ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮಗ ಅಮಾಯಕನೆಂದು ನಿರೂಪಿಸಲು ತಾಯಿ ತಾನೇ ತನಿಖೆ ನಡೆಸಿ ‘ಕೊಲೆಯಾದವಳನ್ನು’ ಪತ್ತೆಮಾಡಿದಳು!

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈಗ 25-ವರ್ಷ-ವಯಸ್ಸಿನವನಾಗಿರುವ ಆರೋಪಿ ವಿಷ್ಣುನ ತಾಯಿ ಮಹಿಳೆಯನ್ನು ಹತ್ರಾಸ್ ನಲ್ಲಿ ಪತ್ತೆಮಾಡಿದ್ದಾಳೆ. ಅವಳನ್ನು ನೋಡಿ ಗುರುತಿಸಿದ ಬಳಿಕ ಆಕೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಕೂಡಲೇ ಅವರು ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮಗ ಅಮಾಯಕನೆಂದು ನಿರೂಪಿಸಲು ತಾಯಿ ತಾನೇ ತನಿಖೆ ನಡೆಸಿ ‘ಕೊಲೆಯಾದವಳನ್ನು’ ಪತ್ತೆಮಾಡಿದಳು!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2022 | 5:10 PM

ಲಖನೌ: ಇದೊಂದು ರೋಚಕ ಸತ್ಯಘಟನೆ ಮತ್ತು ಕ್ರೈಮ್ ಸಿನಿಮಾ ನಿರ್ಮಿಸುವವರಿಗೆ ಆದ್ಭುತವಾದ ಕಥಾವಸ್ತು. ಸುಮಾರು ಏಳು ವರ್ಷಗಳ ಹಿಂದೆ ಕೊಲೆಯಾದ (murder) ಮಹಿಳೆಯೊಬ್ಬಳು ಸತ್ತಿಲ್ಲ ಇನ್ನೂ ಬದುಕಿದ್ದಾಳೆ (still alive) ಎಂದು ಅವಳ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದವನ ತಾಯಿಯೇ ಪತ್ತೆ ಮಾಡಿರುವ ಕುತೂಹಲಕಾರಿ ಪ್ರಕರಣವಿದು! ತನ್ನ ಮಗ ಕೊಲೆ ಮಾಡುವುದು ಸಾಧ್ಯವೇ ಇಲ್ಲ ಬಲವಾಗಿ ನಂಬಿದ್ದ ಆಕೆ ‘ಕೊಲೆಯಾಗಿದ್ದಾಳೆಂದು’ ಹೇಳಲಾದ ಮಹಿಳೆಯನ್ನು ಪತ್ತೆ ಮಾಡುವ ಮೂಲಕ ಅವನ ಅಮಾಯಕತೆಯನ್ನು ಸಾಬೀತು ಮಾಡಿದ್ದಾಳೆ. ಈಗ 22-ವರ್ಷ-ವಯಸ್ಸಿನವಳಾಗಿರುವ ಮಹಿಳೆಯನ್ನು 7 ವರ್ಷಗಳ ಹಿಂದೆ ಉತ್ತರ ಪ್ರದೇಶದ ಅಲಿಗಡ್ (Aligarh) ಜಿಲ್ಲೆಯಲ್ಲಿ ಅಪಹರಿಸಿ ‘ಕೊಲೆ’ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಹತ್ರಾಸ್​ನಲ್ಲಿ ಪತ್ತೆ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈಗ 25-ವರ್ಷ-ವಯಸ್ಸಿನವನಾಗಿರುವ ಆರೋಪಿ ವಿಷ್ಣುನ ತಾಯಿ ಮಹಿಳೆಯನ್ನು ಹತ್ರಾಸ್ ನಲ್ಲಿ ಪತ್ತೆಮಾಡಿದ್ದಾಳೆ. ಅವಳನ್ನು ನೋಡಿ ಗುರುತಿಸಿದ ಬಳಿಕ ಆಕೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಕೂಡಲೇ ಅವರು ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆಕೆಯ ಗುರುತನ್ನು ಪತ್ತೆ ಮಾಡಲು ಪೊಲೀಸರು ಡಿಎನ್ಎ ಪ್ರೊಫೈಲಿಂಗ್ ಮಾಡುವ ಪ್ರಕ್ರಿಯೆಯನ್ನು ಈಗ ಆರಂಭಿಸಿದ್ದು ಅದು ಪೂರ್ಣಗೊಂಡ ಬಳಿಕ ತನಿಖೆಯನ್ನು ಮುಂದುವರಿಸಲಿದ್ದಾರೆ.

ಇಗ್ಲಾಸ್ ಸರ್ಕಲ್ ಇನ್ಸ್ ಪೆಕ್ಟರ್ ರಾಘ್ವೇಂದ್ರ ಸಿಂಗ್ ಪಿಟಿಐ ಸುದ್ದಿಮಾಧ್ಯಮಕ್ಕೆ ನೀಡಿರುವ ಮಾಹಿತಿ ಪ್ರಕಾರ, 2015 ರಲ್ಲಿ 15-ವರ್ಷ-ವಯಸ್ಸಿನ ಹುಡುಗಿಯೊಬ್ಬಳು ನಾಪತ್ತೆಯಾದ ಬಳಿಕ ಅವಳ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಮತ್ತು ಐಪಿಸಿ ಸೆಕ್ಷನ್ 363 ಮತ್ತು 366 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

ಅದು ನನ್ನ ಮಗಳು ಎಂದಿದ್ದ ತಂದೆ

ಕೆಲ ಸಮಯದ ಬಳಿಕ ಆಗ್ರಾದಲ್ಲಿ ಕೊಲೆಯಾಗಿದ್ದ ಅದೇ ವಯಸ್ಸಿನ ಹುಡುಗಿಯ ದೇಹ ಪತ್ತೆಯಾಗಿರುವ ಸುದ್ದಿ ಕಿವಿಗೆ ಬಿದ್ದಾಗ ಅಲ್ಲಿಗೆ ಧಾವಿಸಿದ ನಾಪತ್ತೆಯಾದ ಹುಡುಗಿಯ ತಂದೆ, ಅದು ತನ್ನ ಮಗಳೇ ಅಂತ ಹೇಳಿದ್ದರು.

ಅದಾಗಲೇ ಮಿಸ್ಸಿಂಗ್ ಅಂತ ದಾಖಲಾಗಿದ್ದ ಪ್ರಕರಣಕ್ಕೆ ಕೊಲೆ ಚಾರ್ಜ್ ಅನ್ನೂ ಸೇರಿಸಲಾಯಿತು ಮತ್ತು ವಿಷ್ಣುವನ್ನು ಜೈಲಿಗೆ ಕಳಿಸಲಾಯಿತು. ಪೊಲೀಸರ ತನಿಖೆಯಿಂದ ಅಸಂತುಷ್ಟಳಾಗಿದ್ದ ವಿಷ್ಣುವಿನ ತಾಯಿ ತನ್ನದೇ ಆದ ತನಿಖೆ ನಡೆಸಲು ಮುಂದಾದಳು. ಏಳು ವರ್ಷಗಳ ಸುದೀರ್ಘ ಹುಡುಕಾಟದ ನಂತರ ಆಕೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋದಾಗ ‘ಕೊಲೆಯಾಗಿದ್ದ’ ಯುವತಿಯನ್ನು ಪತ್ತೆಮಾಡಿದಳು.

ಯುವತಿಯ ಹೇಳಿಕೆ ದಾಖಲು

ಮಹಿಳೆಯನ್ನು ಸೋಮವಾರದಂದು ಅಲಿಗಡ್ ನ  ಸ್ಥಳಿಯ ಕೊರ್ಟ್ ಒಂದರಲ್ಲಿ ಹಾಜರುಪಡಿಸಲಾಯಿತು ಮತ್ತು ಸೆಕ್ಷನ್ 164 ರ ಅಡಿಯಲ್ಲಿ ಮಂಗಳವಾರದಂದು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಅವಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು ಎಂದು ಸಿಂಗ್ ಹೇಳಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸುವ ಮೊದಲು ನಾವು ಮಹಿಳೆಯ ಡಿಎನ್ ಎ ಪ್ರೊಫೈಲಿಂಗ್ ನಡೆಸಲು ನಿರ್ಧರಿಸಿದ್ದೇವೆ. ಡಿಎನ್ ಎ ಸ್ಯಾಂಪಲ್ ಗಳನ್ನು ಆಕೆಯ ತಂದೆ ತಾಯಿಗಳೊಂದಿಗೆ ಮ್ಯಾಚ್ ಮಾಡಲಾಗುವುದು, ವರದಿ ಸಿಕ್ಕ ಬಳಿಕ ತನಿಖೆಯನ್ನು ಮುಂದುವರಿಸಲಾಗುವುದು,’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪತ್ತೇದಾರಿಣಿ ಅಮ್ಮ!

ಮಾಧ್ಯಮದವರು ವಿಷ್ಣುವಿನ ತಾಯಿಗೆ ಪ್ರಕರಣದ ಬಗ್ಗೆ ಕೇಳಿದಾಗ, ‘ ಉದ್ದೇಶಪೂರ್ವಕವಾಗಿ ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಅಂತ ನನಗೆ ಮೊದಲ ದಿನದಿಂದಲೇ ಗೊತ್ತಿತ್ತು. ಹಾಗಾಗೇ ಖುದ್ದು ನಾನೇ ತನಿಖೆ ನಡೆಸಲು ಮುಂದಾದೆ,’ ಎಂದು ಹೇಳಿದಳು.

ಇನ್ನಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ