ರಾಯಚೂರು: ತಮ್ಮನನ್ನೇ ಲೈವ್ ಮರ್ಡರ್ ಮಾಡಿದ್ದ ಅಣ್ಣಂದಿರು ಅರೆಸ್ಟ್!
ಅಣ್ಣಂದಿರು ಸೇರಿ ತಮ್ಮನನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಣ್ಣಂದಿರು ಸೇರಿ ಐದು ಜನ ಖಾಕಿ ಖೆಡ್ಡಾಗೆ ಬಿದ್ದಿದ್ದಾರೆ. ಇನ್ನು ಹಲ್ಲೆಗೊಳಗಾದವ ಕೊನೆಯುಸಿರೆಳೆಯುತ್ತಿದ್ದರೂ ಕೂಡ ಗ್ರಾಮಸ್ಥರು ಆತನ ಸಹಾಯಕ್ಕೆ ಬಂದಿರಲಿಲ್ಲ. ಅಷ್ಟಕ್ಕೂ ಗ್ರಾಮಕ್ಕೆ ವಿಲನ್, ಮನೆಗೆ ಚಕ್ರವರ್ತಿಯಾಗಿದ್ದವನ ಕೊಲೆ ಕೇಸ್ ಎಂಥದ್ದು ಅಂತೀರಾ? ಈ ಸ್ಟೋರಿ ಓದಿ.
ರಾಯಚೂರು, ಏ.04: ಜಿಲ್ಲೆಯ ಮಾನ್ವಿ(Manvi) ತಾಲ್ಲೂಕಿನ ಜೀನೂರು ಗ್ರಾಮದಲ್ಲಿ ಇದೇ ಮಾರ್ಚ್ 31ರಂದು ನಡೆದ ರಾಮಣ್ಣ ಎನ್ನುವ ವ್ಯಕ್ತಿಯ ಕೊಲೆ ನಡೆದಿತ್ತು. ನಿನ್ನೆಯಯಷ್ಟೇ ಕೆಲ ಹಂತಕರು ಸೇರಿ ದೊಣ್ಣೆ,ಕೊಡಲಿಗಳಿಂದ ಹೊಲದಲ್ಲಿ ನೆಲಕ್ಕೆ ಕೆಡವಿ ಸಿನಿಮಾ ಸ್ಟೈಲಿನಲ್ಲಿ ಹತ್ಯೆಗೈದಿರುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಜನ ಬೆಚ್ಚಿ ಬಿದ್ದಿದ್ದರು. ಮೃತ ರಾಮಣ್ಣನ ಅಣ್ಣಂದಿರಾದ ಮೂಕಯ್ಯ ಅಲಿಯಾಸ್ ಮುದುಕಯ್ಯ, ನಿಂಗಪ್ಪ ಸೇರಿ ಒಟ್ಟು ಎಂಟು ಜನರ ವಿರುದ್ಧ ಮಾನ್ವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪೈಕಿ ಪೊಲೀಸರು ಸದ್ಯ ರಣ ರಕ್ಕಸ ಅಣ್ಣಂದಿರಾದ ಮೂಕಯ್ಯ, ನಿಂಗಪ್ಪ, ಆತನ ಪತ್ನಿ ಲಕ್ಷ್ಮೀ, ಮುದುಕಯ್ಯನ ಪತ್ನಿ ನೀಲಮ್ಮ,ಮುದುಕಯ್ಯನ ಮಗ ಸೋಮು ಸೇರಿ ಐದು ಜನ ಆರೋಪಿಗಳನ್ನ ಮಾನ್ವಿ ಪೊಲೀಸರು ಬಂಧಿಸಿದ್ದಾರೆ.
ಭೀಕರ ಹತ್ಯೆಗೆ ಕಾರಣವೇನು?
ಹೌದು, ತನಿಖೆ ವೇಳೆ ಬರೀ 2 ಎಕರೆ 10 ಗುಂಟೆ ಜಮೀನು ವಿವಾದ ವಿಚಾರವಾಗಿ ಹತ್ಯೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದೇ ಪ್ರಕರಣದ ತನಿಖೆ ವೇಳೆ ಮತ್ತೊಂದು ಸ್ಫೋಟಕ ಸತ್ಯ ಕೂಡ ಬಯಲಾಗಿದೆ. ಮೃತ ರಾಮಣ್ಣ ಹಲ್ಲೆ ಬಳಿಕ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ. ಆಗ ಆತನ ಸಹಾಯಕ್ಕೆ ಬಂದಿದ್ದ ಆತನ ಸಹೋದರಿಯರು, ಗ್ರಾಮಸ್ಥರಿಗೆ ಅಂಗಲಾಚಿ ಬೇಡಿದರೂ. ಆತನನ್ನ ಆಸ್ಪತ್ರೆಗೆ ಕರೆದೊಯ್ಯೋಣ ಬನ್ನಿ ಎಂದು ಗೋಗರೆದಿದ್ದರು. ಆದರೂ ಯಾವೋಬ್ಬ ಗ್ರಾಮಸ್ಥನು ಅವನ ಸಹಾಯಕ್ಕೆ ಬಂದಿರಲಿಲ್ಲವಂತೆ. ಬಳಿಕ ಮೃತನ ಅಕ್ಕಂದಿರೇ ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಹಂತಕರು ಮಾರಕಾಸ್ತ್ರ ಹಿಡಿದುಕೊಂಡು ರಾಮಣ್ಣನ ಸಹಾಯಕ್ಕೆ ಬಂದ್ರೆ, ಕೊಲ್ಲುವುದಾಗಿ ಧಮ್ಕಿ ಹಾಕಿದ್ದರು. ಹೀಗಾಗಿ ಊರ ಜನ ಸಹಾಯಕ್ಕೆ ಬಂದಿರ್ಲಿಲ್ಲ ಎಂದು ಆತನ ಕುಟುಂಬಸ್ಥರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಹೈಕೋರ್ಟ್‌ನಲ್ಲಿ ಜಡ್ಜ್ ಮುಂದೆಯೇ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ? ಆ ವ್ಯಕ್ತಿ ಯಾರು? ಇಲ್ಲಿದೆ ವಿವರ
ಆದ್ರೆ, ಅಸಲಿ ಸತ್ಯ ಏನಂದರೆ, ಈ ಹಿಂದೆ ರಾಮಣ್ಣನ ಹೊಲದ ಪಕ್ಕದಲ್ಲಿರುವ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವುದಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಕಾಮಗಾರಿ ಶುರುವಾಗುವ ವೇಳೆ ರಾಮಣ್ಣ ಕ್ಯಾತೆ ತೆಗೆದು ಕಾಂಕ್ರೀಟ್ ರಸ್ತೆಯಿಂದ ತನ್ನ ಹೊಲಕ್ಕೆ ಸಮಸ್ಯೆ ಆಗುತ್ತದೆ ಎಂದು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿ ಇಡೀ ಗ್ರಾಮವನ್ನೇ ಎದುರು ಹಾಕಿಕೊಂಡಿದ್ದ. ಇದೇ ಕಾರಣಕ್ಕೆ ಗ್ರಾಮಸ್ಥರು ಆತನ ಸಹಾಯಕ್ಕೆ ಹೋಗಿರ್ಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದಷ್ಟೇ ಅಲ್ಲ, ಹಲವು ವರ್ಷಗಳ ಹಿಂದೆ ಆರೋಪಿ ನಿಂಗಪ್ಪ ಒಂದು ಕೊಲೆ ಮಾಡಿದ್ದನಂತೆ. ತನ್ನ ಪತ್ನಿ ಲಕ್ಷ್ಮೀ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನ ಕೊಂದಿದ್ದನಂತೆ. ಆಗ ಮೃತನ ಕಡೆಯವರು ನಿಂಗಪ್ಪನನ್ನ ಹತ್ಯೆ ಮಾಡಲು ಊರೂರು ಹುಡುಕುತ್ತಿದ್ದರಂತೆ. ಆಗ ಇದೇ ರಾಮಣ್ಣ, ಆಸ್ತಿ ವಿಚಾರ, ಅಣ್ಣ ತಮ್ಮಂದಿರ ನಡುವೆ ಗಲಾಟೆ ಇದ್ದದ್ದೆ. ಅದನ್ನ ಪಕ್ಕಕ್ಕೆ ಇಟ್ಟು ಅಣ್ಣನ ಪ್ರಾಣ ಉಳಿಸಬೇಕು ಎಂದು ಆತನನ್ನ ರಕ್ಷಣೆ ಮಾಡಿ ಕರೆತಂದಿದ್ದ. ನಂತರ ಪೊಲೀಸ್ ಕೇಸ್ ಆಗಿ ಕೋರ್ಟು ಕಚೇರಿ ಎಂದು ಲಕ್ಷಾಂತರ ರೂಪಾಯಿ ಸ್ವಂತ ಹಣ ಖರ್ಚು ಮಾಡಿದ್ದನಂತೆ. ಆ ಋಣಕ್ಕಾದರೂ ನಿಂಗಪ್ಪ ಹಾಗೂ ಆತನ ಪತ್ನಿ, ಮಗ ರಾಮಣ್ಣನನ್ನ ಉಳಿಸಬೇಕಿತ್ತು ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ