Fake IPL: ಗುಜರಾತ್‌ನ ಗದ್ದೆಯಲ್ಲಿ ನಕಲಿ ಐಪಿಎಲ್ ಸೆಟ್ ಸೃಷ್ಟಿಸಿ ಬುಕಿಗಳಿಗೆ ವಂಚನೆ: ಖತರ್ನಾಕ್ ಗ್ಯಾಂಗ್ ಅರೆಸ್ಟ್
ಗದ್ದೆ ಕೆಲಸ ಮಾಡುತ್ತಿದ್ದವರಿಗೆ ಐಪಿಎಲ್ ತಂಡಗಳ ಜೆರ್ಸಿ ತೊಡಿಸಿ, ಒಂದು ಪಂದ್ಯಕ್ಕೆ 400 ರೂ. ಕೂಲಿ ನೀಡಿ ಪಂದ್ಯವನ್ನು ನಡೆಸಲಾಗುತ್ತಿತ್ತು. ಇದನ್ನು ಮತ್ತಷ್ಟು ನೈಜ್ಯಗೊಳಿಸಲು ಇಂಟರ್ನೆಟ್‌ನಿಂದ ಅಭಿಮಾನಿಗಳು ಘೋಷಣೆ ಕೂಗುವುದು, ಚಪ್ಪಾಳೆ ತಟ್ಟುವ ಆಡಿಯೋವನ್ನು ಕೂಡ ಡೌನ್ಲೋಡ್ ಮಾಡಿದ್ದರು.
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ (IPL). ವಿಶ್ವ ಶ್ರೇಷ್ಠ ಕ್ರಿಕೆಟಿಗರು ಇದರಲ್ಲಿ ಕಣಕ್ಕಿಳಿಯುತ್ತಾರೆ. ಹೀಗಾಗಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಐಪಿಎಲ್ ವೀಕ್ಷಣೆಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ನಕಲಿ ಐಪಿಎಲ್ (Fake IPL) ಟೂರ್ನಿಯನ್ನು ನಡೆಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ಗುಜರಾತ್ನಲ್ಲಿ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮೇಲೆ ಬೆಟ್ಟಿಂಗ್ ನಡೆಸುವ ರಷ್ಯಾದ ಬುಕಿಗಳಿಗೆ ಮೋಸ ಮಾಡಲು ಗುಜರಾತ್‌ನ (Gujarat) ಗದ್ದೆಯಲ್ಲಿ ನಕಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಿದ್ದರು. ಇದರಿಂದ ಲಕ್ಷಾಂತರ ರೂಪಾಯಿಗಳನ್ನೂ ಗಳಿಸಿದ್ದರು. ಆದರೀಗ ಇವರು ಪೊಲೀಸರ ಅತಿಥಿಯಾಗಿದ್ದಾರೆ.
ಗದ್ದೆ ಕೆಲಸ ಮಾಡುತ್ತಿದ್ದವರಿಗೆ ಐಪಿಎಲ್ ತಂಡಗಳ ಜೆರ್ಸಿ ತೊಡಿಸಿ, ಒಂದು ಪಂದ್ಯಕ್ಕೆ 400 ರೂ. ಕೂಲಿ ನೀಡಿ ಪಂದ್ಯವನ್ನು ನಡೆಸಲಾಗುತ್ತಿತ್ತು. ಇದನ್ನು ಮತ್ತಷ್ಟು ನೈಜ್ಯಗೊಳಿಸಲು ಇಂಟರ್ನೆಟ್‌ನಿಂದ ಅಭಿಮಾನಿಗಳು ಘೋಷಣೆ ಕೂಗುವುದು, ಚಪ್ಪಾಳೆ ತಟ್ಟುವ ಆಡಿಯೋವನ್ನು ಕೂಡ ಡೌನ್ಲೋಡ್ ಮಾಡಿದ್ದರು. ಇಷ್ಟೇ ಅಲ್ಲದೆ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆಯ ನಕಲಿ ಧ್ವನಿಯಲ್ಲಿ ಕಾಮೆಂಟರಿ ಹೇಳಿಸಿ ಯೂಟ್ಯೂಬ್‌ನಲ್ಲಿ ಲೈವ್ ಪ್ರಸಾರ ಕೂಡ ಮಾಡಿದ್ದಾರೆ.
ಇದನ್ನು ಗಮನಿಸಿದ ರಷ್ಯಾದ ವಿವಿಧ ನಗರಗಳ ಬುಕಿಗಳು ಭಾರತದಲ್ಲಿ ನಿಜವಾಗಿಯೂ ಐಪಿಎಲ್ ಪಂದ್ಯಗಳು ನಡೆಯುತ್ತಿವೆ ಎಂದು ಭಾವಿಸಿ ಬೆಟ್ ಕಟ್ಟಿದ್ದಾರೆ. ಅಚ್ಚರಿ ಎಂದರೆ ಈ ನಕಲಿ ಐಪಿಎಲ್ ಪಂದ್ಯಾವಳಿ ನಾಕೌಟ್ ಕ್ವಾರ್ಟರ್‌ಫೈನಲ್ ಹಂತಕ್ಕೊರಗೆ ಬಂದು ನಿಂತಿದೆ. ಆಯೋಜಕರು 3 ಲಕ್ಷ ರೂ. ಗಿಂತ ಅಧಿಕ ಹಣವನ್ನು ರಷ್ಯಾದ ರೂಬಲ್‌ನಲ್ಲಿ ಗಳಿಸಿದ ವೇಳೆ ಪೊಲೀಸರು ದಾಳಿ ನಡೆಸಿದ ಸಂದರ್ಭ ನಕಲಿ ಐಪಿಎಲ್ ಆಟ ಬೆಳಕಿಗೆ ಬಂದಿದೆ.
ಈ ಎಲ್ಲ ಪ್ಲಾನಿನ ಸೂತ್ರದಾರನ ಹೆಸರು ಶೋಯೆಬ್ ದಾವಡಾ. ಕೆಲ ತಿಂಗಳ ಕಾಲ ರಷ್ಯಾದ ಪಬ್ ಒಂದರಲ್ಲಿ ಕೆಲಸ ಮಾಡಿದ್ದ ಈತ ಅಲ್ಲಿನ ಬೆಟ್ಟಿಂಗ್ ದಂಧೆಯನ್ನು ನೋಡಿಕೊಂಡು ಬಂದು ಇಲ್ಲಿ ಪ್ರಯೋಗ ಮಾಡಿದ್ದಾನೆ. 21 ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು, ಅವರಿಗೆ ಚೆನ್ನೈ ಸೂಪರ್‌ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ಆಟಗಾರರ ಜೆರ್ಸಿಗಳನ್ನು ತೊಡಿಸಿ ಆಟ ಆಡಿಸುತ್ತಿದ್ದ. ಇದಿಷ್ಟೇ ಅಲ್ಲದೆ ಈ ಪಂದ್ಯಗಳನ್ನು ನೇರ ಪ್ರಸಾರ ಮಾಡಲು ಐದು ಎಚ್‌ಡಿ ಕ್ಯಾಮೆರಾಗಳನ್ನು ಬಳಸುತ್ತಿದ್ದ. ಯೂಟ್ಯೂಬ್‌ನಲ್ಲಿ ಲೈವ್‌ಸ್ಟ್ರೀಮ್ ಕೂಡ ಆಗುತ್ತಿತ್ತು. ಬೆಟ್ಟಿಂಗ್‌ನಿಂದ ಈವರೆಗೆ ಶೋಯೆಬ್ ಗ್ಯಾಂಗ್‌ಗೆ ಟೆಲಿಗ್ರಾಂ ಆ್ಯಪ್ ಮೂಲಕ 3.21 ಲಕ್ಷ ರು. ಹಣ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.
Published On - 1:13 pm, Tue, 12 July 22