ಹೊಸ ಮೀಸಲಾತಿ ನೀತಿ ವಿರುದ್ಧ ಆಕ್ರೋಶ; ರಾಜ್ಯದ ಹಲವೆಡೆ ಪ್ರತಿಭಟನೆ, ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ
ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಹೊಸ ಮೀಸಲಾತಿ ನೀತಿ (New Reservation Policy) ವಿರೋಧಿಸಿ ಮಂಗಳವಾರ ಕರ್ನಾಟಕದ ವಿವಿಧೆಡೆ ಪ್ರತಿಭಟನೆಗಳು (Protests) ನಡೆದವು.
ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಹೊಸ ಮೀಸಲಾತಿ ನೀತಿ (New Reservation Policy) ವಿರೋಧಿಸಿ ಮಂಗಳವಾರ ಕರ್ನಾಟಕದ ವಿವಿಧೆಡೆ ಪ್ರತಿಭಟನೆಗಳು (Protests) ನಡೆದವು. ಒಳಮೀಸಲಾತಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಂಜಾರ ಮತ್ತು ಲಂಬಾಣಿ ಸಮುದಾಯದವರು ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು. 2ಬಿ ಮತ್ತು ಒಬಿಸಿ ವರ್ಗಗಳ ಅಡಿಯಲ್ಲಿ ಮುಸ್ಲಿಮರಿಗೆ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಸಮುದಾಯ ಕೂಡ ಹಲವೆಡೆ ಪ್ರತಿಭಟನೆಗಳನ್ನು ನಡೆಸಿದೆ. ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಭಾರೀ ಪ್ರತಿಭಟನೆಗಳು ನಡೆದಿವೆ.
ಚಿಕ್ಕಮಗಳೂರಿನಲ್ಲಿ ರಸ್ತೆ ತಡೆ
ಒಳ ಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದವರು ರಾಷ್ಟ್ರೀಯ ಹೆದ್ದಾರಿ-206 ತಡೆ ನಡೆಸಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಒಳ ಮೀಸಲಾತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಂಧಿತರ ಬಿಡುಗಡೆಗೆ ಶಿವಮೊಗ್ಗದಲ್ಲಿ ಪ್ರತಿಭಟನೆ
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದರು. ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸದ ಬಳಿ ಸೋಮವಾರ ನಡೆದ ಪ್ರತಿಭಟನೆಗೆ ಸಂಬಂಧಿಸಿ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಿಎಸ್ವೈ ನಿವಾಸದ ಮೇಲೆ ಕಲ್ಲೆಸೆತ ಹಾಗೂ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ, ರಾಘವೇಂದ್ರ, ಪುನೀತ್ ಹಾಗೂ ಕುಮಾರ್ ಎಂಬವರನ್ನು ಬಂಧಿಸಲಾಗಿತ್ತು. ಬಂಧಿತರನ್ನು ಬಿಡುಗಡೆ ಮಾಡಬೇಕೆಂದು ಬಂಜಾರ, ಕೊರಚ, ಭೋವಿ ಹಾಗೂ ಕೊರಮ ಸಮುದಾಯಗಳ ಜನರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ವಿಜಯನಗರದಲ್ಲಿ ಮುಸ್ಲಿಮರಿಂದ ಪ್ರತಿಭಟನೆ
ಮುಸ್ಲಿಂ ಸಮುದಾಯಕ್ಕೆ 2ಬಿ ಮತ್ತು ಒಬಿಸಿ ಮೀಸಲಾತಿಯನ್ನು ರದ್ದುಪಡಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿಜಯನಗರದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.
ಬೆಳಗಾವಿಯಲ್ಲೂ ಮುಸ್ಲಿಮರಿಂದ ಪ್ರತಿಭಟನೆ
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಯನ್ನು ರದ್ದುಪಡಿಸಿದ ಬಿಜೆಪಿ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯದವರು ಬೆಳಗಾವಿಯ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.
ಬಾಗಲಕೋಟೆಯಲ್ಲಿ ಲಂಬಾಣಿ ಸಮುದಾಯದವರಿಂದ ಆಕ್ರೋಶ
ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಹೊಸ ಮೀಸಲಾತಿ ಪದ್ಧತಿ ವಿರೋಧಿಸಿ ಬಾಗಲಕೋಟೆಯಲ್ಲಿ ಲಂಬಾಣಿ ಸಮುದಾಯದವರು ಪ್ರತಿಭಟನೆ ನಡೆಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸರ್ಕಾರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ