ಮರ್ಯಾದಾ ಹತ್ಯೆ; ಹಿಂದೂ ಯುವಕನನ್ನು ಪ್ರೀತಿಸಿದ ಯುವತಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಅಣ್ಣ

|

Updated on: Aug 08, 2024 | 10:01 PM

Honour Killing: ಮೀರತ್​ನಲ್ಲಿ ರಸ್ತೆಯಲ್ಲಿ ಜನರು ಓಡಾಡುತ್ತಿರುವಾಗಲೇ ನಡುರಸ್ತೆಯಲ್ಲಿ ಯುವತಿಯೊಬ್ಬಳನ್ನು ಆಕೆಯ ಅಣ್ಣನೇ ಕೊಚ್ಚಿ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ದೃಶ್ಯವನ್ನು ಅಕ್ಕಪಕ್ಕದ ಮನೆಯವರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಬೇರೆ ಧರ್ಮದ ಯುವಕನನ್ನು ಪ್ರೀತಿ ಮಾಡಿದ್ದಕ್ಕೆ ಈ ಮರ್ಯಾದಾ ಹತ್ಯೆ ನಡೆದಿದೆ.

ಮರ್ಯಾದಾ ಹತ್ಯೆ; ಹಿಂದೂ ಯುವಕನನ್ನು ಪ್ರೀತಿಸಿದ ಯುವತಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಅಣ್ಣ
ಯುವತಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಅಣ್ಣ
Follow us on

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನಾಗ್ಲಾ ಶೇಖು ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಮ್ಮ 16 ವರ್ಷದ ತಂಗಿ ಹಿಂದೂ ಯುವಕನನ್ನು ಪ್ರೀತಿಸಿ, ಆತನೊಂದಿಗೆ ಓಡಿಹೋಗಲು ಪ್ಲಾನ್ ಮಾಡಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆ ಸಿಟ್ಟಿಗೆದ್ದ ಅಣ್ಣ ಹಾಡಹಗಲೇ ನಡುರಸ್ತೆಯಲ್ಲಿ ಆಕೆಯನ್ನು ಕೊಚ್ಚಿ ಕೊಂದಿದ್ದಾನೆ.

ಈ ಕೊಲೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ ಆರೋಪಿಯನ್ನು 20 ವರ್ಷದ ಹಸೀನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹಸೀನ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ಮೃತ ಯುವತಿ ಮುಸ್ಲಿಂ ಕುಟುಂಬಕ್ಕೆ ಸೇರಿದವಳು. ಆಕೆ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಪೊಲೀಸರ ಪ್ರಕಾರ, ಆ ಯುವತಿ ಇತ್ತೀಚೆಗೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಬಾಲಕಿ ಅಪ್ರಾಪ್ತಳಾಗಿದ್ದರಿಂದ ಪೊಲೀಸರು ಇಬ್ಬರನ್ನೂ ವಾಪಸ್ ಕರೆತಂದು ಮನೆಯವರಿಗೆ ಒಪ್ಪಿಸಿದ್ದರು. ಸಾಮಾಜಿಕ ಕಳಂಕಕ್ಕೆ ಹೆದರಿ ಅವಳು ಓಡಿಹೋದ ವ್ಯಕ್ತಿಯ ವಿರುದ್ಧ ಆ ಮುಸ್ಲಿಂ ಕುಟುಂಬವು ದೂರು ದಾಖಲಿಸಲಿಲ್ಲ.


ಇದನ್ನೂ ಓದಿ: Crime News: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ಶವ ತುಂಬಿ ರೈಲಿನಲ್ಲಿ ಸಾಗಿಸಿದ ಹಂತಕರು

ಆದರೆ, ಆಕೆ ಮತ್ತೊಮ್ಮೆ ಆತನೊಂದಿಗೆ ಓಡಿಹೋಗಲು ಪ್ಲಾನ್ ಮಾಡಿದ್ದು ಆಕೆಯ ಅಣ್ಣನಿಗೆ ಗೊತ್ತಾಗಿತ್ತು. ಆಕೆ ಆತನನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಳು. ಆಕೆಯ ವರ್ತನೆಯಿಂದ ನೊಂದ ಮನೆಯವರು ಆಕೆಯನ್ನು ಬೇರೊಬ್ಬರೊಂದಿಗೆ ಮದುವೆಯಾಗಲು ವ್ಯವಸ್ಥೆ ಮಾಡಿದ್ದರು. ಆದರೆ ಅವಳು ತನ್ನ ಪ್ರಿಯಕರನ ಜೊತೆ ಓಡಿಹೋಗಲು ಎಲ್ಲ ಪ್ಲಾನ್ ಮಾಡಿಕೊಂಡಿದ್ದಳು.

ಇದರಿಂದ ಕೋಪಗೊಂಡ ಆಕೆಯ ಅಣ್ಣ ರಸ್ತೆಯಲ್ಲೇ ಆಕೆಯ ಕೊಲೆ ಮಾಡಿದ್ದಾನೆ. ಆಕೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ ಎಂಬುದು ವಿಡಿಯೋದಲ್ಲಿ ದಾಖಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ