ಆನೇಕಲ್, ಅಕ್ಟೋಬರ್ 19: ಅದು ಕಗ್ಗತ್ತಲ ರಾತ್ರಿ ಜನರೆಲ್ಲಾ ಗಾಡ ನಿದ್ರೆಗೆ ಜಾರಿದ್ದ ಸಮಯ. ಆದರೆ ಅದೊಂದು ಖತರ್ನಾಕ್ ಖದೀಮರ ಗ್ಯಾಂಗ್ ಮಾತ್ರ ಆ ಏರಿಯಾದಲ್ಲಿ ಆ್ಯಕ್ಟಿವ್ ಆಗಿದ್ದರು. ಕಾರಿನಲ್ಲಿ ಗ್ಯಾಸ್ ಕಟರ್ ಹಿಡಿದು ಬಂದಿದ್ದ ಅಸಾಮಿಗಳು ಜನವಸತಿ ಪ್ರದೇಶದಲ್ಲಿನ ಜ್ಯುವೆಲರಿ ಶಾಪ್ಗೆ ಕನ್ನ (robbery) ಹಾಕಿ ಸಿಕ್ಕಿದ್ದನೆಲ್ಲಾ ದೋಚಿ ಎಸ್ಕೇಪ್ ಆಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಸುಮಾರು ಇಪ್ಪತ್ತೈದರಿಂದ ಮೂವತ್ತು ಲಕ್ಷ ರೂ ಬೆಲೆಬಾಳುವ 200 ಗ್ರಾಂ ಚಿನ್ನ ಹಾಗೂ 50 ಕೆಜಿಯಷ್ಟು ಬೆಳ್ಳಿ ವಸ್ತುಗಳನ್ನ ಕದ್ದಿದ್ದಾರೆ.
ಹೆಬ್ಬಗೋಡಿಯಿಂದ ಕಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿನ ಮಾತಾಜಿ ಜ್ಯುವೆಲ್ಲರ್ಸ್ ಆಂಡ್ ಬ್ಯಾಂಕರ್ಸ್ನ ಮಳಿಗೆಯ ಬಾಗಿಲನ್ನು ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ ಖತರ್ನಾಕ್ ಖದೀಮರು ಕನ್ನ ಹಾಕಿದ್ದಾರೆ. ಜ್ಯುವೆಲರಿ ಶಾಪ್ನ ಮಾಲೀಕ ಸುನೀಲ್ ಎಂದಿನಂತೆ ಕಳೆದ ರಾತ್ರಿಯೂ ಶಾಪ್ಗೆ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿದ ಖದೀಮರ ಗ್ಯಾಂಗ್ ಗ್ಯಾಸ್ ಕಟರ್ ಮೂಲಕ ಜ್ಯುವೆಲರಿ ಶಾಪ್ನ ಕಬ್ಬಿಣದ ಗೇಟ್ ಹಾಗೂ ರೋಲಿಂಗ್ ಶಟರ್ ಡೋರ್ ಕಟ್ ಮಾಡಿ ಒಳ ನುಗ್ಗಿದ ಅಸಾಮಿಗಳು ಸುಮಾರು ಇಪ್ಪತ್ತೈದರಿಂದ ಮೂವತ್ತು ಲಕ್ಷ ರೂ ಬೆಲೆಬಾಳುವ 200 ಗ್ರಾಂ ಚಿನ್ನ ಹಾಗೂ 50 ಕೆಜಿಯಷ್ಟು ಬೆಳ್ಳಿ ವಸ್ತುಗಳನ್ನ ಕದ್ದಿದ್ದಾರೆ. ಕಳ್ಳತನ ನಡೆಸಿ ಹೋಗುವಾಗ ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದೆಂದು ಸಿಸಿಟಿವಿ ಕ್ಯಾಮಾರಾದ ಡಿವಿಆರ್ ಸಮೇತವಾಗಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕದ್ದ ವಾಹನಗಳಲ್ಲೇ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳು: 6 ಆರೋಪಿಗಳ ಬಂಧನ
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದೊಂದು ವಾರದಲ್ಲಿ ಎರಡನೇ ಜ್ಯುವೆಲರಿ ಶಾಪ್ ಕಳ್ಳತನ ಪ್ರಕರಣ ನಡೆದಿದೆ. ಕಳೆದ 13 ನೇ ತಾರೀಖಿನ ರಾತ್ರಿಯು ಸಹ ಇನೋವಾ ಕಾರಿನಲ್ಲಿ ಬಂದಿದ್ದ ಖದೀಮರು ಹೆಬ್ಬಗೋಡಿಯಲ್ಲಿನ ಪೂಜಾ ಜ್ಯುವೆಲರಿ ಶಾಪ್ನ ಡೋರ್ ಕಟ್ ಮಾಡಲು ಮುಂದಾಗಿದ್ದಾರೆ. ಗ್ಯಾಸ್ ಕಟರ್ ಮೂಲಕ ಡೋರ್ ಕಟ್ ಮಾಡುವ ಶಬ್ದ ಕೇಳಿಸಿಕೊಂಡ ಅಕ್ಕಪಕ್ಕದ ಜನರು ಹೊರ ಬಂದು ನೋಡುತ್ತಿದ್ದಂತೆ ಖದೀಮರ ಕಳ್ಳತನ ಪ್ಲಾನ್ ವಿಫಲವಾಗಿದ್ದು, ಅಲ್ಲಿಂದ ಕಾಲ್ಕಿತ್ತಿದ್ದರು.
ಇದನ್ನೂ ಓದಿ: ಆಯುಧ ಪೂಜೆಗಾಗಿ ಲಾರಿ ಚಾಲಕರಿಂದ 25 ಸಾವಿರ ರೂ. ವಸೂಲಿ; ತ್ಯಾಮಗೊಂಡ್ಲು ಪೊಲೀಸರ ವಿರುದ್ಧ ದೂರು
ಅದೇ ರೀತಿ ಕಳೆದ ರಾತ್ರಿಯೂ ಸಹ ಕಾರಿನಲ್ಲಿ ಬಂದಿದ್ದ ಖದೀಮರು ಸುನೀಲ್ ಎಂಬುವವರಿಗೆ ಸೇರಿದ ಮಾತಾಜಿ ಜ್ಯುವೆಲರಿ ಶಾಪ್ನ ಬಾಗಿಲನ್ನ ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ ಕೈಚಳಕ ತೋರಿದ್ದಾರೆ. ಅಲ್ಲದೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಸಮೀಪದ ಜನವಸತಿ ಪ್ರದೇಶದಲ್ಲಿನ ಜ್ಯುವೆಲರಿ ಶಾಪ್ ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಹೆದ್ದಾರಿಯಲ್ಲಿ ಜನರ ಓಡಾಟ ಇರುವಾಗಲೇ ಕಳ್ಳರು ಕೃತ್ಯ ನಡೆಸಿರೋದು ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಘಟನಾ ಸಂಬಂಧ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ಭೇಟಿ ನೀಡಿ ಹಲವು ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ. ಪ್ರಕರಣ ಸಂಬಂಧ ಹೆಬ್ಬಗೋಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಆದಷ್ಟು ಬೇಗ ಪೊಲೀಸರು ಖತರ್ನಾಕ್ ಖದೀಮರ ಹೆಡೆಮುರಿ ಕಟ್ಟುವ ಮೂಲಕ ಜನರಲ್ಲಿನ ಆತಂಕವನ್ನ ದೂರ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.