ಬೈಕ್‌ನಲ್ಲಿ ಎಳೆದೊಯ್ದ ಪ್ರಕರಣ: ಚಾಲಕ ಮುತ್ತಪ್ಪನನ್ನು ಸಾಯಿಸುವ ಉದ್ದೇಶ ಇತ್ತು ಎಂದು ತಪ್ಪೊಪ್ಪಿಕೊಂಡ ಆರೋಪಿ ಶಾಹಿಲ್
ಬೈಕ್‌ನಲ್ಲಿ ವೃದ್ಧ ಚಾಲಕ ಮುತ್ತಪ್ಪನನ್ನು ಎಳೆದೊಯ್ದಿದ್ದ ಆರೋಪಿ ಶಾಹಿಲ್ ಪೊಲೀಸರ ಮುಂದೆ ಸ್ವ ಇಚ್ಚಾ ಹೇಳಿಕೆ ನೀಡಿದ್ದು, ಚಾಲಕ ಮುತ್ತಪ್ಪನನ್ನು ಸಾಯಿಸುವ ಉದ್ದೇಶ ಇತ್ತು ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾನೆ.
ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿ ವೃದ್ಧ ಚಾಲಕನ್ನ ಬೈಕ್‌ನಲ್ಲಿ ಎಳೆದೊಯ್ದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾಹಿಲ್ ಸ್ವ ಇಚ್ಚಾ ಹೇಳಿಕೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ವೃದ್ದ ಮುತ್ತಪ್ಪನನ್ನ ಸಾಯಿಸುವ ಉದ್ದೇಶ ಇತ್ತು ಎನ್ನುವ ಸ್ಪೋಟಕ ಅಂಶವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮುಂದೆ ಸ್ವ ಇಚ್ಚಾ ಹೇಳಿಕೆಯಲ್ಲಿ ಘಟನೆ ಕುರಿತ ಪೂರ್ವ-ಪರ ಸಂಪೂರ್ಣ ಮಾಹಿತಿ ಬಾಯ್ಬಿಟ್ಟಿದ್ದಾನೆ. ಅದು ಟಿವಿ9ಗೆ ಲಭ್ಯವಾಗಿದೆ. ಹಾಗಾದ್ರೆ, ಶಾಹಿಲ್ ಏನೆಲ್ಲಾ ಹೇಳಿದ್ದಾನೆ ಎನ್ನುವ ಯಥಾವತ್ ಸ್ವ ಇಚ್ಚಾ ಹೇಳಿಕೆ ಈ ಕೆಳಗಿನಂತಿದೆ.
ಇದನ್ನೂ ಓದಿ: ಬೆಂಗಳೂರು: ಕಾರು ಚಾಲಕನನ್ನು ದರದರನೆ 1ಕಿ.ಮೀ ಎಳೆದೊಯ್ದ ಬೈಕ್ ಸವಾರ: ಇಲ್ಲಿದೆ ಭಯಾನಕ ವಿಡಿಯೋ
ಶಾಹಿಲನ ಯಥಾವತ್ ಸ್ವ ಇಚ್ಚಾ ಹೇಳಿಕೆ ಇಲ್ಲಿದೆ
ನಾನು ಬೆಂಗಳೂರಿನಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದೇನೆ. ನನ್ನ ತಾಯಿ ಶಬನಮ್ ಮತ್ತು ತಮ್ಮನ ಜೊತೆಯಲ್ಲಿ ವಾಸವಾಗಿರುತ್ತೇನೆ. ನನ್ನ ತಂದೆ ಮೂಲತಃ ಗುಜರಾತ್ ರಾಜ್ಯದವರಾಗಿದ್ದು, ವಾಸವಿ ಇಂಟರ್ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿದ್ದು, ಬಳಿಕ ಓದುವುದನ್ನು ಬಿಟ್ಟಿದ್ದೆ. ಇದಾದ ನಂತರ ಕಳೆದ 7 ತಿಂಗಳಿಂದ ಬೆಂಗಳೂರಿನ ಕೆಂಗೇರಿಯಲ್ಲಿ ಇರುವ ಯುನೈಟೆಡ್ ಅಸೋಸಿಯೇಟ್ಸ್ ಎಂಬ ಟಾಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇದ್ದು, ಹಣವನ್ನು ಸಂಗ್ರಹ ಮಾಡುವ ಜವಬ್ದಾರಿಯನ್ನು ತೆಗೆದುಕೊಂಡಿದ್ದೆ,
ಈ ದಿನ ದಿನಾಂಕ ಜನವರಿ 17 ರಂದು ಬೆಳಗ್ಗೆ 9ಗಂಟೆಗೆ ಎಂದಿನಂತೆ ನಮ್ಮ ಮಾಲೀಕರು ನನಗೆ ಯಲಹಂಕದ ಕಡೆಗೆ ಹೋಗಿ ಆರ್ಡರ್ ಹಾಗೂ ಕಲೆಕ್ಷನ್ ಮಾಡಿಕೊಂಡು ಬರುವಂತೆ ಕೆಲಸಕ್ಕೆ ನೇಮಿಸಿದ್ದು, ಅದರಂತೆ ನಾನು ನನ್ನ ಸುಜುಕಿ ಆಕ್ಸಿಸ್ ಸ್ಕೂಟರ್ ಅಲ್ಲಿ ಯಲಹಂಕದ ಕಡೆಗೆ ಹೋಗಿ ಅರ್ಡರ್ ಮತ್ತು ಹಣವನ್ನು ಕಲೆಕ್ಷನ್ ಮಾಡಿಕೊಂಡು ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ನಾಯಂಡನಹಳ್ಳಿಯ ನಮ್ಮ ಮನೆಗೆ ಹೋಗುವ ಸಲುವಾಗಿ ವೆಸ್ಟ್ ಅಪ್ ಕಾರ್ಡ್ ರಸ್ತೆಯ ಮುಖಾಂತರ ಟೋಲ್‌ಗೇಟ್ ಬಳಿಯ ಅಂಡರ್‌ಪಾಸ್ ರಸ್ತೆಯ ಬದಿಯಲ್ಲಿ ಒಂದು ಬೊಲೆರೋ ವಾಹನ ನಿಂತಿತ್ತು. ನಾನು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಸ್ಪೀಡಾಗಿ ಬರುತ್ತಿದ್ದರಿಂದ ಕಂಟ್ರೋಲ್ ಮಾಡಲು ಸಾಧ್ಯವಾಗದ ಕಾರಣ ಬೊಲೆರೋ ವಾಹನಕ್ಕೆ ಗುದ್ದಿ ಕೆಳಗಡೆ ಬಿದ್ದೆನು. ನಂತರ ಬೊಲೆರೋ ವಾಹನದ ಚಾಲಕರು ಅಲ್ಲೇ ಇದ್ದು ನನ್ನ ಬಳಿಗೆ ಬರುತ್ತಿದ್ದರು. ಅವರು ನನ್ನನ್ನು ಹಿಡಿಕೊಳ್ಳುತ್ತಾರೆ ಅಷ್ಟರಲ್ಲಿ ಅವರಿಂದ ತಪ್ಪಿಸಿಕೊಂಡು ಹೋಗಬೇಕೆಂದು ತೀರ್ಮಾನಿಸಿ ನಾನು ಹೊರಡಲು ಯತ್ನಿಸಿದಾಗ ಬೊಲೆರೋ ಡ್ರೈವರ್ ನನ್ನ ಸ್ಕೂಟರ್ ನ ಹಿಂಬದಿಯ ಸ್ಟ್ಯಾಂಡ್ ಹಿಡಿದುಕೊಂಡರು. ನಂತರ ನಾನು ನನ್ನ ಗಾಡಿಯನ್ನು ನಿಲ್ಲಿಸದೇ ಅಲ್ಲಿಂದ ಇನ್ನೂ ಸ್ಪೀಡಾಗಿ ಗಾಡಿ ಓಡಿಸಿಕೊಂಡು ಹೊಗುತ್ತಿದ್ದಾಗ ಬೊಲೆರೋ ಡ್ರೈವರ್ ಗಾಡಿ ನಿಲ್ಲಿಸುವಂತೆ ಕೇಳಿಕೊಂಡಿದ್ದು, ನಾನು ಗಾಡಿಯನ್ನು ನಿಲ್ಲಿಸದೇ ಹಾಗೇ ಎಳೆದುಕೊಂಡು ಹೋಗಿ ಅವನನ್ನು ಸಾಯಿಸಬೇಕೆಂದು ತೀರ್ಮಾನಿಸಿಕೊಂಡು ಸುಮಾರು 500 ರಿಂದ 600 ಮೀಟರ್‌ವರೆಗೆ ಗಾಡಿಯಲ್ಲೇ ಎಳೆದುಕೊಂಡು ಹೋಗುತ್ತಿದ್ದೆನು.
ಅಷ್ಟರಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರು ಅಡ್ಡ ಬಂದು ನನ್ನನ್ನು ತಡೆದು ನಿಲ್ಲಿಸಿ ಗಾಡಿ ಸಮೇತ ಹಿಡಿದುಕೊಂಡರು. ಅಷ್ಟರಲ್ಲಿ ಅಲ್ಲಿಗೆ ಹೊಯ್ಸಳ ಪೊಲೀಸರು ಬಂದು ನನ್ನನ್ನು ನನ್ನ ಸ್ಕೂಟರ್ ಸಮೇತ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ. ನಾನು ಈ ರೀತಿ ಮಾಡಿರುವುದು ತಪ್ಪಾಗಿರುತ್ತದೆ ಎಂದು ಸ್ವ ಇಚ್ಚಾ ಹೇಳಿಕೆಯಲ್ಲಿ ವಿವರಿಸಿದ್ದಾನೆ.
ವರದಿ: ಶಿವಪ್ರಸಾದ್ ಟಿವಿ9 ಬೆಂಗಳೂರು
Published On - 6:36 pm, Thu, 19 January 23