ಪತ್ನಿ ಅಕ್ರಮ ಸಂಬಂಧ ಶಂಕೆ; ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
ತಂದೆ ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ಘಟನೆ ಕೋಲಾರದಲ್ಲಿ ನಡೆದಿದೆ. ಪತ್ನಿ ಬೇರೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಅನ್ನೋ ಕಾರಣಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ಬೆಂಗಳೂರಿನ ಊರ್ವಶಿ ಥಿಯೇಟರ್ ಬಳಿ ಟ್ರಕ್ ಹರಿದು 5 ವರ್ಷದ ಬಾಲಕ ಅಶ್ವಿತ್ ಮೃತಪಟ್ಟಿದ್ದಾನೆ.

ಕೋಲಾರ, ಏಪ್ರಿಲ್.01: ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು (Hanging) ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಸೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾರಾಯಣಸ್ವಾಮಿ(40), ಪವನ್(12), ನಿತಿನ್(10) ಮೃತರು. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪತ್ನಿ ಲಕ್ಷ್ಮೀ ಬೇರೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಅನ್ನೋ ಕಾರಣಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಟ್ರಕ್ ಹರಿದು 5 ವರ್ಷದ ಬಾಲಕ ಅಶ್ವಿತ್ ಸಾವು
ಬೆಂಗಳೂರಿನ ಊರ್ವಶಿ ಥಿಯೇಟರ್ ಬಳಿ ಟ್ರಕ್ ಹರಿದು 5 ವರ್ಷದ ಬಾಲಕ ಅಶ್ವಿತ್ ಮೃತಪಟ್ಟಿದ್ದಾನೆ. ಶೌಚಾಲಯಕ್ಕೆ ತೆರಳಿದ್ದ ಬಾಲಕ ಅಶ್ವಿತ್ ಮೇಲೆ ಟ್ರಕ್ ಹರಿದಿದೆ. ಟ್ರಕ್ ಟೈರ್ಗೆ ಸಿಲುಕಿ ಬಾಲಕ ಅಶ್ವಿತ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಸ್ಥಳಕ್ಕೆ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟ್ರಕ್‌ಗೆ ಬೈಕ್ ಡಿಕ್ಕಿ, ಯುವಕರಿಬ್ಬರು ದುರ್ಮರಣ
ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬೈಕ್ ಡಿಕ್ಕಿಯಾಗಿ, ಇಬ್ಬರು ಸವಾರರು ಸಾನ್ನಪ್ಪಿದ್ದಾರೆ. ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿ ಅಪಘಾತ ನಡೆದಿದ್ದು, ಅರಕಲಗೂಡು ತಾಲೂಕಿನ ಚಿಕ್ಕ ಆಲದಹಳ್ಳಿಯ ನಿವಾಸಿ ಅಶ್ವತ್ಥ್ ಮತ್ತು ಸಾಗರ್ ಮೃತಪಟ್ಟ ಬೈಕ್ ಸವಾರರು. ಸದ್ಯ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು: ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ, ಚುನಾವಣಾ ಆಯೋಗದಿಂದ ತುರ್ತು ನೋಟಿಸ್
ನೀರಿನ ಬಕೆಟ್ಗೆ ಬಿದ್ದು ಹೆಣ್ಣು ಮಗು ಸಾವು
ನೀರಿನ ಬಕೆಟ್ಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ಕೊನೆಯುಸಿರೆಳೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಆಸೀಫ್-ಅಂಜುಮ್ ದಂಪತಿಯ ಪುತ್ರಿ ಆನಮ್ ಫಾತಿಮಾ ಸಾವನ್ನಪ್ಪಿದ್ದಾಳೆ. ಮಗಳನ್ನ ಕಳೆದುಕೊಂಡ ಪೋಷಕರ ಗೋಳಾಟ ಮುಗಿಲುಮುಟ್ಟಿತ್ತು.
ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಸಾವು
ನೇತ್ರಾವತಿ ನದಿಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ನೇತ್ರಾವತಿ ನದಿಯಲ್ಲಿ ಮೂವರು ಯುವಕರು ಈಜಲು ಹೋಗಿದ್ದರು. ಅದ್ರಲ್ಲಿ ಓರ್ವ ಬಲಿಯಾಗಿದ್ದು, ಮತ್ತಿಬ್ಬರನ್ನು ಸ್ಥಳೀಯ ನಿವಾಸಿ ಮೊಹಮ್ಮದ್ ರಕ್ಷಿಸಿದ್ದಾರೆ. ಸದ್ಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:46 pm, Mon, 1 April 24




