ಬೆಂಗಳೂರು: ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಟ್ರೋ ರವಿಯನ್ನು (Santro Ravi) ಕರ್ನಾಟಕ ಪೊಲೀಸರು ಗುಜರಾತ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆತಂದಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಣ್ಣುತಪ್ಪಿಸಿ ರವಿಯನ್ನು ಪೊಲೀಸರು ಹೊರಗೆ ಕರೆದೊಯ್ದರು. ನಿಲ್ದಾಣದ ಒಂದು ದ್ವಾರದಲ್ಲಿ ಎಲ್ಲರಿಗೂ ಕಾಣಿಸುವಂತೆ, ಮತ್ತೊಂದು ದ್ವಾರದಲ್ಲಿ ಗೌಪ್ಯವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ವಿಮಾನ ನಿಲ್ದಾಣದ ಭದ್ರತಾಪಡೆಯ ಗೇಟ್‌ನಿಂದ ಹೊರಗೆ ಕರೆದೊಯ್ದರು.
ರಾಯಚೂರು, ಮಂಡ್ಯ ಹಾಗೂ ಮೈಸೂರು ಪೊಲೀಸರು ಸಂಘಟಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಗುಜರಾತ್ನಲ್ಲಿ ಸ್ಯಾಂಟ್ರೋ ರವಿ ಇದ್ದುದನ್ನು ಪತ್ತೆ ಮಾಡಿದ್ದರು. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ರಾತ್ರಿ 11.30ಕ್ಕೆ ‘ಆಕಾಶ್ ಏರ್’ ವಿಮಾನದಲ್ಲಿ ರವಿಯನ್ನು ಬೆಂಗಳೂರಿಗೆ ಕರೆತರಲಾಯಿತು. ರಸ್ತೆ ಮಾರ್ಗದಲ್ಲಿ ರವಿಯನ್ನು ಮೈಸೂರಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಂದು ನ್ಯಾಯಾಧೀಶರ ಎದುರು ರವಿಯನ್ನು ಹಾಜರಿಪಡಿಸಲಾಗುವುದು. ನಂತರ ಪೊಲೀಸರು ವಿಚಾರಣೆ ತೀವ್ರಗೊಳಿಸಲಿದ್ದಾರೆ.
ಸ್ಯಾಂಟ್ರೋ ರವಿ ಗುಜರಾತ್ನಲ್ಲಿ ಇರಬಹುದು ಎಂಬ ಅನುಮಾನದ ಮೇಲೆ ಕರ್ನಾಟಕ ಪೊಲೀಸರ ತಂಡವನ್ನು ತರಾತುರಿಯಲ್ಲಿ ಅಹಮದಾಬಾದ್ಗೆ ಕಳಿಸಲಾಗಿತ್ತು. ಈ ಪೈಕಿ ಮೈಸೂರು ಪೊಲೀಸರ ಬಳಿ ಸ್ಯಾಂಟ್ರೋ ರವಿಯ ಹಳೆಯ ಮೂರು ಫೋಟೊಗಳಿದ್ದವು. ಅವನ ತಲೆಯಲ್ಲಿ ಕೂದಲು ಇಲ್ಲ. ಹೀಗಾಗಿ ಟೋಪನ್ ಧರಿಸುತ್ತಾನೆ ಎಂಬ ಮಾಹಿತಿಯಿದ್ದ ಪೊಲೀಸರು ಬೋಳುತಲೆ, ಗಡ್ಡಮೀಸೆ ಇಲ್ಲದ ರೇಖಾಚಿತ್ರಗಳನ್ನು ಬರೆಸಿಕೊಂಡು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಲೆಕ್ಕಾಚಾರದಂತೆ ಅವನೂ ಗುರುತು ಬದಲಿಸಿಕೊಂಡಿದ್ದ. ಆದರೆ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಅವನನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾದರು.
ಮೈಸೂರಿನ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi) ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಓಡಾಡುತ್ತಿದ್ದ. ಪೊಲೀಸರು ಹುಡುಕಾಟ ಆರಂಭಿಸಿದ 11 ದಿನಗಳ ಬಳಿಕ ನಿನ್ನೆ (ಜ 13) ಗುಜರಾತ್ನ ಅಹಮದಾಬಾದ್ನಲ್ಲಿ ಬಂಧನ ಸಾಧ್ಯವಾಗಿದೆ. ಸ್ಯಾಂಟ್ರೋ ರವಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದು ಮಂತ್ರಾಲಯದ ರಾಯರ ದರ್ಶನಕ್ಕೆ ಬಂದಿದ್ದವನಿಂದಲೇ ಎನ್ನುವುದು ವಿಶೇಷ. ಮಂತ್ರಾಲಯಕ್ಕೆ ಬಂದಿದ್ದ ಸ್ಯಾಂಟ್ರೋ ರವಿ ಆಪ್ತ ಲಷ್ಮಿತ್ ಅಲಿಯಾಸ್ ಚೇತನ್ ಎಂಬಾತನನ್ನು ರಾಯಚೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಸ್ಯಾಂಟ್ರೋ ರವಿಯ ಸುಳಿವು ಪತ್ತೆಯಾಯಿತು.
ತಕ್ಷಣ ಎಚ್ಚೆತ್ತ ಪೊಲೀಸರು ಚೇತನ್ನನ್ನು ಮೈಸೂರಿಗೆ ಕರೆದೊಯ್ದರು. ಅಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸಿದ ನಂತರ, ಸ್ಯಾಂಟ್ರೋ ರವಿ ಗುಜರಾತ್ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಬಲೆ ಬೀಸಿದರು. ‘ಈ ಪ್ರಕರಣದಲ್ಲಿ ರಾಯಚೂರು, ಮಂಡ್ಯ, ರಾಮನಗರ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ’ ಎಡಿಜಿಪಿ ಅಲೋಕ್ ಕುಮಾರ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಕ್ರಿಮಿ ಅಷ್ಟೇ, ಆತನ ಹಿಂದೆ ಮುನ್ನೂರು ಜನರಿದ್ದಾರೆ: ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ
ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:29 am, Sat, 14 January 23