Crime News In Kannada: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹೀಗೆ ಮೋಸ ಮಾಡುವವರ ಹೊಸ ದಾರಿ ಸೈಬರ್ ವಂಚನೆ. ಅಂದರೆ ಆನ್ಲೈನ್ಗಳ ಮೂಲಕವೇ ತಕ್ಷಣಾರ್ಧದಲ್ಲಿ ಮೋಸ ಮಾಡಿ ಎಸ್ಕೇಪ್ ಆಗುವುದು. ಆನ್ಲೈನ್ ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದರೂ, ಇನ್ನೂ ಕೂಡ ಜನರು ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮುಂಬೈನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ 27 ವರ್ಷದ ಯುವತಿಯೊಬ್ಬಳು ಇದೀಗ ಆನ್ಲೈನ್ ವಂಚಕರ ಬಲೆಗೆ ಬಿದ್ದಿದ್ದಾಳೆ. ಆಕೆಗೆ ಮಧ್ಯರಾತ್ರಿ ವಿಸ್ಕಿ ಕುಡಿಯಬೇಕೆಂಬ ಆಸೆಯಾಗಿತ್ತು. ಆದರೆ ಮನೆಯಲ್ಲಿದ್ದ ಬಾಟಲಿಗಳು ಕೂಡ ಖಾಲಿಯಾಗಿದ್ದವು. ಅತ್ತ ಮಧ್ಯರಾತ್ರಿಯಾಗಿದ್ದ ಕಾರಣ ಎಲ್ಲೂ ಬಾರ್ಗಳು ಓಪನ್ ಇರಲಿಲ್ಲ. ಹೀಗಾಗಿ ಆನ್ಲೈನ್ನಲ್ಲೇ ಆರ್ಡರ್ ಮೊರೆ ಹೋಗಿದ್ದಾಳೆ.
ಇದೇ ವೇಳೆ ಮನೆಗೆ ಮದ್ಯಗಳನ್ನು ಡೆಲಿವರಿ ಮಾಡಿಕೊಡುವ ಕಂಪೆನಿಗಳ ಬಗ್ಗೆ ಗೂಗಲ್ನಲ್ಲಿ ಜಾಲಾಡಿದ್ದಾರೆ. ಈ ವೇಳೆ ಮದ್ಯ ಡೆಲಿವರಿಯ ಜಾಹೀರಾತೊಂದು ಕಾಣಿಸಿಕೊಂಡಿದೆ. ಅದರಲ್ಲಿ ನೀಡಲಾಗಿದ್ದ ನಂಬರ್ಗೆ ಯುವತಿಯು ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ವ್ಯಕ್ತಿಯು ನಾನು ಬಾರ್ ಮಾಲೀಕ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ ಶಾಪ್ ಬಾಗಿಲು ಮುಚ್ಚಿದೆ. ನಿಮಗೆ ಬೇಕಿರುವ ಬ್ರಾಂಡ್ ತಿಳಿಸಿ, ನಾವೇ ಮನೆಗೆ ತಂದುಕೊಡುತ್ತೇವೆ ತಿಳಿಸಿದ್ದಾರೆ.
ಈ ಮಾತುಗಳನ್ನು ನಂಬಿದ ಆಕೆಯು ವಿಸ್ಕಿಯನ್ನು ಆರ್ಡರ್ ಮಾಡಿದ್ದಳು. ಇದೇ ವೇಳೆ ಕ್ಯೂಆರ್ ಕೋಡ್ ಕಳುಹಿಸಿ ಇದಕ್ಕೆ ಹಣ ಪಾವತಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ವಿಸ್ಕಿ ಪ್ರಿಯೆ 550 ರೂ. ಪೇ ಮಾಡಿದ್ದಾರೆ. ನಿಮಗೆ ಶೀಘ್ರದಲ್ಲೇ ಡೆಲಿವರಿ ಬಾಯ್ ಕರೆ ಮಾಡುತ್ತಾನೆ, ಆತನಿಗೆ ನಿಮ್ಮ ಅಡ್ರೆಸ್ ತಿಳಿಸುವಂತೆ ಹೇಳಿ ಕರೆ ಕಟ್ ಮಾಡಿದ್ದ.
ಡೆಲಿವರಿ ಬಾಯ್ಯ ಕರೆಗಾಗಿ ಕಾದು ಕುಳಿತಿದ್ದ ಆಕೆಗೆ ಕೊನೆಗೂ ಸೇಲ್ಸ್ ಎಕ್ಸಿಕ್ಯೂಟಿವ್ ಎಂದೇಳಿ ವ್ಯಕ್ತಿಯೊಬ್ಬರ ಕರೆ ಮಾಡಿದ್ದ. ಅಲ್ಲದೆ ಮದ್ಯವನ್ನು ಮನೆಗೆ ತಲುಪಿಸಬೇಕಿದ್ದರೆ ನೋಂದಣಿ ಮಾಡಿಕೊಳ್ಳಬೇಕಿರುವುದು ಸರ್ಕಾರದ ರೂಲ್ಸ್. ಹೀಗಾಗಿ ನಿಮ್ಮ ಕೆಲ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದ. ಇತ್ತ ವಿಸ್ಕಿಯ ಆಸೆಯಲ್ಲಿ ತನ್ನೆಲ್ಲಾ ಮಾಹಿತಿಗಳನ್ನು ನೀಡಿದ್ದಳು. ತಕ್ಷಣವೇ ಯುವತಿಯ ಮೊಬೈಲ್ಗೆ ಮೆಸೇಜ್ವೊಂದು ಬಂದಿದೆ.
ಮೆಸೇಜ್ ಓಪನ್ ಮಾಡಿ ನೋಡಿದ್ರೆ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 19,051 ರೂ. ವರ್ಗಾವಣೆಯಾಗಿತ್ತು.
ಇದನ್ನು ನೋಡಿ ಶಾಕ್ ಆದ ಯುವತಿಗೆ ಮತ್ತೆ ಆತನಿಂದಲೇ ಕರೆ ಬಂದಿದ್ದು, ಕ್ಷಮಿಸಿ ಟೆಕ್ನಿಕಲ್ ಸಮಸ್ಯೆಯಿಂದಾಗಿ ನಿಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಅದನ್ನು ನಾವು ವಾಪಸ್ ನಿಮ್ಮ ಖಾತೆಗೆ ಹಾಕುತ್ತೇವೆ. ನಿಮಗೆ ಬಂದಿರುವ ಒಟಿಪಿ ನಂಬರ್ ಹೇಳಿ ಎಂದಿದ್ದಾನೆ. ಅದಾಗಲೇ ದುಡ್ಡು ಕಳೆದುಕೊಂಡಿದ್ದ ಯುವತಿಯು ಮತ್ತೆ ದುಡ್ಡು ವಾಪಾಸ್ ಬರುವ ನಿರೀಕ್ಷೆಯಲ್ಲಿ ಒಟಿಪಿ, ಡೆಬಿಟ್ ಕಾರ್ಡ್ ನಂಬರ್, ಸಿವಿವಿ ಸಂಖ್ಯೆ ಎಲ್ಲವನ್ನೂ ನೀಡಿದ್ದಳು.
ಎಲ್ಲಾ ಮಾಹಿತಿ ಸಿಗುತ್ತಿದ್ದಂತೆ ಕರೆ ಕಟ್ ಆಗಿದೆ. ಏನಾಯ್ತು ಅನ್ನುವಷ್ಟಲ್ಲಿ ಮತ್ತೆ ಮೆಸೇಜ್ ಬಂದಿದೆ. ನೋಡ ನೋಡುತ್ತಿದ್ದಂತೆ ಯುವತಿಯ ಖಾತೆಯಿಂದ ಹಣ ವರ್ಗಾವಣೆಯಾಗುತ್ತಿತ್ತು. ಮೋಸ ಹೋದೆ ಎಂಬ ಅರಿವು ಮೂಡುವಷ್ಟರಲ್ಲಿ ವಂಚಕರ ತಂಡ ಹಂತ ಹಂತವಾಗಿ ಆಕೆಯ ಖಾತೆಯಿಂದ ಬರೋಬ್ಬರಿ 5.35 ಲಕ್ಷ ರೂ. ಎಗರಿಸಿದ್ದರು.
ಕೇವಲ 550 ರೂ. ವಿಸ್ಕಿಗಾಗಿ ಇದೀಗ 5 ಲಕ್ಷ 35 ಸಾವಿರ ರೂ. ಕಳೆದುಕೊಂಡಿರುವ ಯುವತಿಯು ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೆ ಹೇಗಾದ್ರು ಮಾಡಿ ನನ್ನ ಹಣವನ್ನು ವಾಪಸು ಕೊಡಿಸಿ ಎಂದು ಪೊಲೀಸರ ದುಂಬಾಲು ಬಿದ್ದಿದ್ದಾಳೆ. ಒಟ್ಟಿನಲ್ಲಿ ವಿಸ್ಕಿಯ ನಶೆ ಏರುವ ಮುನ್ನವೇ ಯುವತಿಯನ್ನು ಲೀಲಾಜಾಲವಾಗಿ ವಂಚಿಸಿ ಸೈಬರ್ ಕಳ್ಳರು ನಂಬರ್ ಬದಲಿಸಿ ಮರೆಯಾಗಿದ್ದಾರೆ.