Bengaluru: ದೋಹಾ-ಬೆಂಗಳೂರು ವಿಮಾನದಲ್ಲಿ 13 ವರ್ಷದ ಬಾಲಕಿಗೆ ಕಿರುಕುಳ ನೀಡಿದ ವ್ಯಕ್ತಿ ಬಂಧನ
ದೋಹಾ-ಬೆಂಗಳೂರು ವಿಮಾನದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ 51 ವರ್ಷದ ವ್ಯಕ್ತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬೆಂಗಳೂರು: ದೋಹಾ-ಬೆಂಗಳೂರು (Doha-Bengaluru flight) ವಿಮಾನದಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ 51 ವರ್ಷದ ವ್ಯಕ್ತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಘಟನೆ ಜೂನ್ 27 ರಂದು ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಆರೋಪಿಯನ್ನು ತಮಿಳುನಾಡಿನ ಶಿವಗಂಗಾ ನಿವಾಸಿ ಅಮ್ಮವಾಸಾಯಿ ಮುರುಗೇಶನ್ ಎಂದು ಗುರುತಿಸಲಾಗಿದೆ. ಇವರು ಕತಾರ್ ರಾಜಧಾನಿ ದೋಹಾದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ, ವಿಮಾನದಲ್ಲಿ 13 ವರ್ಷದ ಬಾಲಕಿಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಆಕೆಗೆ ಆಹಾರ ಅಥವಾ ನೀರು ಬೇಕೇ ಎಂದು ಕೇಳಲು ಪ್ರಾರಂಭಿಸಿದ್ದರು. ಹುಡುಗಿಯ ತಾಯಿ ಆರಂಭದಲ್ಲಿ ಅವರು ಸೌಜನ್ಯದಿಂದ ವರ್ತಿಸುತ್ತಾರೆ ಎಂದು ಭಾವಿಸಿದ್ದರು. ಅಲ್ಲದೆ, ತಮಗೆ ಏನೂ ಅಗತ್ಯವಿಲ್ಲ ಎಂದು ಹೇಳಿದ್ದರು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಆದರೆ ಆರೋಪಿಯು ಹುಡುಗಿಯೊಂದಿಗೆ ಮಾತನಾಡಲು ಪ್ರಯತ್ನಿಸುವುದನ್ನು ಮುಂದುವರೆಸಿದರು ಮತ್ತು ಆಕೆಯ ಅಂಗಗಳನ್ನು ಸ್ಪರ್ಶಿಸಿದ ನಂತರ ಆಕೆಯ ತಾಯಿ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಹುಡುಗಿಯನ್ನು ಮತ್ತೊಂದು ಆಸನಕ್ಕೆ ಸ್ಥಳಾಂತರಿಸಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ನಂತರ ಮುರುಗನ್ ಅವರನ್ನು ಪೊಲೀಸರು ಬುಧವಾರ ಮುಂಜಾನೆ ಬಂಧಿಸಿದರು.
ಇದನ್ನೂ ಓದಿ: ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನ ಅಪಹರಿಸಿ ಹಣ ದೋಚಿದ್ದ ಪ್ರಕರಣ; ಐವರಲ್ಲಿ ಇಬ್ಬರ ಬಂಧನ
ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜೂನ್ 24 ರಂದು, ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರು ಮದ್ಯದ ಅಮಲಿನಲ್ಲಿ ವಿಮಾನದಲ್ಲಿ ಮಲವಿಸರ್ಜನೆ ಮಾಡಿ ಬಂಧನಕ್ಕೊಳಗಾಗಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ