ಕಟ್ಕೊಂಡವಳು ಕಡೇತನಕ, ಇಟ್ಕೊಂಡವಳು ಇರೋತನಕ ಎಂಬ ಗಾದೆ ಮಾತೊಂದಿದೆ. ಈ ಮಾತು ಈತನ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ಏಕೆಂದರೆ ಈತ ಮದುವೆಯಾದ ಬಳಿಕ ಕೂಡ ಬೇರೊಬ್ಬಳನ್ನು ಇಟ್ಟುಕೊಂಡಿದ್ದಳು. ಆದರೆ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆದರೆ ಇದು ಪತ್ನಿಯ ಬುದ್ದಿವಂತಿಕೆಯಿಂದಲ್ಲ, ಬದಲಾಗಿ ಆತನ ದಡ್ಡತನದಿಂದಾಗಿ ಎಂಬುದು ವಿಶೇಷ. ಹೌದು, ಮುಂಬೈ ಮೂಲದ 32 ವರ್ಷದ ಇಂಜಿನಿಯರ್ ಮದುವೆಯಾದ ಬಳಿಕ ಕೂಡ ಪ್ರೇಯಸಿ ಜೊತೆ ಚಕ್ಕಂದ ಮುಂದುವರೆಸಿದ್ದನು. ಆದರೆ ಈ ವಿಚಾರ ಹೆಂಡತಿಗೆ ಮಾತ್ರ ತಿಳಿದಿರಲಿಲ್ಲ. ಇತ್ತ ಪತಿಯೇ ದೇವರು ಎನ್ನುತ್ತ ಆಕೆ ಗಂಡನ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಪತಿರಾಯ ಪ್ರೇಯಸಿ ಜೊತೆ ಮಾಲ್ಡೀವ್ಸ್ಗೆ ಮೈಮರೆಯಲು ಹೋಗಿದ್ದಾನೆ.
ಹೀಗೆ ಮೋಜು ಮಸ್ತಿ ಮುಗಿಸಿ ಭಾರತಕ್ಕೆ ಹಿಂತಿರುಗಿದ್ದಾನೆ. ಇದೇ ವೇಳೆ ಮಾಡಿದ ಎಡವಟ್ಟಿನಿಂದ ಇದೀಗ ಆತನ ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ. ಅಂದರೆ ಆತ ತೋರಿಸಿದ ಅತಿ ಬುದ್ದಿವಂತಿಕೆಯಿಂದಲೇ ಈಗ ಸಿಕ್ಕಿಬಿದ್ದಿರುವುದು ವಿಶೇಷ. ಹೌದು, ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿರುವುದಾಗಿ ಮನೆಬಿಟ್ಟಿದ್ದ. ಹೀಗಾಗಿ ಮಾಲ್ಡೀವ್ಸ್ಗೆ ಹೋಗಿರುವ ವಿಚಾರವನ್ನು ಪತ್ನಿಯಿಂದ ಮರೆ ಮಾಚಲು ಪ್ಲ್ಯಾನ್ ರೂಪಿಸಿದ್ದ.
ಆದರೆ ಪಾಸ್ ಪೋರ್ಟ್ನಲ್ಲಿ ಮಾಲ್ಡೀವ್ಸ್ಗೆ ಹೋಗಿರುವ ವಿಚಾರ ದಾಖಲಾಗಿತ್ತು. ಇದನ್ನು ನೋಡಿದರೆ ಹೆಂಡತಿಗೆ ಸಂಶಯ ಮೂಡಬಹುದು ಎಂದು ಆ ಪುಟಗಳನ್ನು ಹರಿದಿದ್ದಾನೆ. ಅಲ್ಲದೆ ಗರ್ಲ್ ಫ್ರೆಂಡ್ ಜೊತೆ ಫುಲ್ ಜೋಶ್ನೊಂದಿಗೆ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ. ಇದೇ ವೇಳೆ ಏರ್ಪೋರ್ಟ್ ಎಮಿಗ್ರೇಷನ್ ಅಧಿಕಾರಿಗಳು ಪಾಸ್ ಪೋರ್ಟ್ ಅನ್ನು ಪರಿಶೀಲಿಸಿದ್ದಾರೆ.
ಆದರೆ ಪಾಸ್ ಪೋರ್ಟ್ ದಾಖಲೆಯ ಪುಟ 3-6 ಮತ್ತು 31-34 ಅನ್ನು ಹರಿದು ಹಾಕಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡ ಏರ್ಪೋರ್ಟ್ ಎಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಬಾಯ್ ಫ್ರೆಂಡ್ ಪೊಲೀಸರ ಪಾಲಾಗುತ್ತಿದ್ದಂತೆ, ಮತ್ತೊಂದೆಡೆ ಪ್ರೇಯಸಿ ಎಸ್ಕೇಪ್ ಆಗಿದ್ದಳು. ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಆತ ಕೊನೆಗೂ ಪೊಲೀಸರ ಮುಂದೆ ಮಾಡಿದ ಎಡವಟ್ಟುಗಳನ್ನು ಬಾಯಿಬಿಟ್ಟಿದ್ದಾನೆ.
ತಾನು ಪ್ರೇಯಸಿ ಜೊತೆ ಮಾಲ್ಡೀವ್ಸ್ಗೆ ಹೋದ ವಿಚಾರವನ್ನು ಹೆಂಡತಿ ತಿಳಿಯದಂತೆ ಮರೆಮಾಚಲು ಪಾಸ್ ಪೋರ್ಟ್ನ ಪುಟಗಳನ್ನು ಹರಿದು ಹಾಕಿರುವುದಾಗಿ ತಿಳಿಸಿದ್ದಾನೆ. ಇದರ ಹೊರತಾಗಿ ಯಾವುದೇ ತಪ್ಪು ಮಾಡಿಲ್ಲ ಎಂದು ಅಂಗಲಾಚಿದ್ದಾನೆ. ಆ ಬಳಿಕ ಎಮಿಗ್ರೇಷನ್ ಅಧಿಕಾರಿಗಳು ಆತನ ಮನೆಯವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇದೇ ವೇಳೆ ಆತ ಹೋಗಿರುವ ದಿನಾಂಕ ಹಾಗೂ ಬರುವುದಾಗಿ ತಿಳಿಸಿದ ದಿನಾಂಕ ತಾಳೆಯಾಗಿತ್ತು. ಹೀಗಾಗಿ ನಡೆದ ವಿಚಾರವನ್ನು ಹೆಂಡತಿಗೆ ತಿಳಿಸಿದ್ದಾರೆ. ಅಂದರೆ ಯಾವ ಕಾರಣಕ್ಕಾಗಿ ಪಾಸ್ ಪೋರ್ಟ್ನ ಪುಟಗಳನ್ನು ಹರಿದಿದ್ದನೋ, ಅದೇ ಪುಟಗಳಿಂದಾಗಿ ಇದೀಗ ಆತನ ಅನೈತಿಕ ಸಂಬಂಧ ಹೆಂಡತಿಗೆ ಗೊತ್ತಾಗಿದೆ.
ಅಷ್ಟೇ ಅಲ್ಲದೆ ಉದ್ದೇಶಪೂರ್ವಕವಾಗಿ ಪಾಸ್ ಪೋರ್ಟ್ ದಾಖಲೆ ಪುಟಗಳನ್ನು ಹರಿದು ಹಾಕಿರುವುದಕ್ಕೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ವಂಚನೆ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟಿನಲ್ಲಿ ಪ್ರಿಯತಮೆಯ ತೋಳಿನಲ್ಲಿ ಮೈಮರೆತು ಮರಳಿದ್ದ ಇಂಜಿನಿಯರ್ ಸದ್ಯ ಜೈಲು ಪಾಲಾಗಿದ್ದಾರೆ.