ಅಪ್ರಾಪ್ತ ವಿದ್ಯಾರ್ಥಿನಿ ಜತೆ ಪರಾರಿಯಾಗಿದ್ದ ಟ್ಯೂಷನ್ ಶಿಕ್ಷಕ ಮಂಡ್ಯದಲ್ಲಿ ಬಂಧನ
ವಿವಾಹವಾಗಿ ಒಂದು ಮಗುವಿನ ತಂದೆಯಾಗಿದ್ದರೂ ಟ್ಯೂಷನ್ಗೆ ಬರುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಜತೆಗೇ ಪರಾರಿಯಾಗಿದ್ದ ಟ್ಯೂಷನ್ ಶಿಕ್ಷಕನನ್ನು ಮಂಡ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ನಲ್ಲಿ ಘಟನೆ ನಡೆದಿದ್ದು, ಅಪಹರಣ ಪ್ರಕರಣ ದಾಖಲಾಗಿತ್ತು. ಜನವರಿಯಲ್ಲಿ ಪೊಲೀಸರು ವಿದ್ಯಾರ್ಥಿನಿಯನ್ನು ರಕ್ಷಿಸಿದ್ದರು. ಇದೀಗ ಆರೋಪಿಯ ಬಂಧನವಾಗಿದೆ. ವಿವರಗಳಿಗೆ ಮುಂದೆ ಓದಿ.
ಮಂಡ್ಯ, ಜನವರಿ 9: ಎರಡು ತಿಂಗಳ ಹಿಂದೆ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಟ್ಯೂಷನ್ ಶಿಕ್ಷಕನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಮಂಡ್ಯದಲ್ಲಿ ಟ್ಯೂಷನ್ ಶಿಕ್ಷಕ ಅಭಿಷೇಕ್ ಗೌಡ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಆರೋಪಿಯು ವಿವಾಹಿತನಾಗಿದ್ದು, ಎರಡು ವರ್ಷದ ಮಗುವಿದೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.
ನವೆಂಬರ್ 23 ರಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಲಾಗಿತ್ತು. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ (ಬೆಂಗಳೂರು ದಕ್ಷಿಣ ವಿಭಾಗ) ಲೋಕೇಶ್ ಬಿಜೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಿಂದ ಜನವರಿ 5 ರಂದು ಬಾಲಕಿಯನ್ನು ರಕ್ಷಿಸಲಾಗಿತ್ತು. ಆಕೆಯನ್ನು ಆಕೆ ಪ್ರತಿ ದಿನ ಟ್ಯೂಷನ್ಗೆ ತೆರಳುತ್ತಿದ್ದ ಟ್ಯೂಷನ್ ಶಿಕ್ಷಕನೇ ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು 25 ವರ್ಷ ವಯಸ್ಸಿನವನಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭತ್ತ ಖರೀದಿ ಕೇಂದ್ರ ತೆರೆಯದ ಮಂಡ್ಯ ಜಿಲ್ಲಾಡಳಿ: ರೈತರ ಪ್ರತಿಭಟನೆ
ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲಾಡಳಿತ ಆವರಣದಲ್ಲಿನ ಕೃಷಿ ಸಚಿವರ ಕಚೇರಿ ಮುಂದೆ ಭತ್ತ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಗ್ಗಿ ಸಂಭ್ರಮದಲ್ಲಿದ್ದ ರೈತರಿಗೆ ಸರ್ಕಾರದಿಂದಲೇ ಅನ್ಯಾಯವಾಗುತ್ತಿದೆ. ಅವಧಿ ಮುಗಿಯುತ್ತಾ ಬಂದರೂ ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ಸರ್ಕಾರ, ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ನಷ್ಟ ಆಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ನವೆಂಬರ್ ತಿಂಗಳಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕಿತ್ತು. ಜನವರಿ ಮೊದಲ ವಾರ ಕಳೆಯುತ್ತಿದ್ದರೂ ಖರೀದಿ ಕೇಂದ್ರ ಆರಂಭವಾಗಿಲ್ಲ. ಸೂಕ್ತ ಸಮಯದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯದ್ದರಿಂದ ಅನ್ಯಾಯವಾಗುತ್ತಿದೆ. ಭತ್ತ ದಲ್ಲಾಳಿಗಳ ಪಾಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್: ಇಬ್ಬರು ಮಕ್ಕಳು, ಹೆಂಡ್ತಿಯನ್ನು ಕೊಂದ ಹೋಂ ಗಾರ್ಡ್!
ಪ್ರತಿ ಕ್ವಿಂಟಾಲ್ ಭತ್ತಕ್ಕೆ 2300 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಆದರೆ, ದಲ್ಲಾಳಿಗಳು ಕ್ವಿಂಟಾಲ್ಗೆ ಕೇವಲ 1,800 ರೂ.ಗೆ ಖರೀದಿ ಮಾಡುತ್ತಿದ್ದಾರೆ. ದಲ್ಲಾಳಿಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಭತ್ತ ಖರೀದಿ ಮಾಡುತ್ತಿದ್ದಾರೆ. ಸರ್ಕಾರ, ಜಿಲ್ಲಾಡಳಿತ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ