು ಕ್ರಿಮಿನಲ್​ ಹಿನ್ನೆಲೆಯುಳ್ಳವರಿದ್ದಾರೆ ಎಂದು ತಿಳಿಸಿದರು.

ಇಂತಹ ವಾತಾವರಣ ಸೃಷ್ಟಿ ಮಾಡಿದ್ದು ಬಿಜೆಪಿ ಸರ್ಕಾರ

ಯಡಿಯೂರಪ್ಪ ಮನೆ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮಾತನಾಡಿ ಇಂತಹ ವಾತಾವರಣ ಸೃಷ್ಟಿ ಮಾಡಿದ್ದು ಬಿಜೆಪಿ ಸರ್ಕಾರ. ಸರ್ಕಾರದ ನಿರ್ಧಾರದಿಂದ ಬಂಜಾರ ಸಮಾಜಕ್ಕೆ ಆತಂಕ ಉಂಟಾಗಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ

ಇಂದು ಕೂಡ ಮುಂದುವರೆದ ಪ್ರತಿಭಟನೆ

ಒಳಮೀಸಲಾತಿ ಜಾರಿಗೆಗೆ ಬಂಜಾರ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಸಮುದಾಯದವರು ಇಂದು (ಮಾ.28) ಕೂಡ ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಗ್ರಾಮದಲ್ಲಿ ರಸ್ತೆ ತಡೆದು, ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳ ಮೀಸಲಾತಿ ಹಿಂಪಡೆಯುವೆಂತೆ ಬಂಜಾರ ಸಮಾಜ ಸರ್ಕಾರಕ್ಕೆ ಒತ್ತಾಯಿಸಿದೆ.

ಮಾ.27 ರ ಪ್ರತಿಭಟನೆಯಲ್ಲಿ ಕಾಂಗ್ರೆಸ್​ ನಾಯಕರು ಭಾಗಿ

ಮಾರ್ಚ್​.27 ರಂದು ನಡೆದ ಪ್ರತಿಭಟನೆಯ ನೇತೃತ್ವವನ್ನು ಬಂಜಾರ ಸಮಾಜದ ಸಾಲೂರು ಮಠದ ಸೈನಾ ಭಗತ್ ಸ್ವಾಮೀಜಿ ವಹಿಸಿಕೊಂಡಿದ್ದರು.  ಈ ಪ್ರತಿಭಟನೆಯಲ್ಲಿ ಶಿಕಾರಿಪುರ ತಾಲೂಕಿನ ಬಂಜಾರ್ ಸಮಾಜದ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಶಿಕಾರಿಪುರ ತಾಲೂಕು ಬಂಜಾರ ಸಂಘದ ಅಧ್ಯಕ್ಷ ರಾಘವೇಂದ್ರ ನಾಯ್ಕ ಮತ್ತು ತಾಲೂಕು ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್​  ನಾಯ್ಕ್ ಹಾಗೂ ಶಿಕಾರಿಪುರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪುನೀತ್ ನಾಯ್ಕ ಪಾಲ್ಗೊಂಡಿದ್ದರು. ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  ರಾಘವೇಂದ್ರ ನಾಯ್ಕ್ ಕಾಂಗ್ರೆಸ್ ಮುಖಂಡ ನರಸಿಂಹ ನಾಯ್ಕ್ ಪುತ್ರ.

ಬಿಎಸ್​ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣ

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಮಾ.27) ರಂದು ಶಿಕಾರಿಪುರ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದರು. ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಅಲ್ಲದೇ ಧರಣಿ ವೇಳೆ ಗಲಾಟೆ ಆಗುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು. ಈ ವಿಷಯ ಶಿಕಾರಿಪುರ ಪೊಲೀಸರಿಗೆ ತಿಳಿದಿದ್ದರೂ, ಪ್ರತಿಭಟನೆಯನ್ನು ಹಗುರವಾಗಿ ಪರಿಗಣಿಸಿದ್ದು, ಮತ್ತು ನಿರ್ಲಕ್ಷ್ಯದಿಂದ ಕಲ್ಲುತೂರಾಟ ನಡೆದಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Tue, 28 March 23