Bengaluru News: GAY ಆ್ಯಪ್ ಮೂಲಕ ಕರೆಸಿಕೊಂಡಿದ್ದ ವ್ಯಕ್ತಿಯಿಂದ ಚಿನ್ನಾಭರಣಗಳ ಸುಲಿಗೆ
ಡೇಟಿಂಗ್ ಆ್ಯಪ್ಗಳ ಮೂಲಕ ಜನ ವಂಚನೆಗೀಡಾಗುತ್ತಿರುವ ವಿದ್ಯಮಾನಗಳು ಬೆಂಗಳೂರಿನಲ್ಲಿ ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಅಂಥದ್ದೇ ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮನೆಯಿಂದ ಚಿನ್ನಾಭರಣ, ಹಣ ದೋಚಿದ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು, ನವೆಂಬರ್ 28: ‘GAY’ ಆ್ಯಪ್ನಲ್ಲಿ ‘ಆರ್ಡರ್’ ಮಾಡಿ ಕರೆಸಿಕೊಂಡಿದ್ದ ವ್ಯಕ್ತಿ ಇತರ ಆಗಂತುಕರ ಜತೆ ಸೇರಿ ಮನೆಯಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ (Bengaluru) ಆಡುಗೋಡಿ (Adugodi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳು ಫರ್ಹಾನ್ ಎಂಬಾತ ಮತ್ತು ಆತನ ಗ್ಯಾಂಗ್ನವರು ಎಂದು ಹೇಳಲಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಡೆದಿದ್ದೇನು?
ನದೀಂ ಎಂಬಾತನಿಗೆ GRINDR ಎಂಬ GAY ಡೇಟಿಂಗ್ ಆ್ಯಪ್ನಲ್ಲಿ ಫರ್ಹಾನ್ ಎಂಬಾತ ಪರಿಚಯವಾಗಿತ್ತು. ನಂತರ ನದೀಂ ಆ್ಯಪ್ ಮೂಲಕ ‘ಆರ್ಡರ್’ ಮಾಡಿ ಫರ್ಹಾನ್ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಸ್ವಲ್ಪ ಸಮಯ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಬಳಿಕ ನದೀಂ ವಾಷ್ ರೂಂಗೆ ಹೋಗಿದ್ದರು. ಇದೇ ವೇಳೆ, ಏಕಾಏಕಿ ದೊಣ್ಣೆಗಳೊಂದಿಗೆ ನಾಲ್ವರು ಆಗಂತುಕರು ಮನೆಯೊಳಗೆ ನುಗ್ಗಿದ್ದಾರೆ. ಇವರನ್ನೆಲ್ಲ ಫರ್ಹಾನ್ ಕರೆ ತಂದಿದ್ದ ಎನ್ನಲಾಗಿದೆ.
ಏಕಾಏಕಿ ಮನೆಯೊಳಗೆ ನುಗ್ಗಿದ ಆಗಂತುಕರು ನದೀಂ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಆದರೆ, ಪರಾರಿಯಾಗುವುದಕ್ಕೂ ಮುನ್ನ ನದೀಂ ಬಳಿ ಇದ್ದ 45 ಸಾವಿರ ರೂ. ಮೌಲ್ಯದ ಮೊಬೈಲ್, ದುಬಾರಿ ವಾಚ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ. ಸಂತ್ರಸ್ತನ ಗೂಗಲ್ ಪೇ, ಫೋನ್ಪೇನಲ್ಲಿದ್ದ ಹಣವನ್ನೂ ತಮ್ಮ ಖಾತೆಗಳಿಗೆ ಆರೋಪಿಗಳು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಘಟನೆ ಸಂಬಂದ ಫರ್ಹಾನ್ ಹಾಗೂ ಇನ್ನಿತರರ ವಿರುದ್ಧ ನದೀಂ ಪೊಲೀಸರಿಗೆ ದೂರು ನೀಡಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದೇ ಮೊದಲಲ್ಲ
ಡೇಟಿಂಗ್ ಆ್ಯಪ್ಗಳ ಮೂಲಕ ಪರಿಚಿರತಾಗಿ ನಂತರ ವಂಚನೆ ಎಸಗಿರುವ ಹಲವಾರು ಪ್ರಕರಣಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿವೆ.
ಇದನ್ನೂ ಓದಿ: ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ವ್ಯಕ್ತಿಯಿಂದ ಹಣ ಸುಲಿಗೆ ಮಾಡಿದ ಮಹಿಳೆ
ಇತ್ತೀಚೆಗಷ್ಟೇ ಜೆ.ಪಿ.ನಗರ 5ನೇ ಹಂತದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಮಹಿಳೆಯೋರ್ವಳು ತನ್ನ ಪತಿ ದುಬೈನಲ್ಲಿದ್ದಾನೆ ಎಂದು ಹೇಳಿ ವ್ಯಕ್ತಿಯೋರ್ವನನ್ನು ಮನೆಗೆ ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಹಣ ದೋಚಿದ್ದಳು. ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ವೈಟ್‌ಫೀಲ್ಡ್ ನಿವಾಸಿಯನ್ನು ಲೈಂಗಿಕ ಕ್ರಿಯೆಗೆ ಅಂತ ತನ್ನ ಜೆ.ಪಿ.ನಗರದ 5ನೇ ಹಂತದ ಮನೆಗೆ ಕರೆಸಿಕೊಂಡು ಮಹಿಳೆ ಹಾಗೂ ಆಕೆಯ ತಂಡ ಸೇರಿಕೊಂಡು ಈ ಕೃತ್ಯ ಎಸಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ