ಲಕ್ನೋದಲ್ಲಿ ಡೆಲಿವರಿ ಬಾಯ್ ಬರ್ಬರ ಹತ್ಯೆ; ಹೆಣದ ತುಂಡುಗಳನ್ನು ಕಾಲುವೆಗೆ ಎಸೆದ ಹಂತಕರು

|

Updated on: Sep 30, 2024 | 8:38 PM

ಉತ್ತರ ಪ್ರದೇಶದ ಲಕ್ನೋ ಪೊಲೀಸರು ಡೆಲಿವರಿ ಬಾಯ್ ಭರತ್ ಕುಮಾರ್​ನ ಆಘಾತಕಾರಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾರ್ಸೆಲ್ ಪಾವತಿಗೆ ಸಂಬಂಧಿಸಿದ ವಿವಾದದ ಕಾರಣಕ್ಕೆ ಭರತ್​ನನ್ನು ಬರ್ಬರವಾಗಿ ಕೊಲ್ಲಲಾಗಿದೆ. ಒಬ್ಬ ಶಂಕಿತ ಆಕಾಶ್ ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸರು ಎನ್‌ಡಿಆರ್‌ಎಫ್ ತಂಡಗಳೊಂದಿಗೆ ಭರತ್​ನ ಮೃತದೇಹಕ್ಕಾಗಿ ಕಾಲುವೆಯಲ್ಲಿ ಹುಡುಕುತ್ತಿದ್ದಾರೆ.

ಲಕ್ನೋದಲ್ಲಿ ಡೆಲಿವರಿ ಬಾಯ್ ಬರ್ಬರ ಹತ್ಯೆ; ಹೆಣದ ತುಂಡುಗಳನ್ನು ಕಾಲುವೆಗೆ ಎಸೆದ ಹಂತಕರು
ಭರತ್
Follow us on

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಡೆಲಿವರಿ ಬಾಯ್ ಭರತ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿ, ಆತನ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ಬಳಿಕ ಅವುಗಳನ್ನು ಕಾಲುವೆಯ ಒಂದೊಂದು ಬದಿಯಲ್ಲಿ ಎಸೆಯಲಾಗಿದೆ. ಇದೀಗ ಲಕ್ನೋ ಪೊಲೀಸರು ಮೃತದೇಹಕ್ಕಾಗಿ ಕಾಲುವೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಮೃತ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಗೋಣಿಚೀಲದಲ್ಲಿ ತುಂಬಿ ಅಲ್ಲಲ್ಲಿ ಬಿಸಾಡಲಾಗಿದೆ. ಪೊಲೀಸರೊಂದಿಗೆ ಎಸ್‌ಡಿಆರ್‌ಎಫ್ ತಂಡವೂ ಶವಕ್ಕಾಗಿ ಹುಡುಕಾಟ ನಡೆಸುತ್ತಿದೆ.

ಕೊಲೆಯ ಆರೋಪಿಗಳು ಹೇಳಿದಂತೆ ಶವವನ್ನು ಇಂದಿರಾ ಕಾಲುವೆಗೆ ಎಸೆದು 24 ಗಂಟೆಗೂ ಹೆಚ್ಚು ಸಮಯ ಕಳೆದರೂ ಇಲ್ಲಿಯವರೆಗೆ ಶವದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಶವವನ್ನು ಕಾಲುವೆಗೆ ಎಸೆಯಲಾಗಿದೆಯೇ ಅಥವಾ ಬೇರೆಡೆ ಎಸೆಯಲಾಗಿದೆಯೇ? ಎಂಬ ಅನುಮಾನವೂ ಉಂಟಾಗಿದೆ. 1 ವಾರದ ಹಿಂದೆಯೇ ಕೊಲೆ ನಡೆದಿದ್ದು, ನಿಶಾತ್ ಗಂಜ್ ನ ಡೆಲಿವರಿ ಬಾಯ್ ಆಗಿರುವ ಭರತ್ 8 ವರ್ಷಗಳಿಂದ ಆನ್ ಲೈನ್ ಶಾಪಿಂಗ್ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ತಂದೆ-ತಾಯಿ ಮತ್ತು ಸಹೋದರ ಇದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ; ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ, ಒಂದು ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು

ಪ್ರತಿ ದಿನದಂತೆ ಸೆಪ್ಟೆಂಬರ್ 24 ರಂದು ಬೆಳಗ್ಗೆ ಡ್ಯೂಟಿಗಾಗಿ ಭರತ್ ಮನೆಯಿಂದ ಹೊರಟಿದ್ದ. ಮೊದಲು ಆತ ಚಿನ್ಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಸತ್ರಿಖ್ ರಸ್ತೆಯಲ್ಲಿರುವ ಗೋಡೌನ್‌ಗೆ ಹೋಗಿ ಅಲ್ಲಿಂದ ಸರಕುಗಳನ್ನು ತೆಗೆದುಕೊಂಡು, ನಂತರ ಅವುಗಳನ್ನು ತಲುಪಿಸಲು ಹೊರಟಿದ್ದ. ಆರೋಪಿಗಳು 2 ಆಂಡ್ರಾಯ್ಡ್ ಮೊಬೈಲ್​ಗಳನ್ನು ಆರ್ಡರ್ ಮಾಡಿದ್ದರು. ಭರತ್ ಚಿನ್ಹಾಟ್ ಪ್ರದೇಶದಿಂದಲೇ ಡೆಲಿವರಿ ಮಾಡಲು ಆರಂಭಿಸಿದ್ದ. ಆರೋಪಿಗಳಾದ ಗಜಾನಂದ್ ಮತ್ತು ಆಕಾಶ್ ಅವರು ಕೆಲವು ದಿನಗಳ ಹಿಂದೆ ಆನ್‌ಲೈನ್ ಶಾಪಿಂಗ್ ಕಂಪನಿಯಿಂದ ಎರಡು ಆಂಡ್ರಾಯ್ಡ್ ಫೋನ್‌ಗಳನ್ನು ಆರ್ಡರ್ ಮಾಡಿದ್ದರು. ಈ ಎರಡು ಫೋನ್‌ಗಳನ್ನು ತಲುಪಿಸಲು ಭರತ್ ಅವರ ಬಳಿ ಹೋಗಿದ್ದ. ಮನೆಗೆ ತಲುಪಿದ ತಕ್ಷಣ ಭರತ್ ಅವರಿಗೆ ಫೋನ್ ಮಾಡಿ ನಿಮಗೆ ಪಾರ್ಸಲ್ ಬಂದಿದೆ, ತೆಗೆದುಕೊಂಡು ಹೋಗಿ ಎಂದು ಹೇಳಿದ. ಇದಾದ ಮೇಲೆ ಗಜಾನಂದ್ ಮತ್ತು ಆಕಾಶ್ ಇಬ್ಬರೂ ಸೇರಿ ಭರತ್ ನಿಂದ ಮೊಬೈಲ್ ತೆಗೆದುಕೊಂಡಿದ್ದಾರೆ.

ಅದು ಕ್ಯಾಶ್ ಆನ್ ಡೆಲಿವರಿ ಆದ ಕಾರಣದಿಂದ ಮೊಬೈಲ್ ಫೋನ್ ನೀಡುವಾಗ ಭರತ್ ಅವರ ಬಳಿ ಹಣ ಕೇಳಿದರು. ಆದರೆ ಮೊಬೈಲ್ ಫೋನ್​ಗೆ ಬದಲಾಗಿ ಅವರಿಬ್ಬರೂ ಬೇರೆ ಬೇರೆ ಪ್ಲಾನ್ ಮಾಡಿದ್ದರು. ಇಬ್ಬರಿಗೂ ಹಣ ಕೊಡಲು ಇಷ್ಟವಿರಲಿಲ್ಲ. ಅವರು ಫೋನ್ ಅನ್ನು ಉಚಿತವಾಗಿ ಪಡೆಯಲು ಬಯಸಿದ್ದರು. ಇದರಿಂದ ಭರತ್​ನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ವಿಲೇವಾರಿ ಮಾಡಬೇಕಿದ್ದ ಕಾರಣ ಮೊದಲು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಗೋಣಿಚೀಲದಲ್ಲಿ ಶವ ತುಂಬಿ ಮೇಟಿ ಪ್ರದೇಶದಲ್ಲಿ ಹಾದು ಹೋಗುವ ಇಂದಿರಾ ಕಾಲುವೆಗೆ ಎಸೆದಿದ್ದಾರೆ.

ಇದನ್ನೂ ಓದಿ: ಮಹಿಳೆ ವಿಚಾರಕ್ಕೆ ಸ್ನೇಹಿತನ ಕೊಲೆ; ಪಶ್ವಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಮತ್ತೊಂದೆಡೆ, ಭರತ್ ತಡರಾತ್ರಿಯವರೆಗೂ ತನ್ನ ಮನೆಗೆ ಹಿಂತಿರುಗದಿದ್ದಾಗ, ಕುಟುಂಬದವರು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಸೆ. 25ರಿಂದ ಆತನಿಗಾಗಿ ಹುಡುಕಾಟ ಆರಂಭಿಸಿದ ಪೊಲೀಸರು 4 ದಿನಗಳ ಕಾಲ ಅಲ್ಲಿ ಇಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ನಂತರ ಪೊಲೀಸರು ಅವರ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡಿದಾಗ ಆತನ ನೆಟ್​ವರ್ಕ್​ನ ಕೊನೆಯ ಸ್ಥಳವು ಗಜಾನಂದ್ ಮತ್ತು ಆಕಾಶ್ ಅವರ ಮನೆಯ ಹೊರಗೆ ಪತ್ತೆಯಾಗಿದೆ.

ಕಳೆದ ಭಾನುವಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಜಾನಂದ್ ಮತ್ತು ಆಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ವಿಚಾರಣೆ ವೇಳೆ ಇಬ್ಬರೂ ಡೆಲಿವರಿ ಬಾಯ್ ಭರತ್ ನನ್ನು ಕೊಂದಿರುವುದಾಗಿ ಒಪ್ಪಿಕೊಂಡು ಎಷ್ಟು ಬರ್ಬರವಾಗಿ ಕೊಂದಿದ್ದೇವೆ ಎಂದು ವಿವರಿಸಿದ್ದಾರೆ. ಪೊಲೀಸರು ಶವದ ಬಗ್ಗೆ ಕೇಳಿದಾಗ, ಇಬ್ಬರೂ ಶವವನ್ನು ಗೋಣಿಚೀಲದಲ್ಲಿ ತುಂಬಿ ಇಂದಿರಾ ಕಾಲುವೆಗೆ ಎಸೆದಿದ್ದೇವೆ ಎಂದು ಹೇಳಿದರು. ಅವರು ಹೇಳಿದ ಸ್ಥಳದ ಪ್ರಕಾರ, ಪೊಲೀಸರು ಶವಕ್ಕಾಗಿ ಹುಡುಕಾಟ ಪ್ರಾರಂಭಿಸಿದರು, ಆದರೆ ಏನೂ ಪತ್ತೆಯಾಗಲಿಲ್ಲ. ಆಗ ಪೊಲೀಸರು ಎಸ್‌ಡಿಆರ್‌ಎಫ್‌ನ ಸಹಾಯವನ್ನೂ ಪಡೆದರು. ಭರತ್ ಮೃತದೇಹಕ್ಕಾಗಿ ಪೊಲೀಸರು 24 ಗಂಟೆಗೂ ಹೆಚ್ಚು ಕಾಲ ಶೋಧ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ