ತನ್ನ ಕಿರಿ ವಯಸ್ಸಿನ ಯುವಕನ ಜತೆ ಸಲಿಂಗ ಸಂಬಂಧ: ಬೆಂಗಳೂರಿನ ಉದ್ಯಮಿ ಜೀವಕ್ಕೆ ಕುತ್ತು ತಂದ ಸಲಿಂಗಕಾಮ
ಬೆಂಗಳೂರಿನಲ್ಲಿ ಉದ್ಯಮಿಯನ್ನು ಹತ್ಯೆ ಬಳಿಕ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದ ಸತ್ಯಾಂಶ ಬಯಲಿಗೆ ಬಂದಿದ್ದು, ತನಿಖೆ ವೇಳೆ ಕೊಲೆ ಆರೋಪಿ ಸಲಿಂಗಕಾಮ ಸಂಗತಿ ವಿಚಾರ ಬಾಯ್ಬಿಟ್ಟಿದ್ದಾನೆ. ಏನಿದು ಪ್ರಕರಣ? ಈ ಕೆಳಗಿದೆ ನೋಡಿ.
ಬೆಂಗಳೂರು: ನಗರದ ನಾಯಂಡಹಳ್ಳಿ ಮನೆಯಲ್ಲಿ ಫೆಬ್ರುವರಿ 28ರಂದು ನಡೆದಿದ್ದ ಉದ್ಯಮಿ ಲಿಯಾಖತ್ ಅಲಿ ಖಾನ್ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸಲಿಂಗಕಾಮ ಸಂಬಂಧ ಇಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಚಂದ್ರಾಲೇಔಟ್ 1ನೇ ಹಂತದ ನಿವಾಸಿ ಲಿಯಾಖತ್ ಅಲಿ ಖಾನ್ (46) ಫೆ. 28ರಂದು ಕೊಲೆಯಾಗಿದ್ದ. ಹತ್ಯೆ ಬಳಿಕ ಆತ್ಮಹತ್ಯೆಗೆ ಯತ್ನಿಸಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಇಲಿಯಾಸ್ (26) ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗುತ್ತಿದ್ದಂತೆಯೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಲಿಂಗಕಾಮ ವಿಚಾರ ಬಯಲಾಗಿದೆ.
ಇದನ್ನೂ ಓದಿ: ಭಾರತೀಯ-ಅಮೇರಿಕನ್ ಸಲಿಂಗ ದಂಪತಿ! ಅದು ಹೇಗೆ ಸಾಧ್ಯ ಅಂತೀರಾ..? ಇಲ್ಲಿವೆ ನೋಡಿ ಫೋಟೋಸ್
ಜೆಜೆ ನಗರದಲ್ಲಿ ಇಲಿಯಾಸ್, ಪಾಲಕರ ಜತೆ ನೆಲೆಸಿದ್ದ. ಗಂಗೊಂಡನಹಳ್ಳಿಯಲ್ಲಿ ‘ರಾಯಲ್ ಕಮ್ಯುನಿಕೇಷನ್’ ಜಾಹೀರಾತು ಪ್ರಿಂಟಿಗ್ ಪ್ರೆಸ್ ನಡೆಸುತ್ತಿದ್ದ ಲಿಯಾಖತ್, 2 ಮದುವೆ ಆಗಿದ್ದ. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. 2022ರ ಫೆಬ್ರವರಿಯಲ್ಲಿ ಮತ್ತೊಂದು ವಿವಾಹವಾಗಿದ್ದ. ಆದರೂ ಲಿಯಾಖತ್ ತನ್ನ ಕಿರಿಯ ವಯಸ್ಸಿನ 26 ವರ್ಷದ ಇಲಿಯಾಸ್ ಜತೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಹೊಂದಿದ್ದ. ಕಳೆದ 3 ವರ್ಷಗಳ ಹಿಂದೆ ಜಿಮ್ಯೊಂದರಲ್ಲಿ ಲಿಯಾಖತ್ ಮತ್ತು ಇಲಿಯಾಸ್ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಬಳಿಕ ಅದು ಸಲಿಂಗಕಾಮಕ್ಕೆ ತಿರುಗಿದ್ದು, ನಾಯಂಡಹಳ್ಳಿಯ ಮೆಟ್ರೋ ಲೇಔಟ್‌ನಲ್ಲಿ ಲಿಯಾಖತ್‌ಗೆ ಸೇರಿದ ಹಳೆಯ ಮನೆಯಲ್ಲಿ ಇಬ್ಬರು ಭೇಟಿ ಆಗುತ್ತಿದ್ದರು.
ಇತ್ತ ಆರೋಪಿ ಇಲಿಯಾಸ್‌ಗೆ ಮದುವೆ ಮಾಡಲು ಪಾಲಕರು ಮುಂದಾಗಿದ್ದರು. ಆದ್ರೆ, ಇಲಿಯಾಸ್ ವಿರೋಧಿಸಿದ್ದ. ಅದಾದ ಕೆಲ ತಿಂಗಳ ಬಳಿಕ ಮತ್ತೆ ಇಲಿಯಾಸ್‌ಗೆ ಪಾಲಕರು ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಇನ್ನೊಂದೆಡೆ ಲಿಯಾಖತ್ ಜೊತೆಗಿನ ಸಂಬಂಧದ ಬಗ್ಗೆ ಮನೆಯವರಿಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂಬ ಆತಂಕದಿಂದ ಇಲಿಯಾಸ್ ಭಯಗೊಂಡಿದ್ದ.
ಫೆ.28ರಂದು ಎಂದಿನಂತೆ ಇಲಿಯಾಸ್ ಮತ್ತು ಲಿಯಾಕತ್ ಎಂದಿನಂತೆ ನಾಯಂಡಹಳ್ಳಿ ಮನೆಯಲ್ಲಿ ಭೇಟಿ ಆಗಿದ್ದರು. ಆಗ ಇಲಿಯಾಸ್, ತನ್ನ ಭವಿಷ್ಯದ ಜೀವನದ ಬಗ್ಗೆ ಪ್ರಸ್ತಾಪಿಸಿ ಸಂಬಂಧವನ್ನು ಮುರಿದುಕೊಳ್ಳುವಂತೆ ಲಿಯಾಖತ್‌ಗೆ ಹೇಳಿದ್ದ. ಅಲ್ಲದೇ ಸಲಿಂಗಕಾಮ ವಿಚಾರ ಬಹಿರಂಗಪಡಿಸದಂತೆ ಮನವಿ ಮಾಡಿದ್ದ. ಆದ್ರೆ, ಲಿಯಾಖತ್ ವಿರೋಧಿಸಿದ್ದು, ಮುಂದುವಿರಯುವಂತೆ ಒತ್ತಾಯಿಸಿದ್ದ. ಕೊನೆಗೆ ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಆ ವೇಳೆ ಇಲಿಯಾಸ್, ಲಿಯಾಖಾತ್ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಇಲಿಯಾಸ್ ಕತ್ತರಿಯಿಂದ ಲಿಯಾಖತ್ನ ಕುತ್ತಿಗೆ ಇರಿದು ಪರಾರಿಯಾಗಿದ್ದ.
ಹತ್ಯೆ ಬಳಿಕ ಮನೆಗೆ ತೆರಳಿದ ಇಲಿಯಾಸ್, ಬಂಧನ ಭೀತಿಯಿಂದ ಪಾಲಕರ ಥೈರಾಯ್ಡ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ಇಲಿಯಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Published On - 8:45 am, Tue, 7 March 23