Crime News In Kannada: ಫೋನ್ ಕರೆಯೊಂದನ್ನು ರಿಸೀವ್ ಮಾಡಿದಾಗ, ನಿಮ್ಮ ಮಗಳ ಕಥೆ ಮುಗಿಸಿದ್ದೇನೆ…ಬಂದು ಎತ್ಕೊಂಡು ಹೋಗಿ ಎಂದರೆ ಯಾವ ಹೆತ್ತ ಕರುಳು ಸಹಿಸಿಯಾಳು…ತೀರಾ ವಿಚಿತ್ರ ಎನಿಸುವ ಇಂತಹ ಭೀಕರ ಕೊಲೆ ನಡೆದಿರುವುದು ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ. ಗಂಡನೇ ತನ್ನ ಹೆಂಡತಿಯನ್ನು ಕೊಂದು ತವರಿಗೆ ಕರೆ ಮಾಡಿ ತಿಳಿಸಿದ್ದ. ಈ ಸುದ್ದಿ ಕೇಳಿ ಹೆತ್ತಮ್ಮನ ಆಕ್ರಂದನ ಮುಗಿಲುಮುಟ್ಟಿತು. ಗಾಜಿಯಾಬಾದ್ನ ನಂದಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಅಂಕಿತ್ ಗರಿಮಾ ಗಾರ್ಡನ್‌ನಲ್ಲಿ ವಾಸಿಸುವ ರಮೇಶ್ ಪಾಲ್ ಅವರ ಪುತ್ರಿ ತನು ಅವರನ್ನು ಜುಲೈ 10, 2016 ರಂದು ವಿವಾಹವಾಗಿದ್ದ. ಇದಾದ ಬಳಿಕ ಈ ಜೋಡಿ ಅದೇ ಗ್ರಾಮದಲ್ಲೇ ವಾಸವಾಗಿದ್ದರು. ಅಲ್ಲದೆ ಅಂಕಿತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಹೀಗೆ ಕಳೆದ ನಾಲ್ಕೈದು ವರ್ಷಗಳ ಕಾಲ ಇಬ್ಬರೂ ಜೊತೆಯಾಗಿ ಸಂಸಾರದ ಬಂಡಿ ಸಾಗಿಸಿದ್ದಾರೆ. ಆದರೆ ಇತ್ತೀಚೆಗೆ ಅಂಕಿತ್ ಹಾಗೂ ಕುಟುಂಬಸ್ಥರು ತನುಗೆ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದ್ದಾರೆ. ಇದಾಗ್ಯೂ ಆಕೆ ಎಲ್ಲಾ ದೌರ್ಜನ್ಯಗಳನ್ನು ಸಹಿಸಿ ಪತಿಯ ಜೊತೆಯಲ್ಲೇ ಇದ್ದಳು. ಆದರೆ ದಿನ ಕಳೆದಂತೆ ಅಂಕಿತ್ ಉಪಟಳ ಹೆಚ್ಚಾಗಿದೆ. ಹೀಗಾಗಿ ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾಳೆ.
ಆದರೆ ಅದಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ತನು ಕುಟುಂಬ ಮತ್ತೊಮ್ಮೆ ವರದಕ್ಷಿಣೆ ನೀಡುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಅಂಕಿತ್ ಮತ್ತಷ್ಟು ಕುಪಿತಗೊಂಡಿದ್ದ. ಹೀಗಾಗಿ ಹೆಂಡತಿಯ ಮೇಲೆ ದೌರ್ಜನ್ಯವನ್ನು ಮುಂದುವರೆಸಿದ್ದ. ಅದರಂತೆ ಆಗಸ್ಟ್ 15 ರಂದು ಹೆಂಡತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅದಾಗಲೇ 8 ತಿಂಗಳ ತುಂಬು ಗರ್ಭಿಣಿಯಾಗಿದ್ದ ತನು ಗಂಡನ ಏಟಿಗೆ ಅರೆ ಪ್ರಜ್ಞಾವಸ್ಥೆಗೆ ಜಾರಿದ್ದಳು.
ಈ ಸಂದರ್ಭವನ್ನು ಬಳಸಿಕೊಂಡ ಪಾಪಿ ಪತಿ ಆಕೆಯ ಕುತ್ತಿಗೆಯನ್ನು ಕುಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅಚ್ಚರಿ ಎಂದರೆ ಇಂತಹದೊಂದು ದುಷ್ಕೃತ್ಯ ಎಸೆಗಿದ ಬಳಿಕ ಆತ ಅತ್ತೆಗೆ ಕರೆ ಮಾಡಿ ನಿಮ್ಮ ಮಗಳ ಕಥೆ ಮುಗಿಸಿದ್ದೇನೆ, ಬಂದು ಎತ್ಕೊಂಡು ಹೋಗಿ ಎಂದು ತಿಳಿಸಿದ್ದ. ಗಾಬರಿಗೊಂಡ ಮನೆಯವರು ತಕ್ಷಣವೇ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ತರಾತುರಿಯಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಮನೆಗೆ ಬಂದು ನೋಡುತ್ತಿದ್ದಂತೆ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಇದೀಗ ಅಂಕಿತ್ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಆತನೊಬ್ಬನೇ ಈ ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಹತ್ಯೆಯಲ್ಲಿ ಅವರ ಕುಟುಂಬ ಸದಸ್ಯರು ಕೂಡ ಕೈ ಜೋಡಿಸಿದ್ದಾರೆ. ವರದಕ್ಷಿಣೆ ನೀಡದ ಕಾರಣ ಗಂಡನ ಮನೆಯವರೆಲ್ಲಾ ಸೇರಿ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮೃತ ತನು ಕುಟುಂಬಸ್ಥರು ಆರೋಪಿಸಿದ್ದಾರೆ.