India Playing XI vs ENG: ಕಣಕ್ಕಿಳಿಯಲ್ಲ ಕೊಹ್ಲಿ: ಭಾರತದ ಪ್ಲೇಯಿಂಗ್ XI ನಲ್ಲಿ ಬಹುದೊಡ್ಡ ಬದಲಾವಣೆ
India Playing XI vs ENG 1st ODI: ವಿರಾಟ್ ಕೊಹ್ಲಿ ಇಂಜುರಿಗೆ ತುತ್ತಾಗಿದ್ದು ಇಂಗ್ಲೆಂಡ್ ವಿರುದ್ಧದ ಮೊದಲ ಮೊದಲ ಏಕದಿನದಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾದ್ರೆ ಇಂದಿನ ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನ ನೋಡೋಣ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಟಿ20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ಟೀಮ್ ಇಂಡಿಯಾ ಮತ್ತೊಂದು ಗೆಲುವು ಎದುರು ನೋಡುತ್ತಿದ್ದರೆ, ಇತ್ತ ಆಂಗ್ಲರು ಏಕದಿನದಲ್ಲಿ ಕಮ್ಬ್ಯಾಕ್ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಚೊಚ್ಚಲ ನಾಯಕತ್ವದಲ್ಲಿ ಜೋಸ್ ಬಟ್ಲರ್ಗೆ ಇದೊಂದು ಅಗ್ನಿಪರೀಕ್ಷೆಯಾಗಿದೆ. ಉಭಯ ತಂಡಗಳು ಬ್ಯಾಟಿಂಗ್ನಲ್ಲಿ ಬಲಿಷ್ಠ ಆಗಿರುವುದರಿಂದ ರನ್ ಮಳೆ ನಿರೀಕ್ಷಿಸಲಾಗಿದೆ. ಆದರೆ, ರೋಹಿತ್ (Rohit Sharma) ಪಡೆಗೆ ಪಂದ್ಯ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗ ಆಘಾತ ಉಂಟಾಯಿತು. ತಂಡದ ಪ್ರಮುಖ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಇಂಜುರಿಗೆ ತುತ್ತಾಗಿದ್ದು ಮೊದಲ ಏಕದಿನದಲ್ಲಿ ಆಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಹೌದು, ತೊಡೆಸಂದು ನೋವಿನಿಂದ ಬಳಲುತ್ತಿರುವ ಕಾರಣ ಕೊಹ್ಲಿ ಅಲಭ್ಯತೆ ಭಾರತಕ್ಕೆ ದೊಡ್ಡ ಆಘಾತವಾಗಿದೆ. ಕೊಹ್ಲಿ ಗಾಯದ ಬಗ್ಗೆ ಹೆಚ್ಚಿನ ವಿವರಗಳು ಖಚಿತವಾಗಿಲ್ಲ. ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ ನಾಟಿಂಗ್‌ಹ್ಯಾಮ್‌ನಿಂದ ಲಂಡನ್‌ಗೆ ಬಂದ ಟೀಮ್ ಬಸ್‌ನಲ್ಲಿ ಕೂಡ ವಿರಾಟ್ ಬಂದಿಲ್ಲ. ವೈದ್ಯಕೀಯ ತಪಾಸಣೆಯು ಇದರ ಹಿಂದಿನ ಒಂದು ಕಾರಣವಾಗಿರಬಹುದು ಎನ್ನಲಾಗಿದೆ.
ವಿರಾಟ್ ಆಡದಿರುವುದು ಕೇವಲ ಮ್ಯಾನೇಜ್ಮೆಂಟ್ಗೆ ಮಾತ್ರವಲ್ಲದೆ ಸ್ವತಃ ಕೊಹ್ಲಿಗೆನೇ ಹಿನ್ನಡೆಯಾಗಿದೆ. ಯಾಕೆಂದರೆ ಸತತ ಕಳಪೆ ಫಾರ್ಮ್ನಿಂದ ತತ್ತರಿಸಿರುವ ಕೊಹ್ಲಿಗೆ ಒಂದೊಳ್ಳೆ ಇನ್ನಿಂಗ್ಸ್ನ ಅಗತ್ಯವಿದೆ. ಈಗಾಗಲೇ ಕೊಹ್ಲಿಯನ್ನು ತಂಡದಿಂದ ಕೈಬಿಡುವಂತೆ ಒತ್ತಡ ಕೂಡ ಹೆಚ್ಚುತ್ತಿದೆ. ಹೀಗಿರುವಾಗ ಇಂಜುರಿಗೆ ತುತ್ತಾಗಿರುವುದು ತಂಡದ ಮೇಲೂ ಪರಿಣಾಮ ಬಿದ್ದರೆ ಅಚ್ಚರಿ ಪಡಬೇಕಿಲ್ಲ. ಇದರ ನಡುವೆ ಕೊಹ್ಲಿ ಜಾಗದಲ್ಲಿ ಯಾವ ಆಟಗಾರನಿಗೆ ಸ್ಥಾನ ನೀಡಬೇಕು ಎಂಬ ಗೊಂದಲ ಕೂಡ ಟೀಮ್ ಇಂಡಿಯಾಗೆ ಎದುರಾಗಿದೆ. ಹಾಗಾದ್ರೆ ಇಂದಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನ ನೋಡೋಣ.
ಬಹಳ ಸಮಯದ ನಂತರ ಶಿಖರ್ ಧವನ್ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇವರು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಕೊಹ್ಲಿ ಹೊರಗುಳಿದರೆ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ನಡುವೆ ಪೈಪೋಟಿ ಏರ್ಪಡಲಿದೆ. ಸೂರ್ಯಕುಮಾರ್ ಯಾದವ್ ಕೂಡ ತಂಡದಲ್ಲಿದ್ದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ನಂತರದ ಸ್ಥಾನದಲ್ಲಿ ಆಡಲಿದ್ದಾರೆ.
ಟೀಮ್ ಇಂಡಿಯಾದ ಬೌಲಿಂಗ್ ಆಯ್ಕೆ ಕೊಂಚ ಕಷ್ಟವಾಗಿದೆ. ಮತ್ತೊಬ್ಬ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಆಡಿಸಬೇಕೊ ಅಥವಾ ಪ್ರಸಿದ್ಧ್ ಕೃಷ್ಣ ಆಯ್ಕೆ ಮಾಡುತ್ತಾರೊ ನೋಡಬೇಕಿದೆ. ಉಳಿದಂತೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಯುಜ್ವೇಂದ್ರ ಚಹಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನ.
ಭಾರತದ ಸಂಭಾವ್ಯ ಪ್ಲೇಯಿಂಗ್ XI:
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್/ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್.
Published On - 9:35 am, Tue, 12 July 22