ಆತ ಒಟ್ಟು ಮೂರು ಜನರ ಮದುವೆಯಾಗಿದ್ದ. ಮೊದಲ ಪತ್ನಿ ಮೃತಪಟ್ಟರೆ, ಎರಡನೇ ಪತ್ನಿ ಪೊಲೀಸ್ ಕಾನ್ಸ್ಟೇಬಲ್ ಆತನಿಂದ ದೂರ ಆಗಿದ್ದಳು. ಮೂರನೇ ಪತ್ನಿ ಹಾಗೂ ಮಗನ ಜೊತೆ ವಾಸವಿದ್ದ ಆತ ಕೊಲೆಯಾಗಿ (murder) ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ತಂತಿಯಿಂದ ಕತ್ತು ಬಿಗಿದು ಎಸ್ಕೇಪ್ ಆಗಿದ್ದಾರೆ. ಇದರಿಂದ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ವಿದ್ಯಮಾನಗಳು ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಬೀಳಗಿ ಸರಕಾರಿ ಆಸ್ಪತ್ರೆ ಹಾಗೂ ಡವಳೇಶ್ವರ ಗ್ರಾಮದಲ್ಲಿ (Dhavaleshwar village in Bilagi in Bagalkot).
ಇಲ್ಲಿ ಕೊಲೆಯಾಗಿರೋದು ಈರಪ್ಪ ಗರಸಂಗಿ (೪೬) ಬೀಳಗಿ ತಾಲ್ಲೂಕಿನ ಡವಳೇಶ್ವರ ಗ್ರಾಮದ ನಿವಾಸಿ. ಮೊನ್ನೆ ಸೋಮವಾರ ರಾತ್ರಿ ಈತನ ಕುತ್ತಿಗೆಗೆ ತಂತಿ ಬಿಗಿದು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಬೀಳಗಿ ಪಟ್ಟಣದಿಂದ ಜಮಖಂಡಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಬೀಳಗಿ ಹೊರವಲಯದಲ್ಲಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇದರಿಂದ ಈರಪ್ಪ ಗರಸಂಗಿ ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರು, ಸಂಬಂಧಿಕರು ಒಂದೇ ಮನೇ ಗೋಳಾಡುತ್ತಿದ್ದಾರೆ. ಮೃತ ಈರಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಈರಪ್ಪ ಕುಟುಂಬಸ್ಥರಿಗೆ ಆತನ ಕೊಲೆ ಮಾಡಿರುವುದು ಯಾರು, ಹಿನ್ನೆಲೆ ಏನು, ಒಂದೂ ಗೊತ್ತಿಲ್ಲ ಅಂತಿದ್ದು ದಿಕ್ಕು ತೋಚದಂತಾಗಿದ್ದಾರೆ.
ಇಲ್ಲಿ ಈರಪ್ಪ ಗರಸಂಗಿ ಎಲ್ಲ ರೀತಿಯಿಂದ ಅನುಕೂಲಕರ ಸ್ಥಿತಿಯಲ್ಲಿದ್ದ ವ್ಯಕ್ತಿ. ಡವಳೇಶ್ವರ ಗ್ರಾಮದ ಈರಪ್ಪನಿಗೆ 12 ಎಕರೆ ಆಸ್ತಿ, ಒಳ್ಳೆಯ ಮನೆ ಎಲ್ಲವೂ ಇದ್ದು ಯಾವುದಕ್ಕೂ ಕಡಿಮೆಯಿರಲಿಲ್ಲ. ಈರಪ್ಪ ಗರಸಂಗಿ ಮೂರು ಜನರನ್ನು ಮದುವೆಯಾಗಿದ್ದಾನೆ. ಮೊದಲ ಪತ್ನಿ ಮೃತಪಟ್ಟಿದ್ದಾಳೆ. ನಂತರ ಮೊದಲ ಪತ್ನಿಯ ಸಹೋದರಿಯನ್ನೇ ಮದುವೆಯಾಗಿದ್ದ. ಆದರೆ ಆಕೆ ಓದಬೇಕು, ಪೊಲೀಸ್ ಪರೀಕ್ಷೆ ಬರೆಯಬೇಕು ಅಂತ ಈತನನ್ನು ಬಿಟ್ಟು ಹೋಗಿ, ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾರೆ.
ಇದನ್ನೂ ಓದಿ: ರಾಯಚೂರಿನ ಕೃಷ್ಣ ನದಿಯಲ್ಲಿ ವಿಗ್ರಹಗಳು ಪತ್ತೆ: ಅಂತಾರಾಜ್ಯ ವಿವಾದಕ್ಕೆ ಕಾರಣವಾಗುತ್ತಾ ವಿಗ್ರಹಗಳು?
ಆಕೆಯ ನಂತರ ಮೂರನೇ ಮದುವೆಯಾಗಿರುವ ಈರಪ್ಪನಿಗೆ ಒಬ್ಬ ಗಂಡು ಮಗನಿದ್ದಾನೆ. ಹೊಲ ಮನೆ ಆಸ್ತಿಪಾಸ್ತಿ ಎಲ್ಲ ರೀತಿಯಿಂದ ಸಮೃದ್ದವಾಗಿದ್ದ ಈರಪ್ಪನ ಕೊಲೆ ಕುತೂಹಲ ಮೂಡಿಸಿದೆ. ಮೊನ್ನೆ ಸಂಜೆ ೫.೩೦ ರ ಸುಮಾರಿಗೆ ಮನೆಯಿಂದ ಈರಪ್ಪ ಹೋಗಿದ್ದ. ರಾತ್ರಿ ೮ ರ ಸುಮಾರಿಗೆ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ತಕ್ಷಣ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಟುಂಬಸ್ಥರಿಂದ ಎಲ್ಲ ಬಗೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸದ್ಯಕ್ಕೆ ಕೊಲೆ ಮಾಡಿದ್ದು ಯಾರು ಯಾವ ಕಾರಣಕ್ಕೆ ಎಂಬುದು ನಿಗೂಢವಾಗಿದ್ದು, ತನಿಖೆ ಮುಂದುವರೆದಿದೆ. ಒಟ್ಟಿನಲ್ಲಿ ರೈತರ ಕೊಲೆ ನಿಗೂಢವಾಗಿದ್ದು, ಯಾರು ಮಾಡಿರಬಹುದು ಯಾಕೆ ಎಂದೆಲ್ಲ ಕುತೂಹಲ ಶುರುವಾಗಿದೆ. ಪೊಲೀಸ್ ತನಿಖೆ ಮುಂದುವರೆದಿದ್ದು, ತನಿಖೆಯಿಂದ ಸತ್ಯಾಂಶ ಹೊರಬರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ