Murder: ಪ್ರೀತಿಸಿ ಮದುವೆಯಾದ ಮಗಳು- ಅಳಿಯನನ್ನು ಕೊಚ್ಚಿ ಕೊಂದ ತಂದೆ

| Updated By: ಸುಷ್ಮಾ ಚಕ್ರೆ

Updated on: Jul 26, 2022 | 1:46 PM

Tamil Nadu News: ಮುತ್ತುಕುಟ್ಟಿ ಅವರ ಪುತ್ರಿ ರೇಷ್ಮಾ (20) ಅದೇ ಊರಿನಲ್ಲಿ ದಿನಗೂಲಿ ನೌಕರನಾಗಿದ್ದ ಮಾಣಿಕ ರಾಜ್ (26) ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಅವರ ಮದುವೆಗೆ ತಂದೆಯ ವಿರೋಧವಿತ್ತು.

Murder: ಪ್ರೀತಿಸಿ ಮದುವೆಯಾದ ಮಗಳು- ಅಳಿಯನನ್ನು ಕೊಚ್ಚಿ ಕೊಂದ ತಂದೆ
ಸಾಂದರ್ಭಿಕ ಚಿತ್ರ
Image Credit source: India Today
Follow us on

ಚೆನ್ನೈ: ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ತಂದೆಯೊಬ್ಬ ತನ್ನ ಮಗಳು ಮತ್ತು ಅಳಿಯನನ್ನು ಕೊಚ್ಚಿ (Murder) ಕೊಂದಿದ್ದಾನೆ. ತನ್ನ ಒಪ್ಪಿಗೆಯಿಲ್ಲದೆ ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಆಕ್ರೋಶಗೊಂಡು ಆ ವ್ಯಕ್ತಿ ತನ್ನ ಮಗಳು- ಅಳಿಯನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ವ್ಯಕ್ತಿಯನ್ನು ಮುತ್ತುಕುಟ್ಟಿ (50) ಎಂದು ಗುರುತಿಸಲಾಗಿದ್ದು, ಟುಟಿಕೋರಿನ್ (Tuticorin) ಜಿಲ್ಲೆಯ ಕೋವಿಲ್‌ಪಟ್ಟಿ ನಗರದ ಸಮೀಪದ ವೀರಪಟ್ಟಿ ಗ್ರಾಮದಲ್ಲಿ ಅವರು ವಾಸವಾಗಿದ್ದಾರೆ.

ಮುತ್ತುಕುಟ್ಟಿ ಅವರ ಪುತ್ರಿ ರೇಷ್ಮಾ (20) ಕೋವಿಲ್‌ಪಟ್ಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿದ್ದಳು. ಆಕೆ ಅದೇ ಊರಿನಲ್ಲಿ ದಿನಗೂಲಿ ನೌಕರನಾಗಿದ್ದ ಮಾಣಿಕ ರಾಜ್ (26) ಎಂಬಾತನನ್ನು ಪ್ರೀತಿಸುತ್ತಿದ್ದಳು. ಮುತ್ತುಕುಟ್ಟಿಗೆ ಅವರಿಬ್ಬರ ಸಂಬಂಧ ಇಷ್ಟವಿರಲಿಲ್ಲ. ಅಪ್ಪ ತಮ್ಮ ಸಂಬಂಧವನ್ನು ಒಪ್ಪದಿದ್ದರೂ ರೇಷ್ಮಾ ಹಠದಿಂದ ತಾನು ಇಷ್ಟಪಟ್ಟವನನ್ನೇ ಮದುವೆಯಾಗಿದ್ದಳು.

ಇವರ ಪ್ರೀತಿಗೆ ರೇಷ್ಮಾಳ ತಂದೆ ಮುತ್ತುಕುಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆ ಮದುವೆಯಾಗಿದ್ದ ದಂಪತಿ ಎರಡು ದಿನಗಳ ಹಿಂದಷ್ಟೇ ತಮ್ಮ ಗ್ರಾಮಕ್ಕೆ ವಾಪಾಸ್ ಬಂದಿದ್ದರು. ಹೊಸ ಜೀವನ ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದ ಆ ದಂಪತಿಗೆ ಆ ಯುವತಿಯ ತಂದೆಯೇ ವಿಲನ್ ಆಗಿದ್ದಾರೆ.

ಇದನ್ನೂ ಓದಿ: Murder: ಡ್ರಗ್ಸ್​​ ಸೇವಿಸುತ್ತಿದ್ದ ಮಗನನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ತುಂಬಿ ಬಿಸಾಡಿದ ಅಪ್ಪ!

ಮಗಳ ಮದುವೆಗೆ ಮುತ್ತುಕುಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ಗ್ರಾಮ ಪಂಚಾಯತಿ ಮೂಲಕ ಇಬ್ಬರಿಗೂ ಆ ಗ್ರಾಮದಲ್ಲಿ ವಾಸಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ತನಗೆ ಅವಮಾನ ಮಾಡಿದ್ದಕ್ಕೆ ಮುತ್ತುಕುಟ್ಟಿಗೆ ಮಗಳ ಮೇಲೆ ಸಿಟ್ಟು ಬಂದಿತ್ತು.

ಹೀಗಾಗಿ, ಮಗಳು ಊರಿಗೆ ವಾಪಾಸ್ ಬರುವುದನ್ನೇ ಕಾಯುತ್ತಿದ್ದ ಅವರು ನಿನ್ನೆ ಸಂಜೆ ಮನೆಯಲ್ಲಿ ರೇಷ್ಮಾ ಮತ್ತು ಆಕೆಯ ಪತಿ ಮಾಣಿಕರಾಜ್ ಮಾತ್ರ ಇದ್ದಾಗ ಮುತ್ತುಕುಟ್ಟಿ ಅಲ್ಲಿಗೆ ಹೋಗಿ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Murder: ವ್ಯಕ್ತಿಯನ್ನು ಕೊಂದು, ಅವರದೇ ಮನೆಯ ಫ್ರಿಡ್ಜ್​ನಲ್ಲಿ ಶವವಿಟ್ಟು ಹೋದ ಹಂತಕರು!

ಈ ಘಟನೆಯ ಬಗ್ಗೆ ಮಾಹಿತಿ ಆಧರಿಸಿ, ಎಟ್ಟಾಯಪುರಂ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಟ್ಯುಟಿಕೋರಿನ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಪೊಲೀಸರು ಮುತ್ತುಕುಟ್ಟಿಯನ್ನು ಕೂಡ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.