ಧಾರವಾಡದಲ್ಲಿ ಈಗ ಕ್ರೈಂ ಕಾಲ! 4ನೇ ದಿನಕ್ಕೆ ನಾಲ್ಕನೆಯ ಮರ್ಡರ್ ಆಗಿಯೇ ಹೋಯ್ತು
Dharwad Murder: ಧಾರವಾಡದಲ್ಲಿ ಕಳೆದ ನಾಲ್ಕು ದಿನಗಳಿಂದ ನಾಲ್ಕು ಕೊಲೆಗಳು ನಡೆದಿದ್ದು, ಜನರು ಈ ರಕ್ತಪಾತಗಳಿಂದಾಗಿ ರೋಸಿ ಹೋಗಿದ್ದಾರೆ. ಇದೀಗ ತಂದೂರಿ ರೋಟಿ ಕೊಡುವಲ್ಲಿ ವಿಳಂಬವಾಗಿದ್ದಕ್ಕೆ ಗಲಾಟೆ ನಡೆದು, ಒಬ್ಬನ ಹತ್ಯೆಯಾಗಿದೆ. ಹಂತಕ ಆರೋಪಿಯನ್ನು ಬಂಧಿಸಲಾಗಿದೆ.
ಆತ ಹೋಟೆಲ್ ವೊಂದರಲ್ಲಿ ತಂದೂರಿ ರೊಟ್ಟಿ ಮಾಡಿ (Cook ) ಜೀವನ ಸಾಗಿಸುತ್ತಿದ್ದ. ತಾನು ದುಡಿದು ಆ ದುಡ್ಡಿನಲ್ಲಿ ಜೀವನ ನಡೆಸುತ್ತಿದ್ದ. ಈ ಹಿಂದೆಯೂ ಬೇರೆ ಊರಿನಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿ ಧಾರವಾಡದ (Dharwad) ಹೋಟೆಲ್ ಒಂದಕ್ಕೆ ಬಂದು ತಂದೂರಿ ರೊಟ್ಟಿ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ, ಮಂಗಳವಾರ ಮಧ್ಯರಾತ್ರಿ ವಿಧಿ ಆತನ ಜೀವನದಲ್ಲಿ ಚೆಲ್ಲಾಟವಾಡಿ ಮಸಣಕ್ಕೆ (Murder) ಕೊಂಡೊಯ್ದಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು? ಇಲ್ಲಿದೆ ನೋಡಿ…
ರಕ್ತದ ಮಡುವಿಗೆ ಜಾರಿ ಪ್ರಾಣ ಬಿಟ್ಟ ವ್ಯಕ್ತಿಯ ಹೆಸರು ಫಕ್ಕೀರೇಶ ಪ್ಯಾಟಿ. 40 ವರ್ಷದ ಈತ ಮೂಲತಃ ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದವ. ಕೆಲ ವರ್ಷಗಳ ಹಿಂದೆ ಧಾರವಾಡ ನಗರದ ಸಂಗಮ್ ವೃತ್ತದ ಬಳಿಯ ವಿಮಲ್ ಎಗ್ ರೈಸ್ ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಇತ್ತೀಚಿನ ದಿನಗಳಲ್ಲಿ ತಂದೂರಿ ರೊಟ್ಟಿ ಮಾಡುವ ಕೆಲಸಕ್ಕೆ ಬಡ್ತಿ ಪಡೆದಿದ್ದ. ಈತನ ಜೊತೆಗೆ ದಾಂಡೇಲಿ ಮೂಲದ ಕನ್ನಯ್ಯಪ್ಪ ಎಂಬ ಯುವಕ ಕೂಡ ಅದೇ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಕೆಲ ವರ್ಷಗಳ ಕಾಲ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದರು. ಆದರೆ, ನಿನ್ನೆ ಇವರಿಬ್ಬರ ಮಧ್ಯೆ ಉಂಟಾದ ಗಲಾಟೆ ಕೊನೆಗೆ ಫಕ್ಕೀರೇಶನ ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದಾಗಿ ಕ್ರೈಂ ವಿಭಾಗದ ಡಿಸಿಪಿ ರವೀಶ್ ಮಾಹಿತಿ ನೀಡಿದ್ದಾರೆ.
Also Read: ಮೂವರ ಮದುವೆಯಾಗಿದ್ದ ಈರಪ್ಪ ಸಾಕಷ್ಟು ಶ್ರೀಮಂತ, ಆತನನ್ನು ಯಾರೋ ಮೊನ್ನೆ ಹತ್ಯೆ ಮಾಡಿದ್ದಾರೆ -ಯಾರು ಯಾಕೆ?
ರಾತ್ರಿ ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿದೆ. ನಡು ರಾತ್ರಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಕನ್ನಯ್ಯಪ್ಪ ಕಬ್ಬಿಣದ ರಾಡ್‌ನಿಂದ ಫಕ್ಕೀರೇಶನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆ ಹೊಡೆತಕ್ಕೆ ಫಕ್ಕೀರೇಶ ಕೆಳಗೆ ಕುಸಿದಿದ್ದಾನೆ. ಯಾವಾಗ ಫಕ್ಕೀರೇಶ ಕೆಳಗಡೆ ಬಿದ್ದನೋ ಮತ್ತೊಮ್ಮೆ ರಾಡ್ ನಿಂದ ಜೋರಾಗಿ ಹೊಡೆದಿದ್ದಾನೆ. ಕೊನೆಗೆ ರಕ್ತದ ಮಡುವಿನಲ್ಲಿ ಬಿದ್ದ ಫಕ್ಕೀರೇಶ ಸ್ಥಳದಲ್ಲೇ ಅಸುನೀಗಿದ್ದಾನೆ. ನಡುರಾತ್ರಿ 2 ಗಂಟೆಯ ಸುಮಾರಿಗೆ ಫಕ್ಕೀರೇಶನ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದು, ಆತನ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಶವಾಗರದ ಮುಂದೆ ಬಂದು ಕಣ್ಣೀರು ಹಾಕುತ್ತಿದ್ದಾರೆ.
Also Read: ತವರು ಮನೆಗೆ ಹೋಗಬೇಡಾ ಎಂದಿದ್ದಕ್ಕೆ ಹೆಂಡತಿ ಆ ಘೋರ ಕೆಲಸ ಮಾಡಿಬಿಟ್ಟಳು!
ಹೋಟೆಲ್ ಗೆ ಬಂದ ಗ್ರಾಹಕರಿಗೆ ತಂದೂರಿ ರೋಟಿ ಕೊಡುವಲ್ಲಿ ಫಕ್ಕೀರೇಶ ತಡ ಮಾಡಿದ್ದಕ್ಕೆ ಈ ಗಲಾಟೆ ನಡೆದಿದೆ ಅನ್ನೋದು ವಿಚಾರಣೆ ವೇಳೆ ತಿಳಿದು ಬಂದಿದೆ. ಹೋಟೆಲ್ ಗೆ ಬಂದಿದ್ದ ಗ್ರಾಹಕರು ರೋಟಿ ತಡವಾಗಿದ್ದಕ್ಕೆ ಕನ್ನಯ್ಯನಿಗೆ ಬೈಯ್ದಿದ್ದಾರೆ. ಗ್ರಾಹಕರು ತನ್ನನ್ನು ಬಯ್ಯಲು ಫಕ್ಕೀರೇಶನೇ ಕಾರಣ ಅನ್ನೋ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ನಡೆದ ಜಗಳ ಕೊನೆಗೆ ಓರ್ವನ ಬಲಿ ಪಡೆದುಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Wed, 7 February 24