ಮೃತ ವ್ಯಕ್ತಿ
ಕೋಲಾರ, ನ.28: ಎರಡನೇ ಹೆಂಡತಿಯೇ ಪ್ರಿಯಕರನ ಜೊತೆಗೆ ಸೇರಿ ತನ್ನ ಗಂಡನನ್ನು ಕೊಲೆ ಮಾಡಿರುವ ಘಟನೆಯೊಂದು ಕೋಲಾರ ಜಿಲ್ಲೆಯ ಮುಳಬಾಗಿಲು (
Mulabagilu) ತಾಲೂಕಿನ ಮಿಣಜೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಇದೇ ನವೆಂಬರ್ 25, ಶನಿವಾರ ರಾತ್ರಿ ವೇಳೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬುವನು
ಮಿಣಜೇನಹಳ್ಳಿ ಗ್ರಾಮದ ಬಳಿ ಬೈಕ್ನಿಂದ ಬಿದ್ದು ಸಾವನ್ನಪ್ಪಿದ್ದ. ಅದು ಮೇಲ್ನೋಟಕ್ಕೆ ಅಪಘಾತವಾದಂತೆ ಕಂಡು ಬಂದಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಮುಳಬಾಗಿಲು ಗ್ರಾಮಾಂತರ ಠಾಣೆ ಸಿಪಿಐ ಸತೀಶ್ ಕುಮಾರ್, ಪರಿಶೀಲನೆ ಮಾಡಿದ್ದಾರೆ. ಮೃತನ ದೇಹದ ಮೇಲೆ ಮಚ್ಚಿನಿಂದ ಹೊಡೆದ ಗಾಯಗಳಾಗಿತ್ತು. ಅಲ್ಲಿ ಅಪಘಾತವಾದ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಈ ವೇಳೆ ತಕ್ಷಣ ಮೃತ ದೇಹವನ್ನು ಮುಳಬಾಗಿಲು ಶವಗಾರಕ್ಕೆ ರವಾನೆ ಮಾಡಿದ ಸಿಪಿಐ ಸತೀಶ್ ಕುಮಾರ್, ಇದು ಅಪಘಾತವಲ್ಲ ಕೊಲೆ ಎನ್ನುವುದನ್ನು ಖಾತರಿ ಪಡಿಸಿಕೊಂಡಿದ್ದರು.
ಇನ್ನು ಈ ಕುರಿತು ವಿಚಾರಣೆ ಮಾಡಲು ಶುರುಮಾಡಿದ ಪೊಲೀಸರು, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ , ಮೃತ ಮಂಜುನಾಥನ ಹೆಂಡತಿ ನೇತ್ರಾವತಿಯೇ ಈ ಕೊಲೆ ಮಾಡಿಸಿದ್ದಾಳೆಂದು ಊರಿನಲ್ಲೆಲ್ಲ ಗುಸು ಗುಸು ಶುರುವಾಗಿತ್ತು. ಆದರೂ ಪೊಲೀಸರು ಹೆಂಡತಿ ನೇತ್ರಾವತಿಯನ್ನು ವಿಚಾರಣೆ ಮಾಡದೆ, ಕಳೆದ ಎರಡು ತಿಂಗಳ ಹಿಂದೆ ಮೃತ ಮಂಜುನಾಥನ ಜೊತೆ ಗಲಾಟೆ ಮಾಡಿಕೊಂಡಿದ್ದ ಶ್ರೀನಿವಾಸ್ನನ್ನು ವಶಕ್ಕೆ ಪಡೆದು ವಿಚಾರಣೆ ಶುರುಮಾಡಿದರು. ಈ ವೇಳೆ ಸ್ಥಳಕ್ಕೆ ಬಂದಿದ್ದ ಮಂಜುನಾಥನ ಮೊದಲನೇ ಹೆಂಡತಿ ಗಲಾಟೆ ಶುರುಮಾಡಿದ್ದಳು. ಮಂಜುನಾಥನನ್ನು ಎರಡನೇ ಹೆಂಡತಿ ನೇತ್ರಾವತಿಯೇ ಕೊಲೆ ಮಾಡಿರುವುದು ಎಂದು ಪೊಲೀಸರೆದುರು ಹೇಳಲು ಶುರುಮಾಡಿದ್ದಳು.
ಕೊಲೆ ಆರೋಪಿಯನ್ನು ಭೇಧಿಸಿದ ಪೊಲೀಸರು
ಅಷ್ಟಕ್ಕೂ ಕೊಲೆಯಾದ ಮಂಜುನಾಥ್ ಕಳೆದ 22 ವರ್ಷಗಳ ಹಿಂದೆ ಶ್ರೀನಿವಾಸಪುರ ಮೂಲದ ಸೌಭಾಗ್ಯ ಎಂಬಾಕೆಯನ್ನು ಮದುವೆ ಮಾಡಿಕೊಂಡಿದ್ದ, ಹತ್ತು ವರ್ಷ ಸಂಸಾರ ಮಾಡಿ ನಂತರ, ಮಿಣಜೇನಹಳ್ಳಿ ಗ್ರಾಮದ ನೇತ್ರಾವತಿ ಎಂಬುವಳನ್ನು ಪ್ರೀತಿಸಿ ಎರಡನೇ ಮದುವೆ ಮಾಡಿಕೊಂಡಿದ್ದನಂತೆ. ಬಳಿಕ ಮೊದಲ ಹೆಂಡತಿಯನ್ನು ಬಿಟ್ಟುಬಂದಿದ್ದ. ಹತ್ತು ವರ್ಷಗಳಿಂದ ಮೊದಲ ಹೆಂಡತಿ ಜೊತೆಗೆ ಸಂಪರ್ಕ ಇರಲಿಲ್ಲ. ಎರಡನೇ ಹೆಂಡತಿ ಜೊತೆಗೆ ಬಂಗಾರಪೇಟೆಯಲ್ಲಿ ಮನೆ ಮಾಡಿಕೊಂಡು ಜೀವನ ಮಾಡುತ್ತಾ, ತಾನು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಕೇಬಲ್ ಕೆಲಸ ಮಾಡುತ್ತಿದ್ದ ಮಾದಮುತ್ತನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವನ ಜೊತೆಗೆ ಮಂಜುನಾಥ್ ಪತ್ನಿ ನೇತ್ರಾವತಿಗೆ ಸಲುಗೆ ಶುರುವಾಗಿತ್ತು. ಇದೇ ಕಾರಣದಿಂದಲೇ ಕಳೆದ ಎರಡು ತಿಂಗಳ ಹಿಂದೆ ಮಂಜುನಾಥ್ ಮತ್ತು ಶ್ರೀನಿವಾಸ್ ನಡುವೆ ಜಗಳವಾಗಿತ್ತು. ಇದಾದ ಬಳಿಕ ಇಬ್ಬರು ಪ್ಲಾನ್ ಮಾಡಿ ಶನಿವಾರ ರಾತ್ರಿ ಮಂಜುನಾಥ್ ಕೆಲಸ ಮುಗಿಸಿಕೊಂಡು ಬರುವಾಗ ರಾತ್ರಿ ಶ್ರೀನಿವಾಸ್, ಮಂಜುನಾಥ್ನನ್ನು ಬೈಕ್ನಿಂದ ಕೆಳಗೆ ಬೀಳಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಅಪಘಾತದ ರೀತಿಯಲ್ಲಿ ಬಿಂಬಿಸಲಾಗಿತ್ತು. ಆದರೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣವೊಂದು ಬಯಲಾಗಿದೆ.
ಒಟ್ಟಾರೆ ಮೊದಲನೇ ಹೆಂಡತಿಯನ್ನು ಬಿಟ್ಟು, ಇನ್ನೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ಎರಡನೇ ಹೆಂಡತಿಯ ಹಿಂದೆ ಹೋದವನಿಗೆ ಕೊನೆಗೆ ತಾನು ಮಾಡಿದ ಕರ್ಮವೇ ವಾಪಸ್ಸಾಗಿದೆ. ತಾನು ಮೊದಲ ಹೆಂಡತಿಯನ್ನು ಬಿಟ್ಟು ಎರಡನೇ ಹೆಂಡತಿ ಜೊತೆಗೆ ಹೋದಂತೆ, ಎರಡನೇ ಹೆಂಡತಿಯೂ ಮತ್ತೊಬ್ಬನ ಹಿಂದೆ ಹೋಗಿ, ಈತನನ್ನು ಇಹಲೋಕದಿಂದಲೇ ಕಳಿಸಿದ್ದಾಳೆ.