ಹಾಸನ, ಮಾರ್ಚ್ 4: ಪ್ರೀತಿಸಲು ನಿರಾಕರಿಸಿದ್ದಕ್ಕೆ ಕತ್ತು ಸೀಳಿ ವಿದ್ಯಾರ್ಥಿನಿಯ ಕೊಲೆ (murder) ಮಾಡಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ನಡೆದಿದೆ. ಬೆಳಗುಂಬ ಸರ್ಕಾರಿ ಪ್ರೌಢಶಾಲೆಯ ಭೂಮಿಕಾ ಮೃತ ವಿದ್ಯಾರ್ಥಿನಿ. ಶಾಲೆ ಮುಗಿಸಿ ಹೋಗುವಾಗ ವಿದ್ಯಾರ್ಥಿನಿಯನ್ನು ಹತ್ಯೆಗೈದ ಯುವಕ ಶರತ್ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅರಸೀಕೆರೆ ತಾಲೂಕಿನ ಬಂಡಿಹಳ್ಳಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿದ್ದಾನೆ. ಅರಸೀಕೆರೆ ನಗರದ ಖಾಸಗಿ ಕಾಲೇಜಿನಲ್ಲಿ ಶರತ್ ಪದವಿ ಓದುತ್ತಿದ್ದ. ಘಟನಾ ಸ್ಥಳಕ್ಕೆ ಎಸ್‌ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಾಮರಾಜನಗರ: ತಾಲೂಕಿನ ಸೋಮವಾರಪೇಟೆಯಲ್ಲಿ ಹಬ್ಬಕ್ಕೆ ಕರೆದೊಯ್ಯಲು ಪತಿ ಬಾರದಿದ್ದಕ್ಕೆ ನೇಣುಬಿಗಿದುಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಕಳೆದ 5 ವರ್ಷದ ಹಿಂದೆ ಕೊತ್ತಲವಾಡಿಯ ಸೋಮೇಶ್ ಜತೆ ರಚನಾಳ ವಿವಾಹವಾಗಿತ್ತು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಬಸ್ ನಿಲ್ದಾಣದಲ್ಲೇ ಬಾಂಬ್ಗೆ ಟೈಮರ್ ಸೆಟ್ ಮಾಡಿದ ಶಂಕಿತ ಉಗ್ರ; ವಿಡಿಯೋ ಇಲ್ಲಿದೆ
ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಯಲ್ಲಿದ್ದ ರಚನಾ, ಕೊತ್ತಲವಾಡಿಯಲ್ಲಿ ಮಾರಮ್ಮನ ಹಬ್ಬ ಇರುವುದರಿಂದ ಪತಿ ಕರೆದುಕೊಂಡು ಹೋಗಲು ಬರುತ್ತಾನೆಂದು ಕಾದು ಕೂತಿದ್ದರು. ಪತಿ ಬಾರದ್ದಕ್ಕೆ ಮನನೊಂದು ನೇಣುಬಿಗಿದುಕೊಂಡು ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗದಗ: ಭೀಕರ ಬರಗಾಲಕ್ಕೆ ಅನ್ನದಾತರ ಬದುಕು ಛಿದ್ರ ಛಿದ್ರವಾಗುತ್ತಿದೆ. ಜೀವನ ನಡೆಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸಾಲಗಾರರ ಕಿರುಕುಳಕ್ಕೆ ಅನ್ನದಾತರು ವಿಲವಿಲ ಅಂತಿದ್ದಾರೆ. ಸಾಲಬಾಧೆಯಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವಂತಹ ದಾರುಣ ಘಟನೆ ನಡೆದಿದೆ. ಸಾವಿನ ದವಡೆಯಿಂದ ಮಗನನ್ನು ರಕ್ಷಣೆ ಮಾಡಲು ಹೋದ ತಾಯಿ ಸಾವನ್ನಪ್ಪಿದ್ದರೆ ಇಬ್ಬರ ಸಾವಿನ ವಿಷಯ ತಿಳಿದು, ಮನೆಯಲ್ಲಿ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭೀಕರ ಬರಕ್ಕೆ ಗದಗ ಜಿಲ್ಲೆಯಲ್ಲಿ ಮೂವರು ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು.
ಕೋಲಾರ: ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮದರಂಕಪಲ್ಲಿ ಕ್ರಾಸ್‌ನ ಬಳಿ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿ ಜೀಡಿಮಾಕಲಹಳ್ಳಿ ಗ್ರಾಮದ 40 ವರ್ಷದ ಶಂಕರ ಎನ್ನಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದ್ರು, ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಮಂಗಳೂರು ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನೀರುಪಾಲು
ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಮಾಲೂರು ಪಟ್ಟಣದ ಸ್ಟೇಡಿಯಂ ಬಳಿ ಈ ಘಟನೆ ನಡೆದಿದ್ದು, ಪಟ್ಟಣದ ಇಂದಿರಾ ನಗರಕ್ಕೆ ತೆರಳುತಿದ್ದ, ಮಾಲೂರಿನ ಚಿಕ್ಕ ಕುಂತೂರು ಗ್ರಾಮದ ನಿವಾಸಿ
ಬೈಕ್ ಸವಾರ 23 ವರ್ಷದ ಮಣಿಕಂಠ ಮೃತ ದುರ್ದೈವಿ. ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:34 pm, Mon, 4 March 24