ಜಾರ್ಖಂಡ್​ನಲ್ಲಿ ಗ್ಯಾಸ್​ ಸಿಲಿಂಡರ್​ಗಳಿದ್ದ ಟ್ರಕ್​ಗೆ ಬಸ್​ ಡಿಕ್ಕಿ; 16 ಜನ ಸಾವು, 26 ಮಂದಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Jan 05, 2022 | 7:00 PM

40 ಪ್ರಯಾಣಿಕರಿದ್ದ ಬಸ್ ಸಾಹಿಬ್‌ಗಂಜ್ ಜಿಲ್ಲೆಯ ಬರ್ಹರ್ವಾದಿಂದ ದಿಯೋಘರ್ ಜಿಲ್ಲೆಯ ಜಸಿದಿಹ್‌ಗೆ ತೆರಳುತ್ತಿತ್ತು. ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. 26 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ

ಜಾರ್ಖಂಡ್​ನಲ್ಲಿ ಗ್ಯಾಸ್​ ಸಿಲಿಂಡರ್​ಗಳಿದ್ದ ಟ್ರಕ್​ಗೆ ಬಸ್​ ಡಿಕ್ಕಿ; 16 ಜನ ಸಾವು, 26 ಮಂದಿಗೆ ಗಾಯ
ಜಾರ್ಖಂಡ್​ನಲ್ಲಿ ಬಸ್ ಅಪಘಾತ
Follow us on

ಪಾಕುರ್: ಜಾರ್ಖಂಡ್‌ನ ಪಾಕುರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಮತ್ತು ಬಸ್​ ನಡುವೆ ಡಿಕ್ಕಿಯಾಗಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು 26 ಮಂದಿ ಗಾಯಗೊಂಡಿದ್ದಾರೆ. ಅಮ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೇರ್‌ಕೋಲಾ ಗ್ರಾಮದ ಗೋವಿಂದಪುರ- ಸಾಹೇಬ್‌ಗಂಜ್ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ 8.30ಕ್ಕೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟು 40 ಪ್ರಯಾಣಿಕರಿದ್ದ ಬಸ್ ಸಾಹಿಬ್‌ಗಂಜ್ ಜಿಲ್ಲೆಯ ಬರ್ಹರ್ವಾದಿಂದ ದಿಯೋಘರ್ ಜಿಲ್ಲೆಯ ಜಸಿದಿಹ್‌ಗೆ ತೆರಳುತ್ತಿತ್ತು. ಆಗ ಎದುರಿನಿಂದ ಬರುತ್ತಿದ್ದ ಟ್ರಕ್​ಗೆ ಬಸ್​ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. 26 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪಾಕುರ್‌ನ ಸಿವಿಲ್ ಸರ್ಜನ್ ಆರ್‌ಡಿ ಪಾಸ್ವಾನ್ ಪಿಟಿಐಗೆ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರನ್ನು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಗೆ ದಾಖಲಿಸಲಾಗಿದೆ ಮತ್ತು ಇತರರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅಜಿತ್ ಕುಮಾರ್ ವಿಮಲ್ ಹೇಳಿದ್ದಾರೆ. ಗಾಯಾಳುಗಳನ್ನು ಮೊದಲು ಜಿಲ್ಲೆಯ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತದ ಬಳಿಕ ಹಲವಾರು ಜನರು ಬಸ್ಸಿನೊಳಗೆ ಸಿಲುಕಿಕೊಂಡಿದ್ದರು. ಗ್ಯಾಸ್ ಕಟರ್​ಗಳಿಂದ ಬಸ್​ನ ಕಿಟಕಿಯನ್ನು ಕಟ್ ಮಾಡಿ, ಪ್ರಯಾಣಿಕರನ್ನು ಹೊರಗೆಳೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಪರಿಣಾಮದಿಂದ ಎರಡೂ ವಾಹನಗಳ ಮುಂಭಾಗ ಒಂದಕ್ಕೊಂದು ಸಿಲುಕಿಕೊಂಡಿತ್ತು. ಬಸ್ ಮತ್ತು ಟ್ರಕ್ ಎರಡೂ ವೇಗವಾಗಿ ಚಲಿಸುತ್ತಿದ್ದವು ಮತ್ತು ಈ ಪ್ರದೇಶದಲ್ಲಿ ದಟ್ಟವಾದ ಮಂಜು ಇದ್ದುದರಿಂದ ಎದುರಿನಿಂದ ಬರುತ್ತಿದ್ದ ವಾಹನ ಕಾಣುತ್ತಿರಲಿಲ್ಲ. ಅದೃಷ್ಟವಶಾತ್ ಟ್ರಕ್‌ನಲ್ಲಿದ್ದ ಯಾವುದೇ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿಲ್ಲ. ಅವೇನಾದರೂ ಸ್ಫೋಟಗೊಂಡಿದ್ದರೆ ಅಪಘಾತದಿಂದ ಇನ್ನೂ ಹೆಚ್ಚಿನ ಜೀವಗಳು ಬಲಿಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಗಮನಿಸಿದರೆ, ಟೋಲ್ ಹೆಚ್ಚಾಗುವ ಆತಂಕವಿದೆ ಎಂದು ವಿಮಲ್ ಹೇಳಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಾವಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೋಟೆಲ್​ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ಹೋಟೆಲ್ ಮಾಲೀಕ ಆಸ್ಪತ್ರೆಗೆ ದಾಖಲು

Haiti Blast: ಹೈಟಿಯಲ್ಲಿ ಗ್ಯಾಸ್​ ಟ್ಯಾಂಕರ್ ಸ್ಫೋಟ; 50ಕ್ಕೂ ಹೆಚ್ಚು ಜನ ಸಜೀವ ದಹನ, 20 ಮನೆ ಸುಟ್ಟು ಭಸ್ಮ