Murder: ಡ್ರಗ್ಸ್ ಸೇವಿಸುತ್ತಿದ್ದ ಮಗನನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತುಂಬಿ ಬಿಸಾಡಿದ ಅಪ್ಪ!
Gujarat News: ಎಲೆಕ್ಟ್ರಿಕ್ ಗ್ರೈಂಡರ್ ಮೂಲಕ ಮಗನ ಶವದ ತಲೆ, ಕಾಲು ಮತ್ತು ಕೈಗಳನ್ನು ಕತ್ತರಿಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಿದ್ದರು. ಆ ಪ್ಲಾಸ್ಟಿಕ್ ಚೀಲಗಳನ್ನು ಬೈಕ್ನಲ್ಲಿ ಹೊತ್ತೊಯ್ದು ಅಹಮದಾಬಾದ್ನ ಬೇರೆ ಬೇರೆ ಕಡೆ ಬಿಸಾಡಿದ್ದರು.
ಅಹಮದಾಬಾದ್: ಮಕ್ಕಳು ಏನಾದರೂ ಕೆಟ್ಟ ಅಭ್ಯಾಸ ರೂಢಿಸಿಕೊಂಡಿದ್ದಾರೆ ಎಂದು ಗೊತ್ತಾದರೆ ತಂದೆ-ತಾಯಿ ಅನುಭವಿಸುವ ನೋವು ಅಷ್ಟಿಷ್ಟಲ್ಲ. ತನ್ನ 21 ವರ್ಷದ ಮಗ ಡ್ರಗ್ಸ್ (Drugs) ಸೇವಿಸುತ್ತಿದ್ದಾನೆ ಎಂದು ಗೊತ್ತಾದಾಗ ಆ ತಂದೆ ಕೂಡ ಅಷ್ಟೇ ನೋವನ್ನು ಅನುಭವಿಸಿದ್ದರು. ಮಾದಕ ವ್ಯಸನಕ್ಕೆ ಅಡಿಕ್ಟ್ ಆಗಿದ್ದ ಮಗನನ್ನು ತಾವೇ ಕೊಂದು, ಆತನ ದೇಹದ ಭಾಗಗಳನ್ನು ಕತ್ತರಿಸಿ, ಅವುಗಳನ್ನು ಬೇರೆ ಬೇರೆ ಕಡೆಗಳಲ್ಲಿ ಬಿಸಾಡಿರುವ ಘಟನೆ ಗುಜರಾತ್ನಲ್ಲಿ (Gujarat) ನಡೆದಿದೆ. ಮಗನನ್ನು ಕೊಂದ ಆರೋಪದ ಮೇಲೆ ಗುಜರಾತ್‌ನ ಅಹಮದಾಬಾದ್ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಮಗನನ್ನು ಕೊಂದ ಬಳಿಕ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಆರೋಪಿ ನೇಪಾಳಕ್ಕೆ ಪರಾರಿಯಾಗುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ನೀಲೇಶ್ ಜೋಶಿ ಎಂಬ ವ್ಯಕ್ತಿಯೇ ತನ್ನ ಮಗನನ್ನು ದಾರುಣವಾಗಿ ಕೊಂದ ಆರೋಪಿ. ನಿವೃತ್ತ ಸರ್ಕಾರಿ ನೌಕರರಾಗಿರುವ ಅವರನ್ನು ಶನಿವಾರ ರಾತ್ರಿ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ ಸಂಸಾರ ಶುರು ಮಾಡಿದ್ದ ಪಾಗಲ್ ಪ್ರೇಮಿಯಿಂದ ಮಾಜಿ ಪ್ರೇಯಸಿ ಹತ್ಯೆ; ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಹಾಜರು
ಜುಲೈ 20 ಮತ್ತು 21ರಂದು ಅಹಮದಾಬಾದ್ ನಗರದ 2 ಸ್ಥಳಗಳಲ್ಲಿ ವ್ಯಕ್ತಿಯೊಬ್ಬರ ಕತ್ತರಿಸಿದ ತಲೆ, ಕೈ ಮತ್ತು ಕಾಲುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವು ಒಂದೇ ವ್ಯಕ್ತಿಗೆ ಸೇರಿದವು ಎಂದು ದೃಢಪಟ್ಟಿತ್ತು. ಈ ಕೊಲೆಯ ಹಿಂದೆ ಮೃತನ ತಂದೆಯ ಕೈವಾಡವಿದೆ ಎಂಬುದು ಪೊಲೀಸರಿಗೆ ಖಚಿತವಾಗಿತ್ತು. ನೀಲೇಶ್ ಜೋಶಿ ಜುಲೈ 22ರಂದು ಅಹಮದಾಬಾದ್‌ನಿಂದ ಸೂರತ್‌ಗೆ ಬಸ್‌ನಲ್ಲಿ ತೆರಳಿದ್ದರು. ಅಲ್ಲಿಂದ ನೇಪಾಳಕ್ಕೆ ತಪ್ಪಿಸಿಕೊಳ್ಳಲು ಗೋರಖ್‌ಪುರಕ್ಕೆ ರೈಲನ್ನು ಹತ್ತಿದ್ದರು. ಆಗ ಆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಅಪರಾಧ ವಿಭಾಗವು ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ರಾಜಸ್ಥಾನದ ಗಂಗಾನಗರ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಡ್ರಗ್ಸ್ ಮತ್ತು ಮದ್ಯದ ಚಟಕ್ಕೆ ದಾಸನಾಗಿದ್ದ ತನ್ನ ಮಗ ಸ್ವಯಂ ಎಂಬಾತನನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ನೀಲೇಶ್ ಜೋಶಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಮಾರಕಾಸ್ತ್ರದಿಂದ ಚುಚ್ಚಿ ಪತಿಯಿಂದ ಪತ್ನಿಯ ಕೊಲೆ; ಕೌಟುಂಬಿಕ ಸಮಸ್ಯೆಯಿಂದ ಕೊಲೆ ಮಾಡಿರುವ ಶಂಕೆ
ಜುಲೈ 18ರ ಬೆಳಗ್ಗೆ ಸ್ವಯಂ ಮಾದಕ ದ್ರವ್ಯ ಸೇವಿಸಿ, ಹಣ ನೀಡದಿದ್ದಕ್ಕೆ ತಂದೆಯ ಮೇಲೆ ದೌರ್ಜನ್ಯ ನಡೆಸಿದ್ದ. ಇದರಿಂದ ಕೋಪಗೊಂಡ ತಂದೆ ನೀಲೇಶ್ ತನ್ನ ಮಗನನ್ನು ಒದ್ದು, ಆತನ ತಲೆಗೆ ಕಲ್ಲಿನಿಂದ 7 ಬಾರಿ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಆ ಶವವನ್ನು ವಿಲೇವಾರಿ ಮಾಡಲು ಎಲೆಕ್ಟ್ರಿಕ್ ಗ್ರೈಂಡರ್ ಮತ್ತು ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿದರು. ಎಲೆಕ್ಟ್ರಿಕ್ ಗ್ರೈಂಡರ್ ಮೂಲಕ ಮಗನ ಶವದ ತಲೆ, ಕಾಲು ಮತ್ತು ಕೈಗಳನ್ನು ಕತ್ತರಿಸಿ, ಆರು ಭಾಗಗಳಾಗಿ ವಿಂಗಡಿಸಿ ನಂತರ ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಿದ್ದರು. ಆ ಪ್ಲಾಸ್ಟಿಕ್ ಚೀಲಗಳನ್ನು ಬೈಕ್ನಲ್ಲಿ ಹೊತ್ತೊಯ್ದು ನಗರದ ಬೇರೆ ಬೇರೆ ಕಡೆ ಬಿಸಾಡಿದ್ದರು.