ಬೆಂಗಳೂರು: ನಗರದ ಪುನರ್ವಸತಿ ಕೇಂದ್ರಕ್ಕೆ (rehabilitation) ಚಿಕಿತ್ಸೆಗೆ ದಾಖಲಾದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ರಿಹ್ಯಾಬಿಲಿಟೇಶನ್ ಸೆಂಟರ್ನ ರವಿ ಮತ್ತು ಲೋಹಿತ್ ಬಂಧಿತ ಆರೋಪಿಗಳು. ಸ್ನಾನಕ್ಕೆ ಬಿಸಿ ನೀರು ಬೇಕೆಂದು ಪ್ರಾರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗಿತ್ತು. ಆರಿಫ್(30) ಕೊಲೆಯಾದ ದುರ್ದೈವಿ. ಕಳೆದ ಕೆಲ ದಿನಗಳ ಹಿಂದೆ ಆರಿಫ್ ಪುನರ್ವಸತಿ ಕೇಂದ್ರಕ್ಕೆ ಸೇರಿದ್ದ. ಶ್ರೀಸಾಯಿ ದೀನಬಂಧು ರಿಹ್ಯಾಬಿಲಿಟೇಶನ್ ಸೆಂಟರ್ನಲ್ಲಿ ಆರೀಫ್ ಇದ್ದ. ಕುಡಿತದ ಚಟ ಬಿಡಿಸಲು ಕುಟಂಬಸ್ಥರು ಶ್ರೀ ಸಾಯಿ ಸೆಂಟರ್ನಲ್ಲಿ ಬಿಟ್ಟು ಬಂದಿದ್ದರು.
ಈ ಸಂದರ್ಭದಲ್ಲಿ ಆರಿಫ್ಗೆ ಅಮಾನುಷವಾಗಿ, ಮಾರಣಾಂತಿಕವಾಗಿ ರವಿ ಮತ್ತು ಲೋಹಿತ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಸತ್ತ ವ್ಯಕ್ತಿಯನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಆರೀಪ್ನ ಕಾಲು, ಸೊಂಟ, ಬೆನ್ನಿಗೆ ಕಬ್ಬಿಣದ ರಾಡ್ನಿಂದ ಹೊಡೆದು ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ಮಾಡಲಾಗಿತ್ತು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ವಿಜಯಪುರ: ಯುವತಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ, ತಡವಾಗಿ ಬೆಳಕಿಗೆ
ಚಾಮರಾಜನಗರ: ಕಾಡಾನೆ ದಾಳಿಯಿಂದ ದಿನಗೂಲಿ ಫಾರೆಸ್ಟ್ ವಾಚರ್ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ತಾಲೂಕಿನ ಎತ್ತುಗಟ್ಟಿ ಬೆಟ್ಟದ ಬಳಿ ನಡೆದಿದೆ. ಪುಣಜನೂರು ಹೊಸಪೋಡು ನಿವಾಸಿ ನಂಜಯ್ಯ(35) ಮೃತ ವ್ಯಕ್ತಿ. 2 ದಿನಗಳ ಹಿಂದಷ್ಟೇ ನಂಜಯ್ಯ ಅವರನ್ನು ದಿನಗೂಲಿ ನೌಕರನಾಗಿ ಅರಣ್ಯ ಇಲಾಖೆ ನೇಮಿಸಿಕೊಂಡಿತ್ತು. ವಡ್ಗಲ್‌ಪುರ, ಚೆನ್ನಪ್ಪನಪುರ ಸುತ್ತಮುತ್ತ ಆನೆಗಳ ಹಿಂಡು ಒಡಾಡುತ್ತಿದ್ದವು. ಆನೆಗಳ ಹಿಂಡನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ.
ಗದಗ: ಆಕಸ್ಮಿಕ ಬೆಂಕಿ ತಗುಲಿ 32 ಎಕರೆ ಕಬ್ಬು ಸಂಪೂರ್ಣ ಭಸ್ಮವಾಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಳ್ಳಿಯಲ್ಲಿ ನಡೆದಿದೆ. ರೈತ ವೈ. ಶೇಷಗಿರಿರಾವ್ಗೆ ಸೇರಿದ 32 ಎಕರೆ ಕಬ್ಬು ನಾಶವಾಗಿದ್ದು, ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಯತ್ನಿಸಿದ್ದು, ನಿರಂತರ ಪ್ರಯತ್ನಿಸಿದ್ರೂ ಬೆಂಕಿ ಹತೋಟಿಗೆ ಬರಲಿಲ್ಲ. ಬೆಂಕಿ ಕೆನ್ನಾಲಿಗೆ ನೋಡಿ ರೈತ ವೈ.ಶೇಷಗಿರಿರಾವ್ ಕಂಗಾಲಾದರು. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದರು. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: ಬೈಕ್ನಲ್ಲಿ ಎಳೆದೊಯ್ದ ಪ್ರಕರಣ: ಚಾಲಕ ಮುತ್ತಪ್ಪನನ್ನು ಸಾಯಿಸುವ ಉದ್ದೇಶ ಇತ್ತು ಎಂದು ತಪ್ಪೊಪ್ಪಿಕೊಂಡ ಆರೋಪಿ ಶಾಹಿಲ್
ಮೈಸೂರು: ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ಕೆಆರ್ನಗರ ತಾಲ್ಲೂಕು ಚುಂಚನಕಟ್ಟೆಯಲ್ಲಿ ನಡೆದಿದೆ. ಸುದೀಪ್ (20) ಸಾವನ್ನಪ್ಪಿದ ವಿದ್ಯಾರ್ಥಿ. ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಘಟನೆ ನಡೆದಿದೆ. ನದಿಯಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:02 pm, Thu, 19 January 23